ರಾಯಚೂರು: ರಿಮ್ಸ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ ರೈತನ ಮಗಳು ಆರು ಚಿನ್ನದ ಪದಕ ಪಡೆಯುವ ಮೂಲಕ ಗಮನ ಸೆಳೆದಿದ್ದಾಳೆ. ಕಾಲೇಜಿನಲ್ಲಿ ಇತ್ತೀಚೆಗೆ ಸರಳವಾಗಿ ನಡೆದ ಘಟಿಕೋತ್ಸವದಲ್ಲಿ ತಾಲೂಕಿನ ಕುಕುನೂರು ಗ್ರಾಮದ ವಿದ್ಯಾರ್ಥಿನಿ ಥೆಹಸಿನ್‌ನಾಜ್ ಆರು ಚಿನ್ನ ಪಡೆದು ಹೊರಹೊಮ್ಮಿದ್ದಾರೆ.
ಮೈಕ್ರೊ ಬಯೋಲಜಿ, ಫಾರ್ಮಾಕಾಲಜಿಯಲ್ಲಿ ಎಂಬಿಬಿಎಸ್ ಮುಗಿಸಿದ ಥೆಹಸಿನ್‌ನಾಜ್, ದ್ವಿತೀಯ ವರ್ಷದಲ್ಲಿ ಎರಡು, ತೃತೀಯ ವರ್ಷದಲ್ಲಿ ಒಂದು ಹಾಗೂ ಅಂತಿಮ ವರ್ಷದಲ್ಲಿ 3 ಚಿನ್ನದ ಪದಕ ಪಡೆದಿದ್ದಾರೆ. ತಾಲೂಕು ಕುಕುನೂರು ಮರ್ಚೇಡ್‌ನಲ್ಲಿ ತಂದೆ ಜೈನುಲ್ ಅಬಿದ್ದೀನ್ 10 ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ತಾಯಿ ಶಾಹಿಸ್ತಾ ಬೇಗಂ ಗೃಹಿಣಿಯಾಗಿದ್ದಾರೆ.
ತಂದೆ ಕಷ್ಟದಲ್ಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಯತ್ನಿಸಿದ್ದಾರೆ. ತಂದೆ ಶ್ರಮಕ್ಕೆ ಪ್ರತಿಫಲ ಎನ್ನುವಂತೆ ಮಗಳು ಸಾಧನೆ ಮಾಡಿದ್ದಾಳೆ. ನಾಲ್ವರು ಮಕ್ಕಳಲ್ಲಿ ಥೆಹಸಿನ್‌ನಾಜ್ ಎರಡನೇಯವರು. ಹಳ್ಳಿಯಿಂದಲೇ ನಿತ್ಯ ಕಾಲೇಜಿಗೆ ಹೋಗಿ ಬರುವ ಮೂಲಕ ಎಂಬಿಬಿಎಸ್ ಮುಗಿಸಿ ಗಮನ ಸೆಳೆದಿದ್ದಾರೆ. ಪ್ರಾಥಮಿಕ ಶಿಕ್ಷಣದಿಂದ ಎಂಬಿಬಿಎಸ್‌ವರೆಗೂ ಸ್ಥಳೀಯ ಶಾಲಾ-ಕಾಲೇಜುಗಳಲ್ಲೇ ಓದಿದ್ದಾರೆ. ನಿತ್ಯ 8-10 ಗಂಟೆ ಅಧ್ಯಯನ ಮಾಡಿದ್ದು ಹೆಚ್ಚು ಅಂಕ ಗಳಿಕೆಗೆ ನೆರವಾಯಿತು ಎನ್ನುತ್ತಾರೆ ಥೆಹಸಿನ್‌ನಾಜ್.
ಪಿಯುಸಿ ವಿಜ್ಞಾನ ವಿಷಯದಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದಾಗ ತಂದೆ ಬಿಎಸ್ಸಿ ಅಗ್ರಿ ಮಾಡಲು ಒತ್ತಾಯಿಸಿದ್ದರು. ಆದರೆ, ಥೆಹಸಿನ್‌ನಾಜ್ ಅವರಿಗೆ ವೈದ್ಯಕೀಯ ಶಿಕ್ಷಣ ಮಾಡುವ ಆಸೆ ಇತ್ತು. ರಿಮ್ಸ್‌ನಲ್ಲಿ ಉಚಿತ ಸೀಟು ಕೂಡ ಲಭ್ಯವಾಗಿದ್ದು, ಅವರ ಆಸೆಗೆ ನೀರೆರೆದಂತಾಯಿತು. ಎಂಬಿಬಿಎಸ್‌ನಲ್ಲಿ ಹೆಚ್ಚು ಅಂಕ ಪಡೆದು ಪಾಸಾದ ಅವರು ಎಂಎಸ್ ಅಥವಾ ಎಂಡಿ ಮಾಡುವ ಚಿಂತನೆಯಲ್ಲಿದ್ದಾರೆ.
ಗ್ರಾಮೀಣ ಭಾಗದಲ್ಲೂ ಪ್ರತಿಭಾವಂತರಿದ್ದಾರೆ. ಅವರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಮುಖ್ಯವಾಗಿ ಅವರು ಇಷ್ಟಪಟ್ಟ ವಿಷಯಗಳನ್ನೇ ಓದಲು ಬಿಡಬೇಕು. ನನಗೆ ಎಂಬಿಬಿಎಸ್ ಮಾಡುವುದು ಇಷ್ಟವಿದ್ದ ಕಾರಣ ಓದುವುದು ಕಷ್ಟವಾಗಲಿಲ್ಲ ಎನ್ನುತ್ತಾರೆ ಥೆಹಸಿನ್‌ನಾಜ್.