ಬೆಂಗಳೂರು: ರಾಜ್ಯದ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನ ಪರೀಕ್ಷೆ ಸೋಮವಾರ, ಮಾ. 11ರಿಂದ ಆರಂಭಗೊಳ್ಳಲಿದ್ದು, ಮಾ. 18ರ ವರೆಗೆ ನಡೆಯಲಿದೆ.
ರಾಜ್ಯ ಪಠ್ಯಕ್ರಮದ ಸರಕಾರಿ, ಅನುದಾನಿತ ಮತ್ತು ಅನು ದಾನರಹಿತ ಸೇರಿ 69,137 ಶಾಲೆಗಳ 28.14 ಲಕ್ಷ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ.
5ನೇ ತರಗತಿಗೆ ಪ್ರಥಮ ಭಾಷೆ, ದ್ವಿತೀಯ ಭಾಷೆ, ಗಣಿತ ಮತ್ತು ಪರಿಸರ ಅಧ್ಯಯನ ಸೇರಿ 4 ವಿಷಯಗಳು, 8 ಮತ್ತು 9ನೇ ತರಗತಿಗೆ ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ. 5ನೇ ತರಗತಿಗೆ ಪ್ರತೀ ವಿಷಯಕ್ಕೆ 50 ಅಂಕಗಳಿಗೆ ಮೌಲ್ಯಾಂಕನ ನಡೆಸಲಾಗುವುದು.
40 ಅಂಕಗಳಿಗೆ ಲಿಖಿತ ಪರೀಕ್ಷೆಗೆ ರಾಜ್ಯ ಹಂತದಿಂದ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ನೀಡಲಿದೆ. ಉಳಿದ 10 ಅಂಕಗಳಿಗೆ ಮೌಖಿಕ ಪರೀಕ್ಷೆಯನ್ನು ಶಾಲಾ ಹಂತ ದಲ್ಲಿಯೇ ನಿರ್ವಹಿಸಬೇಕು. 8ನೇ ತರಗತಿಗೆ 60 ಅಂಕಗಳಿಗೆ ಮೌಲ್ಯಾಂಕನ ನಡೆಸಲಾಗುವುದು.
50 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು 10 ಅಂಕಗಳಿಗೆ ಮೌಖಿಕ ಪರೀಕ್ಷೆಯನ್ನು ಶಾಲಾ ಹಂತದಲ್ಲಿಯೇ ನಡೆಸಬೇಕು. 9ನೇ ತರಗತಿಗೆ ಭಾಷಾ ವಿಷಯಗಳನ್ನು (ಕನ್ನಡ, ಇಂಗ್ಲಿಷ್, ಹಿಂದಿ) 100 ಅಂಕಗಳಿಗೆ ಮತ್ತು ಕೋರ್ ವಿಷಯ (ವಿಜ್ಞಾನ, ಗಣಿತ, ಸಮಾಜ ವಿಜ್ಞಾನ) 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಬೇಕು.
5ನೇ ತರಗತಿ ಪರೀಕ್ಷೆಗಳು ಮಾ. 11ರಿಂದ 14ರ ವರೆಗೆ ಪ್ರತೀ ದಿನ ಅಪರಾಹ್ನ 2.30ರಿಂದ 4.30ರ ವರೆಗೆ, 8 ಮತ್ತು 9ನೇ ತರಗತಿಗೆ ಮಾ. 11ರಿಂದ 18ರ ವರೆಗೆ ಕ್ರಮವಾಗಿ ಅಪರಾಹ್ನ 2.30ರಿಂದ ಸಂಜೆ 5 ಹಾಗೂ ಸಂಜೆ 5.15ರ ವರೆಗೆ ನಡೆಯಲಿವೆ.