Advertisement

6 ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಮಂಜೂರು

10:22 AM Jul 20, 2018 | |

ಪುತ್ತೂರು: ತಾಲೂಕಿಗೆ ಆರು ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಮಂಜೂರಾಗಿದ್ದು, ಮೊದಲ ಲ್ಯಾಬ್‌ ಜು. 21ರಂದು ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಉದ್ಘಾಟನೆಗೊಳ್ಳಲಿದೆ. ಸ್ಮಾರ್ಟ್‌ ಜಗತ್ತಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ರೂಪಿಸುವ ಉದ್ದೇಶದಿಂದ ಕೇಂದ್ರ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಆಯ್ಕೆಯಾದ ಶಾಲೆಗಳಿಗೆ ತಲಾ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿ, ಅದರಲ್ಲಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಪ್ರಯೋಗಾಲಯ ರೂಪು ಪಡೆಯಲಿದೆ. ಪುತ್ತೂರು ತಾಲೂಕಿಗೆ ಇದೇ ಮೊದಲ ಬಾರಿಗೆ 5 ಈ ಪ್ರಯೋಗಾಲಯ ಮಂಜೂರಾಗಿವೆ.

Advertisement

ಪ್ರತಿವರ್ಷ ನೀತಿ ಆಯೋಗ ಈ ಯೋಜನೆಗಾಗಿ ಅರ್ಜಿ ಆಹ್ವಾನಿಸುತ್ತದೆ. ಈ ಸಂದರ್ಭ ಶಾಲೆಗಳು ಅರ್ಜಿ ಸಲ್ಲಿಸಬೇಕು. ಇದಕ್ಕೆ 20 ಮಾನದಂಡಗಳನ್ನು ನೀಡಲಾಗುತ್ತದೆ. ಇಂತಿಷ್ಟು ವಿದ್ಯಾರ್ಥಿಗಳಿರಬೇಕು, ಶಾಲಾ ಆವರಣ, ಕೊಠಡಿ ವಿಸ್ತಾರ ಮೊದಲಾದ 20 ಅಂಶಗಳನ್ನು ಪರಿಗಣಿಸಿ, ಶಾಲೆಗಳ ಆಯ್ಕೆ ನಡೆಯುತ್ತದೆ. ಶಾಲೆಯ ಬ್ಯಾಂಕ್‌ ಖಾತೆಗೆ 10 ಲಕ್ಷ ರೂ.ವನ್ನು ಸರಕಾರ ಜಮೆ ಮಾಡುತ್ತದೆ. ಲ್ಯಾಬ್‌ ನ ಎಲ್ಲ ಕೆಲಸಗಳು ಪೂರ್ಣಗೊಂಡ ಬಳಿಕ ನೀತಿ ಆಯೋಗದ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಪ್ರಯೋಗಾಲಯವನ್ನು ಪರಿಶೀಲನೆ ಮಾಡುತ್ತಾರೆ.

ನೀತಿ ಆಯೋಗ ನೀಡುವ 10 ಲಕ್ಷ ರೂ.ನಲ್ಲಿ ವಿವಿಧ ಕೆಲಸಗಳಿಗೆ ಹಣವನ್ನು ವರ್ಗೀಕರಿಸಲಾಗಿದೆ. 1.5 ಲಕ್ಷ ರೂ. ಮೂಲಸೌಕರ್ಯಕ್ಕೆ, 1.5 ಲಕ್ಷ ರೂ. ಕಂಪ್ಯೂಟರ್‌,
ಲ್ಯಾಪ್‌ಟಾಪ್‌ ಖರೀದಿಗೆ, 6.5 ಲಕ್ಷ ರೂ. ಲ್ಯಾಬ್‌ ಗೆ ಬೇಕಾಗುವ ವಿವಿಧ ಪರಿಕರಗಳ ಖರೀದಿಗೆ, ಉಳಿದ 50 ಸಾವಿರ ರೂ.ವಿನ ಬಳಕೆ ಶಾಲೆಗೆ ಬಿಟ್ಟದ್ದು. ಇದರಲ್ಲಿ ಆಧುನಿಕ ಸಲಕರಣೆಗಳನ್ನು ಶಾಲಾ ವತಿಯಿಂದಲೇ ಖರೀದಿ ಮಾಡಬಹುದು.

ಅನ್ವೇಷಣೆಯ ಹಬ್‌ ಮಾಡುವ ಉದ್ದೇಶದಿಂದ ಅಟಲ್‌ ಟಿಂಕರಿಂಗ್‌ ಲ್ಯಾಬನ್ನು ಪರಿಚಯಿಸಲಾಗಿದೆ. ಇದರಲ್ಲಿ ಆರ್ಡಿನೋ, 3ಡಿ ಪ್ರಿಂಟ್‌, ರಾಸ್ಬೆರಿ-5, ಯುನೋ, ರೊಬೋಟಿಕ್ಸ್‌ ಮೊದಲಾದ ಆಧುನಿಕ ತಂತ್ರಜ್ಞಾನಗಳಿವೆ. ಈ ಸಲಕರಣೆಗಳನ್ನು ಬಳಸಿಕೊಂಡು, ವಿದ್ಯಾರ್ಥಿಗಳಿಗೆ ಆಧುನಿಕ ಜಗತ್ತಿನ ತಂತ್ರಜ್ಞಾನಗಳ ಮಾಹಿತಿ ನೀಡಲಾಗುತ್ತದೆ. ಒಂದರ್ಥದಲ್ಲಿ ಎಳವೆಯಲ್ಲೇ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುವುದಾಗಿದೆ.

ಸ್ಪರ್ಧೆಯೂ ಇದೆ
ನೀತಿ ಆಯೋಗ ಶಾಲಾ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಯನ್ನು ಏರ್ಪಡಿಸುತ್ತವೆ. ಇದಕ್ಕೆ ಆಹ್ವಾನ, ಸ್ಪರ್ಧೆ, ಫಲಿತಾಂಶ ವೆಬ್‌ ಸೈಟಲ್ಲಿ ಪ್ರಕಟವಾಗುತ್ತವೆ. ಲ್ಯಾಬ್‌ನಲ್ಲಿ ವಿದ್ಯಾರ್ಥಿಗಳು ಮಾಡಿರುವ ಪ್ರಾಜೆಕ್ಟನ್ನು ಅಪ್‌ಲೋಡ್‌ ಮಾಡಬೇಕು. ಫೇಸ್‌ಬುಕ್‌, ಟ್ವಿಟರ್‌ ಮೊದಲಾದ ಜಾಲತಾಣಗಳಲ್ಲಿ ಹರಿಯ ಬಿಡಬೇಕು. ಇದರಲ್ಲಿ ಎಷ್ಟು ಲೈಕ್‌, ಶೇರ್‌ ಆಗಿವೆ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು ಸ್ಪರ್ಧಾ ಫಲಿತಾಂಶ ಹೊರ ಬಿಡಲಾಗುತ್ತದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಾಲೆಗಳಲ್ಲೇ ವೇದಿಕೆ ನಿರ್ಮಾಣ ಮಾಡುವ ಯೋಜನೆ ಇದಾಗಿದೆ.

Advertisement

ಅಟಲ್‌ ಟಿಂಕರಿಂಗ್‌ ಲ್ಯಾಬ್‌ನಲ್ಲಿ 2 ಕೊಠಡಿಗಳಿವೆ. ವಿಜ್ಞಾನ ಪ್ರಾತ್ಯಕ್ಷಿಕೆಗೆ ಹಾಗೂ ಪ್ರಾಜೆಕ್ಟರ್‌ ಬಳಸಿ ಪಾಠ ಮಾಡಲು ಇವನ್ನು ಬಳಸಿಕೊಳ್ಳಲಾಗುತ್ತದೆ. ಇಲ್ಲಿ 3ಡಿ ಪ್ರಿಂಟರ್‌, ಎಲೆಕ್ಟ್ರಾನಿಕ್‌- ಮೆಕ್ಯಾನಿಕಲ್‌ ಉಪಕರಣಗಳು, ಮಾದರಿ ಮಾಡಲು ಬೇಕಾದ ಉಪಕರಣಗಳು ಇರುತ್ತವೆ. ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿ ಗಳಿಗೆ ವಿಜ್ಞಾನ ಪ್ರಾತ್ಯಕ್ಷಿಕೆ ಮಾಡಲು, ಅವುಗಳನ್ನು ಅಳವಡಿಸಲು ಇದರಲ್ಲಿ ಮಾಹಿತಿ ನೀಡಲಾಗುತ್ತದೆ. ಈ ಲ್ಯಾಬ್‌ನ ಸದುಪಯೋಗವನ್ನು ನೆರೆಯ ಎಲ್ಲ ಶಾಲೆಯ 6ರಿಂದ 12ನೇ ತರಗತಿ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು.

ತಾಲೂಕಿನ ಶಾಲೆಗಳು
ದರ್ಬೆ ಸಂತ ಫಿಲೋಮಿನಾ ಪ್ರೌಢ ಶಾಲೆ, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ, ಕೊಂಬೆಟ್ಟು ಜೂನಿಯರ್‌ ಕಾಲೇಜಿನ ಪ್ರೌಢಶಾಲಾ ವಿಭಾಗ, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢ ಶಾಲೆ, ಅರಫಾ ವಿದ್ಯಾಕೇಂದ್ರಕ್ಕೆ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಮಂಜೂರಾಗಿವೆ.

ಮೊದಲ ಲ್ಯಾಬ್‌
ಕೇಂದ್ರ ಸರಕಾರದ ನೀತಿ ಆಯೋಗ ಪ್ರಾಯೋಜಿತ ಅಟಲ್‌ ಇನ್ನೋವೇಶನ್‌ ಅಡಿಯಲ್ಲಿ ಪುತ್ತೂರು ತಾಲೂಕಿಗೆ 6 ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಮಂಜೂರಾಗಿವೆ. ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ತಾಲೂಕಿನ ಮೊದಲ ಲ್ಯಾಬನ್ನು ಜು. 21ರಂದು ಸಂಸದ ನಳಿನ್‌ ಕುಮಾರ್‌ ಕಟೀಲು ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸುವರು.
– ಓಸ್ವಾಲ್ಡ್‌ ರೋಡ್ರಿಗಸ್‌
ಮುಖ್ಯ ಗುರು, ಸಂತ
ಫಿಲೋಮಿನಾ ಪ್ರೌಢಶಾಲೆ, ದರ್ಬೆ

 ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next