ನವದೆಹಲಿ: ರಾಷ್ಟ್ರ ರಾಜಧಾನಿ ನಿಜಾಮುದ್ದೀನ್ ಪ್ರದೇಶದಲ್ಲಿರುವ ಮಸೀದಿಗೆ ತೆರಳಿದ್ದ 6 ಮಂದಿ ತೆಲಂಗಾಣ ಪ್ರಜೆಗಳು ಕೋವಿಡ್-19 ವೈರಸ್ ನಿಂದ ಸಾವನ್ನಪ್ಪಿದ್ದಾರೆ ಎಂದು ತೆಲಂಗಾಣ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆ ಮೂಲಕ ಇಲ್ಲಿ 48 ಗಂಟೆಗಳ ಅವಧಿಯಲ್ಲಿ ಈ ಮಾರಕ ವೈರಾಣುವಿಗೆ 8 ಮಂದಿ ಸಾವನ್ನಪ್ಪಿದ್ದಾರೆ.
ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಸೋಮವಾರ ಸಂಜೆ ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಮಾರ್ಚ್ 13 ಮತ್ತು 14ರಂದು ನಿಜಾಮುದ್ದೀನ್ ಮಸೀದಿಯ ಧಾರ್ಮಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಆರು ಜನರು ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಈ ಮಾಹಿತಿ ಅಕ್ಷರಶಃ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಈ ಆರು ವ್ಯಕ್ತಿಗಳು ವಿವಿಧ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಕೋವಿಡ್ 19 ಪರೀಕ್ಷೆಗೆ ಒಳಗಾಗಿದ್ದರು. ಇವರಿಗೆ ಪಾಸಿಟಿವ್ ವರದಿಯೂ ಬಂದಿತ್ತು. ರಾಜ್ಯ ಆರೋಗ್ಯ ಇಲಾಖೆಯು ಭಾನುವಾರ ರಾತ್ರಿ 74 ವರ್ಷದ ವೃದ್ದರೋರ್ವರು ಈ ಮಾರತಕ ವೈರಸ್ ಗೆ ಸಾವನ್ನಪ್ಪಿರುವ ಮಾಹಿತಿಯನ್ನು ಖಚಿತಪಡಿಸಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರತಿಯೊಬ್ಬರು ಕೂಡ ಆರೋಗ್ಯ ಇಲಾಖೆಗೆ ಮಾಹಿತಿ ರವಾನಿಸಬೇಕು. ಸರ್ಕಾರ ಇವರಿಗೆ ಉಚಿತ ವಾಗಿ ಕೋವಿಡ್-19 ಪರೀಕ್ಷೆ ಮತ್ತು ಪಾಸಿಟಿವ್ ವರದಿ ಬಂದರೂ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಕೆ. ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮ ಈಗ ದೊಡ್ಡ ಅಪಾಯ ತಂದೊಡ್ಡುವ ಸಾಧ್ಯತೆ ಇದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಪೈಕಿ 7 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಬೆನ್ನಲ್ಲೇ ಸೋಮವಾರ ಇಡೀ ಪ್ರದೇಶವನ್ನು ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ. ಜನರ ಚಲನವಲನದ ಮೇಲೆ ನಿಗಾ ಇಡಲು ಡ್ರೋನ್‌ಗಳನ್ನೂ ಬಳಸಿಕೊಳ್ಳಲಾಗುತ್ತಿದೆ. 200 ಮಂದಿಯನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ. ಇವರ ಸಂಪರ್ಕಕ್ಕೆ ಬಂದ 2,000 ಕ್ಕಿಂತ ಹೆಚ್ಚು ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಆರೋಗ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.
ಈ ಕಾರ್ಯಕ್ರಮಕ್ಕೆ ಮಲೇಷ್ಯಾ, ಇಂಡೋನೇಷ್ಯಾ, ಸೌದಿ ಅರೇಬಿಯಾ, ಕಜಕಿಸ್ಥಾನದಿಂದ ಅನೇಕರು ಭೇಟಿ ಕೊಟ್ಟಿದ್ದರು.