ಬೆಂಗಳೂರು: ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಪ್ತ ಸಹಾ ಯಕ ಎಂದು ಹೇಳಿಕೊಂಡು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಮ್ಯಾನೇಜರ್ ಸ್ವಾಮಿನಾಥನ್ ಶಂಕರ್‌ಗೆ 6.33 ಲಕ್ಷ ರೂ. ವಂಚಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಎಂ.ಎಸ್.ಧೋನಿ ಅವರ ಮ್ಯಾನೇಜರ್ ಸ್ವಾಮಿನಾಥನ್ ಶಂಕರ್ ನೀಡಿದ ದೂರಿನ ಮೇರೆಗೆ ನಕಲಿ ಐಎಎಸ್ ಅಧಿಕಾರಿ ಎನ್.ಎಸ್.ನಕುಲ್, ಸಂದೀಪ್, ನಾಗೇಶ್ವರರಾವ್ ಎಂಬವರ ವಿರುದ್ಧ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?: 2023ರ ಅ.26ರಂದು ಸ್ವಾಮಿನಾಥನ್ ಶಂಕರ್ ಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, “ತಾನು ಐಎಎಸ್ ಅಧಿಕಾರಿ ಎನ್. ಎಸ್.ನಕುಲ್, ಹಣ ಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಅವರ ಆಪ್ತ ಸಹಾಯಕ’ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ನ್ಯಾಯಾಧೀಶ ಕೆ.ಸಿ.ಭಾನು ಅವರ ಮಗ ಸಂದೀಪ್, ಧೋನಿ ಅವರನ್ನು ಭೇಟಿ ಮಾಡಬೇಕು ಕೇಳಿದ್ದಾರೆ ಎಂದಿದ್ದಾನೆ. ಈ ಮನವಿ ಮೇರೆಗೆ 2023ರ ಅ.29ರಂದು ಸಂದೀಪ್ ಹಾಗೂ ಸಲ್ಮಾನ್ ಎಂಬವರು ಐಟಿಸಿ ಬೆಂಗಾಲ್ ಹೋಟೆಲ್‌ನಲ್ಲಿ ನನ್ನ ಮತ್ತು ಧೋನಿಯವರನ್ನು ಭೇಟಿಯಾಗಿದ್ದರು.
ಈ ಸಂದರ್ಭದಲ್ಲಿ ಆಂಧ್ರ ಪ್ರದೇಶದಲ್ಲಿರುವ ತಿರುಪತಿಗೆ ವಿಶೇಷ ದರ್ಶನ ಕೊಡಿಸುತ್ತೇವೆ. ಯಾವಾಗ ಬೇಕಾದರೂ ಕರೆ ಮಾಡಬಹುದು ಎಂದು ಸಂದೀಪ್ ಹೇಳಿದ್ದ. ಈ ಬೆನ್ನಲ್ಲೇ ನ.23ರಂದು ಕರೆ ಮಾಡಿದ ಸಂದೀಪ್, 12 ಮಂದಿಗೆ ತಿರುಪತಿಯಲ್ಲಿ ವಿಶೇಷ ದರ್ಶನದ ಪಾಸ್ ನೀಡಲಾಗುವುದು ಎಂದಿದ್ದಾನೆ. ಆದರೆ, “ನಾನು ದುಬೈನಲ್ಲಿ ಇದ್ದೇನೆ. ಬೇರೆಯವರಿಗೆ ಪಾಸ್ ಕೊಡಿ’ ಎಂದಾಗ, ಆರೋಪಿ ಸಂದೀಪ್, “ನೀವೇ ಯಾರಿಗಾದರೂ ಪ್ರೋಟೋ ಕಾಲ್ ಲೆಟರ್ ನೀಡಿ’ ಎಂದು ಹೇಳಿದ್ದ.
ಸೂಚಿಸಿದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ: ಹೀಗಾಗಿ “ನಾನು ಕೂಡ್ಲುಗೇಟ್‌ನಲ್ಲಿ ಶಾಲೆ ನಡೆಸುತ್ತಿದ್ದ ಸ್ನೇಹಿತ ವಿನೀತ್ ಚಂದ್ರಶೇಖರ್‌ಗೆ ಕೊಡಿ ಎಂದು ಶಿಫಾರಸು ಮಾಡಿದ್ದೆ. ಈ ನಡುವೆ ಡಿ.20ರಂದು ನಾಗೇಶ್ವರರಾವ್ ಎಂಬಾತ ಕರೆ ಮಾಡಿ, ತಾನು ಕೇಂದ್ರ ಸಚಿವೆ ನಿರ್ಮಲಾ ಸೀತಾ ರಾಮ್ ಅವರ ಪಿಎ, ಡೋನೆಷನ್ ಮಾಡಲು ಇಷ್ಟವಿದ್ದಲ್ಲಿ ಸಾಯಿ ಕ್ರಿಯೇಷನ್‌ನ ಬ್ಯಾಂಕ್ ಖಾತೆಗೆ ಹಣ ಹಾಕಿ ಎಂದು ಕೇಳಿದ್ದರು. ಈ ಸಂಬಂಧ ವಿನೀತ್ ಚಂದ್ರಶೇಖರ್‌ಗೆ ಕರೆ ಮಾಡಿ ಹಣ ಹಾಕುವಂತೆ ತಿಳಿಸಿದ್ದೆ. ಅವರು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗೆ 3.33 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಆ ನಂತರ ತಿರುಪತಿಯ ವಿಶೇಷ ದರ್ಶನ, ರೂಮ್ ಹಾಗೂ ಇತರೆ ಖರ್ಚುಗಳೆಂದು ಮೂರು ಲಕ್ಷ ರೂ. ಅನ್ನು ಗೂಗಲ್ ಪೇ ಮೂಲಕ ಪಡೆದುಕೊಂಡಿದ್ದಾರೆ.
ಈ ನಂತರ ಯಾವುದೇ ದರ್ಶನಕ್ಕೆ ಅವಕಾಶ ನೀಡಿಲ್ಲ. ಅದನ್ನು ಪ್ರಶ್ನಿಸಿ ಹಣ ವಾಪಸ್ ನೀಡುವಂತೆ ಕೇಳಿದರೂ, ಇದುವರೆಗೂ ಹಣ ವಾಪಸ್ ನೀಡಿಲ್ಲ. ಹೀಗಾಗಿ ಆನ್‌ಲೈನ್ ಮೂಲಕ ಸುಳ್ಳು ಆಮಿಷವೊಡ್ಡಿ 6.33 ಲಕ್ಷ ರೂ. ಪಡೆದುಕೊಂಡು ವಂಚಿಸಿದ ಮೂವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸ್ವಾಮಿನಾಥನ್ ಶಂಕರ್ ದೂರಿನಲ್ಲಿ ಕೋರಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.