Advertisement

ಆಂಧ್ರ ಸಿಎಂ ಪರಿಹಾರ ನಿಧಿ ದೋಚಲು ಯತ್ನ: ದ.ಕ. ಜಿಲ್ಲೆಯ 6 ಮಂದಿಯ ಬಂಧನ

05:09 PM Oct 07, 2020 | sudhir |

ಮಂಗಳೂರು: ಆಂಧ್ರಪ್ರದೇಶದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೂರಾರು ಕೋಟಿ ರೂಪಾಯಿ ಲಪಟಾಯಿಸಲು ಯತ್ನಿಸಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ 6 ಮಂದಿಯನ್ನು ಆಂಧ್ರಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

Advertisement

ಮೂಡುಬಿದಿರೆಯ ಯೋಗೀಶ್‌ ಆಚಾರ್ಯ (40), ಕಾಂತಾವರದ ಉದಯ ಶೆಟ್ಟಿ (35), ಮಂಗಳೂರಿನ ಬೃಜೇಶ್‌ ರೈ (35), ಬೆಳ್ತಂಗಡಿಯ ಗಂಗಾಧರ ಸುವರ್ಣ (45) ಸೇರಿದಂತೆ 6 ಮಂದಿಯನ್ನು ಬಂಧಿಸಲಾಗಿದೆ.

ಆಂಧ್ರ ಸಿಎಂ ಪರಿಹಾರ ನಿಧಿಯಿಂದ ಒಟ್ಟು 117 ಕೋ.ರೂ.ಗಳನ್ನು ನಕಲಿ ಸಹಿ ಬಳಸಿ ಲಪಟಾಯಿಸಲು ಯತ್ನ ನಡೆದಿದ್ದು, ಈ ಪೈಕಿ 52 ಕೋ.ರೂ. ವಂಚನೆ ಯತ್ನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 6 ಜನ ಆರೋಪಿಗಳು ಭಾಗಿಯಾಗಿದ್ದರು ಎನ್ನಲಾಗಿದೆ.

ಆಂಧ್ರ ಸಿಎಂ ಪರಿಹಾರ ನಿಧಿಗೆ ವಂಚನೆ ಆಗಿರುವ ಬಗ್ಗೆ ಆಂಧ್ರ ಸರಕಾರದ ಕಂದಾಯ ಇಲಾಖೆ ಕಾರ್ಯದರ್ಶಿ ಪಿ. ಮುರಳಿ ಕೃಷ್ಣ ರಾವ್‌ ದೂರು ನೀಡಿದ್ದು ಈ ಬಗ್ಗೆ ಆಂಧ್ರದ ತುಲ್ಲೂರು ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ತನಿಖೆ ನಡೆಸಿದ್ದರು.

2019, 2020ರಲ್ಲಿ ನೀಡಿದ್ದ ಚೆಕ್‌, ಮಂಜೂ ರಾದ ಹಣದ ತನಿಖೆ ನಡೆಸಿದಾಗ ವಂಚನೆ ನಡೆದಿರುವುದು ಬೆಳಕಿಗೆ ಬಂದಿತು. ಈ ಬಗ್ಗೆ ಮುಖ್ಯ ಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಸಮಗ್ರ ತನಿಖೆಗೆ ಆದೇಶ ಮಾಡಿದ್ದರು. ಅದರಂತೆ ಒಟ್ಟು 117 ಕೋ.ರೂ. ವಂಚನೆ ಆಗಿರುವುದು ಗೊತ್ತಾಗಿತ್ತು.

Advertisement

ಬ್ಯಾಂಕ್‌ ಅಧಿಕಾರಿಗೆ ಬಂತು ಸಂಶಯ
ಯೋಗೀಶ್‌ ಆಚಾರ್ಯ ಮೂಡುಬಿದಿರೆ ಎಸ್‌ಬಿಐಗೆ 52 ಕೋ.ರೂ. ಚೆಕ್‌ ನಗದೀಕರಣಕ್ಕೆ ಹಾಕಿದಾಗ ಬ್ಯಾಂಕಿನ ಅಧಿಕಾರಿಗೆ ಸಂಶಯ ಬಂದು ಆಂಧ್ರ ಸಿಎಂ ಪರಿಹಾರ ನಿಧಿಯ ಸಿಬಂದಿಯನ್ನು ಸಂಪರ್ಕಿಸಿದ್ದರು. ಆಗ ನಕಲಿ ಸಹಿ ಹಾಕಿ ಚೆಕ್‌ ಬಳಕೆ ಮಾಡಿರುವುದು ಗೊತ್ತಾಗಿ ಚೆಕ್‌ ತಡೆ ಹಿಡಿಯಲಾಗಿತ್ತು. ಬಳಿಕ ಆಂಧ್ರ ಎಸಿಬಿ ಪೊಲೀಸರು ಮೂಡುಬಿದಿರೆಗೆ ಆಗಮಿಸಿ ಯೋಗೀಶ್‌ ಆಚಾರ್ಯ ಮತ್ತು ಉದಯ ಶೆಟ್ಟಿಯನ್ನು ಬಂಧಿಸಿ ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಾಡಿ ವಾರಂಟ್‌ನಲ್ಲಿ ಆಂಧ್ರಕ್ಕೆ ಕರೆದೊಯ್ದಿದ್ದಾರೆ. ಯೋಗೀಶ್‌ ಆಚಾರ್ಯ ಮತ್ತು ಉದಯ ಶೆಟ್ಟಿ ಅವರು ಈ ಹಿಂದೆ ಮುಂಬಯಿಯಲ್ಲಿ ಇದ್ದು ಇತ್ತೀಚೆಗೆ ಊರಿಗೆ ಬಂದಿದ್ದರು ಎನ್ನಲಾಗಿದೆ.

ಹಲವು ರಾಜ್ಯಗಳಿಗೆ ವಿಸ್ತರಿತ ಜಾಲ
ಬೇನಾಮಿ ದಾಖಲೆ, ಚೆಕ್‌ಗಳನ್ನು ಬಳಸಿಕೊಂಡು ವಂಚನೆಗೆ ಯತ್ನಿಸಿರುವ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಈಗಾಗಲೇ ರಾಜ್ಯದ ಇತರ ಕೆಲವೆಡೆ ಹಾಗೂ ಹೊಸದಿಲ್ಲಿ, ಮುಂಬಯಿ, ಕೋಲ್ಕತಾಗಳಲ್ಲಿಯೂ ತನಿಖೆ ನಡೆಸಿದ್ದಾರೆ. ಪ್ರಕರಣದಲ್ಲಿ ಪ್ರಭಾವಿಗಳು, ಇಲಾಖೆಯ ಉನ್ನತ ಮಟ್ಟದಲ್ಲಿ ಸಂಪರ್ಕ ಇರುವವರ ಕೈವಾಡದ ಶಂಕೆ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆಗೆ ಸರಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರ ಪೊಲೀಸರು ಒಂದು ತಿಂಗಳ ಹಿಂದೆ ಮೂಡುಬಿದಿರೆಗೆ ಬಂದು ಇಬ್ಬರನ್ನೂ ಕರೆದುಕೊಂಡು ಹೋಗಿದ್ದಾರೆ. ಆ ಬಳಿಕ ಅದರ ತನಿಖೆಯ ಬಗ್ಗೆ ನಮಗೆ ಮಾಹಿತಿ ಇಲ್ಲ. ಆಂಧ್ರದಲ್ಲಿ ಆಗಿರುವ ವಂಚನೆ ಪ್ರಕರಣದ ಕುರಿತು ನಮ್ಮಲ್ಲಿ ಯಾವುದೇ ಮಾಹಿತಿ ಇಲ್ಲ.
– ವಿಕಾಸ್‌ ಕುಮಾರ್‌,  ಪೊಲೀಸ್‌ ಕಮಿಷನರ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next