Advertisement

ತುಂಬೆ ಡ್ಯಾಂನಲ್ಲಿ 6 ಮೀ. ನೀರು ಸಂಗ್ರಹ; 67.51 ಎಕರೆ ಜಲಾವೃತ

10:44 PM Oct 13, 2020 | mahesh |

ಬಂಟ್ವಾಳ: ಮಂಗಳೂರು ನಗರಕ್ಕೆ ನೀರಿನ ಕೊರತೆ ಎದುರಾಗುವ ದೃಷ್ಟಿಯಿಂದ ಮಂಗಳೂರು ಮಹಾನಗರ ಪಾಲಿಕೆಯು ಪ್ರಾರಂಭದಲ್ಲಿ ತುಂಬೆ ಡ್ಯಾಂನ್ನು 4-5 ಮೀಟರ್‌ ಬಳಿಕ 5-6 ಮೀಟರ್‌ ಏರಿಕೆ ಮಾಡಿತ್ತು. ಇದರಿಂದ ಬಂಟ್ವಾಳ ತಾಲೂಕಿನ 67.51 ಎಕರೆ ಕೃಷಿ ಭೂಮಿ ಜಲಾವೃತಗೊಂಡಿದ್ದು, ಪೂರ್ಣ ಪ್ರಮಾಣದ ಪರಿಹಾರ ವಿತರಣೆಯಾಗಿಲ್ಲ ಎಂದು ರೈತರು ಆರೋಪಿಸಿದರೆ, ದಾಖಲೆ ನೀಡಿದ ಎಲ್ಲರಿಗೂ ಪರಿಹಾರ ನೀಡಲಾಗಿದೆ ಎಂದು ಪಾಲಿಕೆ ಹೇಳುತ್ತಿದೆ.

Advertisement

ಡ್ಯಾಂನಲ್ಲಿ 6 ಮೀ. ನೀರು ನಿಲ್ಲಿಸಿದ ಪರಿಣಾಮ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು, ಪಾಣೆಮಂ ಗಳೂರು, ಬಿ.ಮೂಡ ಹಾಗೂ ಕಳ್ಳಿಗೆ ಹೀಗೆ 4 ಗ್ರಾಮಗಳ ಭೂ ಪ್ರದೇಶ ಮುಳುಗಡೆಯಾಗಿದೆ. ಎರಡು ಹಂತದ ಮುಳುಗಡೆಗಾಗಿ ಒಟ್ಟು 22.3 ಕೋ.ರೂ. ಪರಿಹಾರ ಮೊತ್ತ ಬಿಡುಗಡೆಗೊಂಡಿದ್ದು, 11.3 ಕೋ.ರೂ. ವಿತರಿಸಲಾಗಿದೆ. ಒಟ್ಟು ಮುಳುಗಡೆ ಜಮೀನಿನಲ್ಲಿ 36.1 ಎಕರೆ ಪ್ರದೇಶದ ನೋಂದಣಿ(ರಿಜಿಸ್ಟ್ರೇಶನ್‌) ಪ್ರಕ್ರಿಯೆ ಪೂರ್ಣಗೊಂಡಿದ್ದು, ಪರಿಹಾರ ವಿತರಣೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಆದರೆ ಹೋರಾಟ ಸಮಿತಿ ಪ್ರಕಾರ ದಾಖಲೆ ನೀಡಿರುವ ಕೆಲವರಿಗೆ ಪರಿಹಾರ ವಿತರಣೆಯಾಗಿಲ್ಲ, ಇನ್ನು ಕೆಲವಡೆ ಮುಳುಗಡೆಯಾದರೂ ಪರಿಹಾರಕ್ಕೆ ಸರ್ವೇ ಕಾರ್ಯವನ್ನೂ ಮಾಡಿಲ್ಲ ಎಂದು ಆರೋಪಿಸಿದೆ. ಇಲ್ಲಿ ಖರೀದಿ ಪ್ರಕ್ರಿಯೆ ನಡೆಸಿಯೇ ಪರಿಹಾರ ವಿತರಣೆಯಾಗುವುದರಿಂದ ನಕ್ಷೆಗಳು ಸರಿಯಿಲ್ಲದೆ, ಅಪ್ರಾಪ್ತ ವಯಸ್ಸಿನ ಹಕ್ಕು ಇದ್ದರೆ (ಮೈನರ್‌ ರೈಟ್ಸ್‌), ಹೆಸರುಗಳಲ್ಲಿ ವ್ಯತ್ಯಾಸವಿದ್ದರೆ ವಿಳಂಬವಾಗುತ್ತಿದೆ ಎಂಬ ಕಾರಣವೂ ಇದೆ.

4-5 ಮೀ. ನೀರು ಸಂಗ್ರಹ
ತುಂಬೆ ಡ್ಯಾಂನಲ್ಲಿ 4 ರಿಂದ 5 ಮೀ.ನೀರು ನಿಲ್ಲಿಸಿದಾಗ ಒಟ್ಟು 20.53 ಎಕರೆ ಕೃಷಿ ಭೂಮಿ ಜಲಾವೃತವಾಗಿದ್ದು, 28 ಮಂದಿ ಪಹಣಿದಾರರ (38 ಸರ್ವೇ ನಂ.ಗಳು) ಜಮೀನು ಮುಳುಗಡೆಯಾಗಿತ್ತು. ಅದಕ್ಕೆ ಪರಿಹಾರ ಮೊತ್ತವಾಗಿ 7.5 ಕೋ.ರೂ. ಪರಿಹಾರ ಬಿಡುಗಡೆ ಮಾಡಿ, 13.1 ಎಕರೆ ಪ್ರದೇಶದ ನೋಂದಣಿ (ರಿಜಿಸ್ಟ್ರೆಶನ್‌) ಮಾಡಿ 4.9 ಕೋ.ರೂ. ವಿತರಣೆ ಮಾಡಲಾಗಿದೆ. ಇವರಲ್ಲಿ 13 ಮಂದಿ ದಾಖಲೆ ನೀಡುವುದಕ್ಕೆ ಬಾಕಿ ಇದ್ದು, 2.6 ಕೋ.ರೂ. ಪರಿಹಾರ ವಿತರಣೆಗೆ ಬಾಕಿ ಇದೆ.

5-6 ಮೀ. ನೀರು ಸಂಗ್ರಹ
ಡ್ಯಾಂನಲ್ಲಿ 5ರಿಂದ 6 ಮೀ. ನೀರು ನಿಲ್ಲಿಸಿದಾಗ 46.98 ಎಕರೆ ಕೃಷಿ ಭೂಮಿ ಜಲಾವೃತ್ತವಾಗಿದ್ದು, 64 ಪಹಣಿದಾರರ (95 ಸರ್ವೇ ನಂ.ಗಳು) ಜಮೀನು ಮುಳುಗಡೆಯಾಗಿತ್ತು.

Advertisement

ಇದರ ಪರಿಹಾರಕ್ಕಾಗಿ 14.8 ಕೋ.ರೂ. ಬಿಡುಗಡೆ ಮಾಡಲಾಗಿದ್ದು, 32 ಮಂದಿಯ 23 ಎಕರೆ ಪ್ರದೇಶ ಈಗಾಗಲೇ ನೋಂದಣಿ ಪೂರ್ಣಗೊಂಡಿದೆ. 6.4 ಕೋ.ರೂ. ಈಗಾಗಲೇ ವಿತರಿಸಲಾಗಿದೆ. 32 ಮಂದಿ ದಾಖಲೆ ನೀಡುವುದಕ್ಕೆ ಬಾಕಿ ಇದ್ದಾರೆ. ಇವರಲ್ಲಿ 4 ಮಂದಿ ದಾಖಲೆ ನೀಡಿದ್ದು, ಅವರಿಗೆ ವಾರದೊಳಗೆ ಪರಿಹಾರ ವಿತರಣೆಯಾಗುತ್ತದೆ. ಪ್ರಸ್ತುತ 8.4 ಕೋ.ರೂ.ವಿತರಣೆಗೆ ಬಾಕಿ ಇದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಒರತೆ ಪ್ರದೇಶಕ್ಕೆ ಪರಿಹಾರ
ಹೋರಾಟ ಸಮಿತಿಯು ಮುಳುಗಡೆ ಪ್ರದೇಶದ ಜತೆಗೆ ಒರತೆ ಪ್ರದೇಶಕ್ಕೂ ಪರಿಹಾರ ನೀಡಬೇಕು ಎಂದು ಒತ್ತಾಯಿ ಸುತ್ತಿದ್ದು, ಕೇಂದ್ರ ಜಲ ಮಂಡಳಿಯು ಡ್ಯಾಂಗಳಿಂದಾಗಿ ಒರತೆ ಕಂಡುಬರುವ ಭೂಮಿಗೂ ಪರಿಹಾರ ನೀಡಬೇಕು ಎಂದು ನಿರ್ದೇಶನ ನೀಡಿದೆ ಎಂದು ಹೇಳುತ್ತಿದೆ. ಇದಕ್ಕಾಗಿ ಈ ಹಿಂದೆ ಡಿಸಿಯಾಗಿದ್ದ ಎ.ಬಿ.ಇಬ್ರಾಹಿಂ ಮಲಾಯಿಬೆಟ್ಟು ಪ್ರದೇಶಕ್ಕೆ ಭೇಟಿ ನೀಡಿ ಒರತೆ ಪ್ರದೇಶದ ಪರಿಹಾರದ ಕುರಿತು ರೈತರ ಸಭೆ ನಡೆಸಿದ್ದರು ಎಂದು ಹೋರಾಟ ಸಮಿತಿ ಹೇಳುತ್ತಿದೆ.

ಕೆಲವೆಡೆ ಸರ್ವೇಯೂ ಆಗಿಲ್ಲ
ನಮ್ಮ ಪ್ರಕಾರ ಮಂಗಳೂರು ಮಹಾನಗರ ಪಾಲಿಕೆಯು 19 ಮಂದಿಗೆ ಪರಿಹಾರ ನೀಡಲು ಬಾಕಿ ಇದೆ. ಕೆಲವು ರೈತರ ಜಮೀನು ಮುಳುಗಡೆಯಾಗಿದ್ದು, ಅದರ ಸರ್ವೇ ಕಾರ್ಯವೂ ನಡೆದಿಲ್ಲ. ಜತೆಗೆ ಕೇಂದ್ರ ಜಲ ಮಂಡಳಿಯ ನಿರ್ದೇಶನದ ಪ್ರಕಾರ ಒರತೆ ಪ್ರದೇಶಕ್ಕೂ ಪರಿಹಾರ ನೀಡಬೇಕು.
-ಎಂ.ಸುಬ್ರಹಣ್ಯ ಭಟ್‌ ಅಧ್ಯಕ್ಷರು, ತುಂಬೆ ಡ್ಯಾಂ ಸಂತ್ರಸ್ತರ ಹೋರಾಟ ಸಮಿತಿ.

ವಾರದೊಳಗೆ ಪರಿಹಾರ
ದಾಖಲೆ ನೀಡಿರುವ ಎಲ್ಲ ರೈತರಿಗೂ ಪರಿಹಾರ ನೀಡಲಾಗಿದ್ದು, ದಾಖಲೆ ನೀಡದವರು, ಜಮೀನಿನಲ್ಲಿ ತಕರಾರು ಇರುವವರಿಗೆ ಪರಿಹಾರ ನೀಡುವುದು ಸಾಧ್ಯವಿಲ್ಲ. ಪ್ರಸ್ತುತ 4 ಮಂದಿ ದಾಖಲೆ ನೀಡಿದ್ದು, ಅವರಿಗೆ ವಾರದೊಳಗೆ ಪರಿಹಾರವನ್ನು ವಿತರಿಸುತ್ತೇವೆ. ದಾಖಲೆ ನೀಡಿದರೆ ಶೀಘ್ರದಲ್ಲಿ ಪರಿಹಾರ ಮೊತ್ತ ನೀಡಲು ಸಾಧ್ಯವಾಗುತ್ತದೆ.
-ಬಿನೋಯ್‌, ವಿಶೇಷ ಭೂ ಸ್ವಾಧೀನಾಧಿಕಾರಿ ಮಹಾನಗರಪಾಲಿಕೆ, ಮಂಗಳೂರು.

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next