ಬೆಂಗಳೂರು/ಹುಬ್ಬಳ್ಳಿ: ರಾಜ್ಯದ ಕೆಲವೆಡೆ ಮಂಗಳವಾರ ಮಳೆಯಾಗಿದ್ದು, ಸಿಡಿಲಿಗೆ ಆರು ಮಂದಿ ಬಲಿಯಾಗಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ. ಈ ಮಧ್ಯೆ, ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ರಾಜ್ಯದ ಒಳನಾಡಿನ ಕೆಲವೆಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾಲ್ಕಿ ತಾಲೂಕಿನ ಸಿದ್ದೇಶ್ವರ ಸಮೀಪ ತಳವಾಡ ಗ್ರಾಮದ ರೈತ ಮಾದಪ್ಪಾ ಸಿದ್ದಪ್ಪಾ (57) ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಜತೆಗಿದ್ದ ಹೋರಿಯೂ ಅಸುನೀಗಿದೆ. ಹುಮನಾಬಾದ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ದಯಾನಂದ ಸಿದ್ರಾಮಪ್ಪ ಸಿರಶೆಟ್ಟಿ (43) ಸಿಡಿಲಿಗೆ ಬಲಿಯಾಗಿದ್ದು, ಮಾಣಿಕಪ್ಪ ಹಳ್ಳಿಖೇಡಕರ್, ಅನೀಲ ಕೆರೂರ್, ಜಗಪ್ಪ ಪಸಾರಗಿ, ಬಸವರಾಜ ಹುಡಗಿ ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಗುರುಮಠಕಲ್ ತಾಲೂಕಿನ ಮಾಧ್ವಾರ ಗ್ರಾಮದಲ್ಲಿ ಸಿಡಿಲು ಬಡಿದು ಮಾವ-ಅಳಿಯ ಮೃತಪಟ್ಟಿದ್ದಾರೆ. ಅಶೋಕ (33), ಚಂದ್ರಶೇಖರ (28) ಮೃತರು. ಜತೆಗಿದ್ದ ಸಾಬಣ್ಣ ಎಂಬುವರ ಸ್ಥಿತಿ ಗಂಭೀರವಾಗಿದ್ದು, ರಾಯಚೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿಯಲ್ಲಿ ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ಮಾಯಣ್ಣ (52) ಬಲಿಯಾಗಿದ್ದಾರೆ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕು ಹಲಕರ್ಟಿ ಗ್ರಾಮದ ದೊಡ್ಡಲಕ್ಷ್ಮಯ್ಯ (60) ಎಂಬುವರು ಕಲ್ಲುಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಬಳ್ಳಾರಿ, ಬೆಳಗಾವಿ, ಬಾಗಲಕೋಟೆ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹುಬ್ಬಳ್ಳಿ, ರಾಯಚೂರು, ಶಿವಮೊಗ್ಗ, ಯಾದಗಿರಿ ಸೇರಿ ರಾಜ್ಯದ ಇತರೆಡೆಯೂ ಆಲಿಕಲ್ಲು ಸಹಿತ ಮಳೆಯಾದ ವರದಿಯಾಗಿದೆ.
ಇಂದೂ ಭಾರೀ ಮಳೆ ಸಾಧ್ಯತೆ: ದಕ್ಷಿಣ ಒಳನಾಡಿನಲ್ಲಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಜತೆಗೆ, ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಮೇ 26ರವರೆಗೆ ಮಳೆ ಮುಂದುವರಿಯಲಿದೆ. ಮೇ 25 ಮತ್ತು 26 ರಂದು ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ಸೇರಿ ಕೆಲವೆಡೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಬಿಸಿಗಾಳಿ ಸಾಧ್ಯತೆ: ಕಳೆದ ಸೋಮವಾರ ಕೊಪ್ಪಳ, ಬೀದರ್, ರಾಯಚೂರು, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ 44 ಡಿ.ಸೆ.ಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗಿತ್ತು. ಇದರಿಂದ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.