ಶ್ರೀನಗರ: ಜಮ್ಮು-ಕಾಶ್ಮೀರದ ಅನಂತ್ ನಾಗ್ ಮತ್ತು ಕುಲ್ಗಾಮ್ ಜಿಲ್ಲೆಯಲ್ಲಿ ತಡರಾತ್ರಿ ನಡೆದ ಭದ್ರತಾ ಪಡೆಯ ಕಾರ್ಯಾಚರಣೆಯ ಎನ್ ಕೌಂಟರ್ ನಲ್ಲಿ ಆರು ಮಂದಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರರು ಬಲಿಯಾಗಿರುವ ಘಟನೆ ಗುರುವಾರ(ಡಿಸೆಂಬರ್ 30) ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಕಿವೀಸ್ ದಿಗ್ಗಜ ರಾಸ್ ಟೇಲರ್
ಕಳೆದ 12ಗಂಟೆಗಳ ಕಾರ್ಯಾಚರಣೆಯಲ್ಲಿ ಇಬ್ಬರು ಪಾಕಿಸ್ತಾನಿ ಉಗ್ರರು ಸೇರಿದಂತೆ ಒಟ್ಟು ಆರು ಮಂದಿ ಜೈಶ್ ಉಗ್ರರು ಸಾವನ್ನಪ್ಪಿರುವುದಾಗಿ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಎರಡು ಎನ್ ಕೌಂಟರ್ ಪ್ರಕರಣಗಳಲ್ಲಿ ಒಂದು ಎಂ4, ಎರಡು ಎಕೆ ರೈಫಲ್ಸ್ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಅನಂತ್ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಎನ್ ಕೌಂಟರ್ ನಲ್ಲಿ ಮೂವರು ಜೈಶ್ ಉಗ್ರರು ಬಲಿಯಾಗಿದ್ದರು. ಕುಲ್ಗಾಮ್ ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಜೈಶ್ ಉಗ್ರರು ಹತ್ಯೆಗೀಡಾಗಿದ್ದಾರೆ ಎಂದು ವರದಿ ವಿವರಿಸಿದೆ.
ಇದೊಂದು ಬಹುದೊಡ್ಡ ಯಶಸ್ವಿ ಕಾರ್ಯಾಚರಣೆ ಎಂದಿರುವ ಐಜಿಪಿ ವಿಜಯ್ ಕುಮಾರ್, ಆರು ಮಂದಿ ಉಗ್ರರಲ್ಲಿ ಇಬ್ಬರು ಪಾಕಿಸ್ತಾನಿಯರು ಹಾಗೂ ಇಬ್ಬರು ಸ್ಥಳೀಯರು ಎಂದು ಗುರುತಿಸಲಾಗಿದ್ದು, ಉಳಿದ ಇಬ್ಬರ ಬಗ್ಗೆ ಇನ್ನಷ್ಟೇ ಗುರುತು ಪತ್ತೆ ಹಚ್ಚಬೇಕಾಗಿದೆ ಎಂದು ವಿಜಯ್ ಕುಮಾರ್ ತಿಳಿಸಿದ್ದಾರೆ.