Advertisement

ಮುಳುಗಿದ ಬದುಕು

11:21 AM Oct 24, 2019 | mahesh |

ಹುಬ್ಬಳ್ಳಿ: ಉತ್ತರ ಕರ್ನಾಟಕ, ಮಲೆನಾಡು ಹಾಗೂ ಮಧ್ಯ ಕರ್ನಾಟಕದಲ್ಲಿ ವರುಣಾಘಾತ ಮುಂದುವರಿದಿದ್ದು, ಮತ್ತೆ ಆರು ಮಂದಿ ಸಾವಿಗೀಡಾಗಿದ್ದಾರೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ, ತುಂಗಭದ್ರಾ, ವರದಾ, ವೇದಗಂಗಾ, ದೂಧಗಂಗಾ ನದಿ, ಬೆಣ್ಣಿ ಮತ್ತು ದೋಣಿ ಹಳ್ಳದ ಒಡಲು ಉಕ್ಕೇರಿದ್ದು, ತೀರ ಪ್ರದೇಶದ ಜನರ ಬದುಕನ್ನೇ ಆಪೋಶನ ತೆಗೆದುಕೊಂಡಿವೆ. ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ.

Advertisement

ಆಲಮಟ್ಟಿಯಿಂದ 2.50 ಲಕ್ಷ ಕ್ಯುಸೆಕ್‌, ನಾರಾಯಣ ಪುರದಿಂದ 2.57 ಲಕ್ಷ ಕ್ಯುಸೆಕ್‌, ಟಿ.ಬಿ ಡ್ಯಾಂನಿಂದ 1.75 ಲಕ್ಷ ಕ್ಯುಸೆಕ್‌, ನವಿಲುತೀರ್ಥ ಜಲಾಶಯದಿಂದ 8,700 ಕ್ಯುಸೆಕ್‌, ಮಹಾರಾಷ್ಟ್ರದ ರಾಜಾಪುರ ಬ್ಯಾರೇಜಿನಿಂದ 1.15 ಲಕ್ಷ ಕ್ಯುಸೆಕ್‌ ನೀರು ನದಿಗೆ ಬಿಡಲಾಗುತ್ತಿದ್ದು, ತೀರ ಪ್ರದೇಶ ದಲ್ಲಿ ಜಲಪ್ರಳಯವೇ ಉಂಟಾಗಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಗೆ ಜನ ಜೀವನ ನಲುಗಿ ಹೋಗಿದೆ. ಶಿವಮೊಗ್ಗದಲ್ಲಿ ಮಳೆ ಆರ್ಭಟ ಕೊಂಚ ಕಡಿಮೆಯಾಗಿದೆ.

ಇತಿಹಾಸ ಪ್ರಸಿದ್ಧ ಯಲ್ಲಮ್ಮದೇವಿ ದೇವಸ್ಥಾನದ ಆವರಣ ಭಾರೀ ಮಳೆಯಿಂದ ಜಲಾವೃತವಾಗಿದೆ. ಕೃಷ್ಣಾ ಮತ್ತು ಉಪನದಿಗಳ ಪ್ರವಾಹದಿಂದ ಚಿಕ್ಕೋಡಿ ಉಪವಿಭಾಗದಲ್ಲಿ ಆರು ಸೇತುವೆಗಳು ಜಲಾವೃತವಾಗಿ ಸಂಚಾರ ಕಡಿತಗೊಂಡಿದೆ. ಕೊಲ್ಲಾಪುರ ಜಿಲ್ಲೆ ಶಿರೋಳ ತಾಲೂಕಿನ ಸುಕ್ಷೇತ್ರ ನರಸಿಂಹವಾಡಿ ಶ್ರೀ ದತ್ತ ಮಂದಿರ ಇದೇ ವರ್ಷದಲ್ಲಿ ನಾಲ್ಕನೆ ಬಾರಿಗೆ ಮುಳುಗಡೆಯಾಗಿದೆ.

ಬಂಡೆ ಕುಸಿತ ಭೀತಿ
ಗೋಕಾಕ ಪಟ್ಟಣದಲ್ಲಿ ಧಾರಾಕಾರ ಮಳೆಗೆ ಮಲ್ಲಿಕಾರ್ಜುನ ಬೆಟ್ಟದಲ್ಲಿನ ದೊಡ್ಡ ಗಾತ್ರದ ಬಂಡೆಗಳು ಕುಸಿ ಯುವ ಭೀತಿ ಎದುರಾಗಿದೆ. ಇದರಿಂದ ಕೆಳಗಿನ ಪ್ರದೇಶ ದಲ್ಲಿ ಇರುವ ಜನರಿಗೆ ಆತಂಕ ಉಂಟಾಗಿದೆ. ಬಂಡೆ ಗಳನ್ನು ತೆರವುಗೊಳಿಸಲು ಎನ್‌ಡಿಆರ್‌ಎಫ್‌ ತಂಡವನ್ನು ಕರೆಸಲಾಗಿದೆ.

ಐಹೊಳೆ, ಪಟ್ಟದಕಲ್ಲು ಮುಳುಗಡೆ
ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳ ಅಬ್ಬರದಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಮೂರನೇ ಬಾರಿ ನೆರೆ ಬಂದಿದೆ. ಪಟ್ಟಣದಕಲ್ಲು , ಐಹೊಳೆಯ ಪಾರಂಪರಿಕ ದೇವಸ್ಥಾನಗಳಿಗೆ ನೀರು ನುಗ್ಗಿದೆ.

Advertisement

ಮಧ್ಯ ಕರ್ನಾಟಕದಲ್ಲೂ ಮಳೆ ಅಬ್ಬರ
ಚಿತ್ರದುರ್ಗ, ದಾವಣಗೆರೆ ಸಹಿತ ಮಧ್ಯ ಕರ್ನಾಟಕದಲ್ಲೂ ಭಾರೀ ಮಳೆಯಾಗುತ್ತಿದ್ದು, ಹೊಸದುರ್ಗ, ಚಿತ್ರದುರ್ಗ, ಹಿರಿಯೂರು ಮತ್ತು ಹೊಳಲ್ಕೆರೆ ತಾಲೂಕುಗಳು ತತ್ತರಿಸಿವೆ.
ಚಿಕ್ಕಮಗಳೂರು ಜಿಲ್ಲೆಯಿಂದ ಚಿತ್ರದುರ್ಗಕ್ಕೆ ಹರಿಯುವ ವೇದಾವತಿ ನದಿ ಮೈದುಂಬಿ ಹರಿಯುತ್ತಿದ್ದು, ವಾಣಿವಿಲಾಸ ಸಾಗರಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಚಿತ್ರದುರ್ಗ ತಾಲೂಕಿನ ಜಾನಕಲ್‌ ಬಳಿ ಕಾರೊಂದು ನೀರಿಗೆ ಸಿಲುಕಿ ಕೊಚ್ಚಿ ಹೋಗಿದೆ.

Advertisement

Udayavani is now on Telegram. Click here to join our channel and stay updated with the latest news.

Next