Advertisement

2012ರ ಚುನಾವಣೆ ಸಂದರ್ಭ ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ ಸಂಸದೆಗೆ 6 ತಿಂಗಳ ಜೈಲು ಶಿಕ್ಷೆ

10:03 AM Feb 03, 2024 | Team Udayavani |

ನವದೆಹಲಿ: 2012 ರ ಯುಪಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ ಸಂಸದೆ ರೀಟಾ ಬಹುಗುಣ ಜೋಶಿ ಅವರಿಗೆ ಶುಕ್ರವಾರ ಲಕ್ನೋ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ಮತ್ತು 1,100 ರೂಪಾಯಿ ದಂಡ ವಿಧಿಸಿದೆ.

Advertisement

ಸಂಸದ-ಶಾಸಕ ನ್ಯಾಯಾಲಯದ ವಿಶೇಷ ಹೆಚ್ಚುವರಿ ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಅಂಬರೀಶ್ ಕುಮಾರ್ ಶ್ರೀವಾಸ್ತವ ಅವರು, ಪ್ರಯಾಗ್‌ರಾಜ್‌ನ ಹಾಲಿ ಬಿಜೆಪಿ ಸಂಸದೆ ಜೋಶಿ ಅವರು ಕಾಂಗ್ರೆಸ್ ಪಕ್ಷದ ಪರವಾಗಿ (ಆ ಸಮಯದಲ್ಲಿ ಅವರು ಕಾಂಗ್ರೆಸ್‌ನಲ್ಲಿದ್ದರು) ಸಂಹಿತೆ ಉಲ್ಲಂಘಿಸಿ ಸಭೆ ನಡೆಸಿದ್ದಕ್ಕಾಗಿ ತಪ್ಪಿತಸ್ಥರೆಂದು ತೀರ್ಪು ನೀಡಿದ್ದಾರೆ.

ಫೆಬ್ರವರಿ 17, 2012 ರಂದು ಸಂಜೆ 6.50 ರ ಸುಮಾರಿಗೆ ರೀಟಾ ಬಹುಗುಣ ಜೋಶಿ ಅವರು ಲಕ್ನೋದ ಕ್ಯಾಂಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೃಷ್ಣ ನಗರದ ಬಜರಂಗನಗರ ಪ್ರದೇಶದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಪ್ರಚಾರ ನಡೆಸುತ್ತಿದ್ದರು ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತ್ತು. ಪ್ರಚಾರದ ಸಮಯ ಮುಗಿದ ನಂತರವೂ ಜೋಶಿ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. ಅವರು ಈ ಚುನಾವಣೆಯಲ್ಲಿ ಲಕ್ನೋ ಕ್ಯಾಂಟ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದರು.

ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು, ಈ ಕುರಿತು ಸ್ಟ್ಯಾಟಿಕ್ ಸರ್ವೆಲೆನ್ಸ್ ಮ್ಯಾಜಿಸ್ಟ್ರೇಟ್ ಮುಖೇಶ್ ಚತುರ್ವೇದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ರೀಟಾ ಬಹುಗುಣ ಜೋಶಿ ಸುಮಾರು 50 ಜನರೊಂದಿಗೆ ಭಜರಂಗನಗರದಲ್ಲಿ ಸಭೆ ನಡೆಸುತ್ತಿರುವುದನ್ನು ಕಂಡು ಕ್ಯಾಮೆರಾದಲ್ಲಿ ದಾಖಲಿಸಿದ್ದಾರೆ. ಈ ಸಂಬಂಧ ಚತುರ್ವೇದಿ ಕೃಷ್ಣನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸ್ ತನಿಖೆಯ ನಂತರ, ಅದೇ ವರ್ಷ ಸೆಪ್ಟೆಂಬರ್ 12 ರಂದು ನ್ಯಾಯಾಲಯಕ್ಕೆ ಜೋಶಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಯಿತು. 20 ಫೆಬ್ರವರಿ 2021 ರಂದು ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಅಡಿಯಲ್ಲಿ ಅವರ ವಿರುದ್ಧ ಆರೋಪಗಳನ್ನು ರೂಪಿಸಿತು.

ಶಿಕ್ಷೆಯನ್ನು ಘೋಷಿಸಿದ ನಂತರ, ನ್ಯಾಯಾಲಯವು ಜೋಶಿಯನ್ನು ಕಸ್ಟಡಿಗೆ ತೆಗೆದುಕೊಂಡಿತು. ನಂತರ 20,000 ರೂ.ಗಳ ಬಾಂಡ್ ಮತ್ತು ಶ್ಯೂರಿಟಿ ಮೊತ್ತವನ್ನು ಠೇವಣಿ ಮಾಡಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ರೀಟಾ ಬಹುಗುಣ ಜೋಶಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ರೀಟಾ ಬಹುಗುಣ ಜೋಶಿ ಅವರು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಎಚ್‌ಎನ್ ಬಹುಗುಣ ಅವರ ಪುತ್ರಿಯಾಗಿದ್ದಾರೆ. ಅವರು ಮಹಿಳಾ ರಾಷ್ಟ್ರೀಯ ಮಂಡಳಿಯ ಉಪಾಧ್ಯಕ್ಷೆ ಮತ್ತು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಅವರು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ.

Advertisement

ಇದನ್ನೂ ಓದಿ: Military Personnel: ಮೇ.10 ರೊಳಗೆ ಮಾಲ್ಡೀವ್ಸ್ ನಿಂದ ಎಲ್ಲ ಭಾರತೀಯ ಸೇನೆ ವಾಪಸ್‌…

Advertisement

Udayavani is now on Telegram. Click here to join our channel and stay updated with the latest news.

Next