ಬೆಂಗಳೂರು: ಕೇಂದ್ರ ಸರ್ಕಾರ ಘೋಷಿಸಿರುವ 6.5 ಲಕ್ಷ ಕೋಟಿ ರೂ. ಪ್ಯಾಕೇಜ್ ಕಣ್ಣೊರೆಸುವ ತಂತ್ರ. ಯಾವ ವರ್ಗಕ್ಕೂ ಇದು ಸಹಾಯಕವಾಗದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಪ್ರಕಟಿಸಿರುವ 6.5 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ ಕೇಂದ್ರ ಸರ್ಕಾರ ಭರಿಸುವುದು ಕೇವಲ 2,500 ಕೋಟಿ ರೂ. ಮಾತ್ರ.
ಉಳಿದಂತೆ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಸಾಲದ ರೂಪದಲ್ಲಿ ಸಣ್ಣ, ಅತಿ ಸಣ್ಣ, ಮಧ್ಯಮ ಕೈಗಾರಿಕೆ ವಲಯಕ್ಕೆ ಹಾಗೂ ಇತರೆ ಕ್ಷೇತ್ರಗಳಿಗೆ ಸಹಜವಾಗಿ ನೀಡುವುದಾಗಿದೆ ಎಂದರು. ಕೊರೊನಾದಿಂದ ರಾಜ್ಯ ಸರ್ಕಾರಗಳು ಸಂಕಷ್ಟಕ್ಕೆ ಸಿಲುಕಿದ್ದು ಆರ್ಥಿಕ ನೆರವು ಕಲ್ಪಿಸಬೇಕೆಂದು 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದೆ. ಆದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವುದೇ ನೆರವು ಘೋಷಿಸಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟ ಕ್ಕೊಳ ಗಾದ ಶ್ರಮಿಕ ವರ್ಗದವರಿಗೆ ಪ್ಯಾಕೇಜ್ ಘೋಷಿಸಲಾಗಿದೆ. 7.20 ಲಕ್ಷ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ತಲಾ ಐದು ಸಾವಿರ ರೂ. ಪರಿಹಾರ ಎಂದು ಹೇಳಲಾಯಿತು. ವಾರದಲ್ಲಿ ಕೊಡುವುದಾಗಿ ಹೇಳಿ ಹತ್ತು ದಿನ ಕಳೆಯುತ್ತಿದೆ, ಇನ್ನೂ ಅರ್ಜಿ ಪಡೆಯುವ ಕಾರ್ಯವೂ ಪೂರ್ಣಗೊಂಡಿಲ್ಲ ಎಂದು ದೂರಿದರು.
ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಅವರ ಸಮಯ ಕೇಳಿದ್ದೇನೆ. ಕೊಟ್ಟರೆ ನನ್ನ ಅನುಭವದ ಆಧಾರದ ಮೇಲೆ ಸಲಹೆ ಕೊಡುತ್ತೇನೆ. ಸ್ವೀಕರಿಸುವುದು, ಬಿಡುವುದು ಅವರ ಇಷ್ಟ. ಮಾಸ್ಕ್ ಹಾಗೂ ಸ್ಯಾನಿಟೈಸರ್ ಖರೀದಿಯಲ್ಲೂ ಹಣ ಜೇಬಿಗಿಳಿಸಲಾಗುತ್ತಿದೆ. ಇದನ್ನು ನೋಡಿಕೊಂಡು ಸುಮ್ಮನಿರಬೇಕಾ?
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ