Advertisement

Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ

06:56 PM Sep 28, 2024 | Team Udayavani |

ಬೆಂಗಳೂರು: ”ನನ್ನ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡಿದರೆ ರಾಜ್ಯ ಸರಕಾರದ ಆರರಿಂದ ಏಳು ಮಂದಿ ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ” ಎಂದು ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಶನಿವಾರ(ಸೆ28) ಬಾಂಬ್ ಸಿಡಿಸಿದ್ದಾರೆ.

Advertisement

ಭ್ರಷ್ಟಾಚಾರ ಸೇರಿದಂತೆ ಹಲವು ವಿಷಯಗಳ ಕುರಿತು ಸಿದ್ದರಾಮಯ್ಯ ನೇತೃತ್ವದ ಸರಕಾರದದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಜೆಡಿಎಸ್ ನಾಯಕ ” ಕೆಲವು ಆಪಾದಿತ ಅಕ್ರಮಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಆರಂಭವಾದ ನಂತರ ಮತ್ತು ಸಾರ್ವಜನಿಕವಾಗಿ ಚರ್ಚೆ ಪ್ರಾರಂಭ ವಾದ ನಂತರ ಕಾಂಗ್ರೆಸ್ ಆಡಳಿತ ನನ್ನನ್ನು ಕೆಲವು ಪ್ರಕರಣಗಳಲ್ಲಿ ಸಿಲುಕಿಸಲು ಯತ್ನಿಸುತ್ತಿದೆ” ಎಂದರು.

”ಸಿದ್ದರಾಮಯ್ಯ ಅವರು ಹಿಂದಿನ ಬಿಜೆಪಿ ಸರಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಸರಕಾರ ಎಂದು ಆರೋಪಿಸಿ ಅಧಿಕಾರಕ್ಕೆ ಬಂದರು. ಇಂದು ಅವರದೇ ಪಕ್ಷದವರೇ ಅಧಿಕಾರಕ್ಕೆ ಬಂದ ನಂತರ ಶೇ.40ಕ್ಕಿಂತ ಹೆಚ್ಚು ಕಮಿಷನ್ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರೇ, ಜನರು ನಿಮಗೆ ಇದಕ್ಕಾಗಿ ಅಧಿಕಾರ ಕೊಟ್ಟಿದ್ದಾರೆಯೇ?” ಎಂದು ಪ್ರಶ್ನಿಸಿದರು.

”ನಾನು ಸಚಿವರುಗಳ ಹಗರಣಗಳ ದಾಖಲೆ ಬಿಡುಗಡೆ ಮಾಡುತ್ತೇನೆ, ಭಯದಿಂದ ಓಡಿಹೋಗುವುದಿಲ್ಲ, ಹಿಟ್ ಅಂಡ್ ರನ್ ಪ್ರಶ್ನೆಯೇ ಇಲ್ಲ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲದಿದ್ದರೆ, ಸಚಿವ ಸಂಪುಟದಲ್ಲಿ ತರಾತುರಿಯಲ್ಲಿ ಕೆಲವು ನಿರ್ಧಾರಗಳನ್ನು ಏಕೆ ತೆಗೆದುಕೊಳ್ಳಲಾಗುತ್ತಿದೆ?” ಎಂದು ಪ್ರಶ್ನಿಸಿದರು.

”ರಾಜ್ಯದಲ್ಲಿ ಸರ್ಕಾರ ಹೊಸ ರೀತಿಯ ಕಾನೂನು ವ್ಯವಸ್ಥೆಯನ್ನು ತರುತ್ತಿದೆ. ಸಿದ್ದರಾಮಯ್ಯ ಪ್ರಕರಣದಲ್ಲಿ ನ್ಯಾಯಾಲಯ ನಿರ್ದೇಶನ ನೀಡಿದ 48 ಗಂಟೆಗಳ ನಂತರವೂ ಎಫ್‌ಐಆರ್ ದಾಖಲಾಗಿರಲಿಲ್ಲ” ಎಂದು ಕಿಡಿ ಕಾರಿದರು.

Advertisement

ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಜಿ ಪರಮೇಶ್ವರ್ ವಿರುದ್ಧ ಕಿಡಿ ಕಾರಿ ”ಬೆಂಗಳೂರು ಕಮಿಷನರ್, ಸಿಐಡಿ ಮುಖ್ಯಸ್ಥರ ಹುದ್ದೆಗಳ ಭರವಸೆ ಎಷ್ಟು ಅಧಿಕಾರಿಗಳಿಗೆ ನೀಡಿದ್ದೀರಿ? ಇದಕ್ಕಾಗಿ ನೀವು ಅವರನ್ನು ಏನು ಮಾಡುತ್ತೀರಿ” ಎಂದು ಪ್ರಶ್ನಿಸಿದರು.

”ನಾನು ಬಿಜೆಪಿಯೊಂದಿಗೆ ಕೈಜೋಡಿಸುವ ಮೊದಲೇ ನಿಮ್ಮ ಸರ್ಕಾರವನ್ನು ಗುರಿಯಾಗಿಸಲು ಪ್ರಾರಂಭಿಸಿದ ದಿನದಿಂದ, ನೀವು ಅಧಿಕಾರಿಗಳು ಮತ್ತು ಮಂತ್ರಿಗಳ ಮಟ್ಟದಲ್ಲಿ ಎಷ್ಟು ಸಭೆಗಳನ್ನು ನಡೆಸಿದ್ದೀರಿ? ನೀವು ಏನು ಮಾಡುತ್ತಿದ್ದೀರಿ ಎಂದು ನನಗೆ ಮಾಹಿತಿ ಇಲ್ಲವೇ? ” ಎಂದು ಕೆಂಡಾಮಂಡಲವಾದರು.

ಕುಮಾರಸ್ವಾಮಿ ಅವರು ಶುಕ್ರವಾರ ಲೋಕಾಯುಕ್ತ ಪೊಲೀಸರ ಮುಂದೆ ಗಂಗೇನಹಳ್ಳಿ ಜಮೀನು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾದ ಮರುದಿನ ಸುದ್ದಿಗೋಷ್ಠಿ ನಡೆಸಿ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next