Advertisement

ಮನೆ ಕಳಕೊಂಡವರಿಗೆ 5 ಲ.ರೂ. ಪರಿಹಾರ

09:59 AM Oct 13, 2019 | mahesh |

ಬೆಂಗಳೂರು: ಪ್ರವಾಹದಲ್ಲಿ ಮನೆ ಕಳೆದುಕೊಂಡ ಪ್ರತಿ ಕುಟುಂಬಕ್ಕೂ ಐದು ಲಕ್ಷ ರೂ. ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದ್ದು, ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಕುಟುಂಬಗಳು ವಾಸವಿದ್ದ ಪ್ರಕರಣಗಳಲ್ಲೂ ಇದು ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

Advertisement

ವಿಧಾನಸಭೆಯಲ್ಲಿ ಪ್ರವಾಹ ಪರಿಹಾರ ಚರ್ಚೆಗೆ ಸರಕಾರದ ವತಿಯಿಂದ ಉತ್ತರ ನೀಡಿದ ಅವರು, ಪ್ರವಾಹದಲ್ಲಿ ಅಂಗಡಿ-ಮುಂಗಟ್ಟು ಕಳೆದುಕೊಂಡವರಿಗೂ ತಲಾ 25 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಪ್ರಕಟಿಸಿದರು.

ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಖುಷ್ಕಿ ಭೂಮಿಗೆ ಪ್ರತಿ ಹೆಕ್ಟೇರ್‌ಗೆ 6,800 ರೂ. ನೀಡಲಾಗುತ್ತಿದ್ದು ಅದಕ್ಕೆ ರಾಜ್ಯ ಸರಕಾರ 10 ಸಾವಿರ ರೂ. ಸೇರಿಸಿ 16,800 ರೂ. ನೀಡಲಾಗುವುದು. ತೋಟಗಾರಿಕೆ ಬೆಳೆಗಳಿಗೆ 13,500 ರೂ. ನೀಡಲಾಗುತ್ತಿದ್ದು, ಇದಕ್ಕೆ 10 ಸಾವಿರ ಸೇರಿಸಿ 23,500 ರೂ. ನೀಡಲಾಗುತ್ತದೆ. ನೀರಾವರಿ ಪ್ರದೇಶದ ಬೆಳೆಗಳಿಗೆ 18,000 ರೂ. ನೀಡಲಾಗುತ್ತಿದ್ದು, ಇದಕ್ಕೆ 10 ಸಾವಿರ ರೂ. ಸೇರಿಸಿ 28,000 ರೂ. ನೀಡಲಾಗುವುದು. ಕಾಫಿ ಬೆಳೆಗಾರರಿಗೂ ಪ್ರತಿ ಹೆಕ್ಟೇರ್‌ಗೆ 28,000 ರೂ. ನೀಡಲಾಗುವುದು. ರೇಷ್ಮೆ, ಅಡಿಕೆ ಬೆಳೆ ನಷ್ಟಕ್ಕೂ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದರು. ಸರಕಾರವು ಪರಿಹಾರ ಹಾಗೂ ಪುನರ್ವಸತಿ ಕಾರ್ಯದಲ್ಲಿ ಯಾವುದೇ ಹಿನ್ನಡೆಯಾಗದಂತೆ ನೋಡಿಕೊಳ್ಳುತ್ತದೆ ಎಂಬ ಭರವಸೆ ಯನ್ನು ಸಿಎಂ ನೀಡಿದರು.

2009ರಲ್ಲಿ ರಾಜ್ಯದಲ್ಲಿ ಪ್ರವಾಹ ಉಂಟಾದಾಗ ಪ್ರವಾಹಕ್ಕೆ ಸಿಲುಕಿದವರನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಅವರು ಕಾರಣಾಂತರಗಳಿಂದ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಗೊಂಡಿಲ್ಲ. ಈಗಲೂ ಅವರು ಸ್ಥಳಾಂತರಗೊಳ್ಳಲು ಬಯಸಿದರೆ ಅವರನ್ನು ಸ್ಥಳಾಂತರಿಸಲು ಸರಕಾರ ಸಿದ್ಧ ಎಂದು ಹೇಳಿದರು.

ನೆರೆ ಪ್ರದೇಶದಲ್ಲಿ ಒಂದು ವಾರ ಮೊಕ್ಕಾಂ
ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಹಾರಕ್ಕಾಗಿ ರಾಜ್ಯ ಸರಕಾರ ಇದುವರೆಗೂ 2950 ಕೋಟಿ ರೂ. ಬಿಡುಗಡೆ ಮಾಡಿದೆ. ಸಂಘ ಸಂಸ್ಥೆಗಳು, ಸಾರ್ವಜನಿಕರು ಸುಮಾರು 300 ಕೋಟಿ ರೂ, ದೇಣಿಗೆ ನೀಡಿದ್ದಾರೆ. ನಾನು ಪ್ರವಾಹ ಪೀಡಿತ ಪ್ರದೇಶದಲ್ಲಿ ಒಂದು ವಾರ ಮೊಕ್ಕಾಂ ಹೂಡಿ ಪ್ರವಾಹ ಪರಿಹಾರ ಕಾರ್ಯ ಪರಿಶೀಲನೆ ಮಾಡಿದ್ದೇನೆ ಎಂದು ಹೇಳಿದರು.

Advertisement

ರಾಜ್ಯದಲ್ಲಿ ನೂರು ವರ್ಷಗಳ ಇತಿಹಾಸದಲ್ಲಿ ಆಗದಷ್ಟು ಮಳೆ ಆಗಸ್ಟ್‌ ತಿಂಗಳ ಒಂದು ವಾರದಲ್ಲಿ ಸುರಿದಿದೆ. ಕೃಷ್ಣಾ, ಭೀಮಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಿಗೆ ಸುಮಾರು 6 ಲಕ್ಷ ಕ್ಯೂಸೆಕ್ಸ್‌ಗಿಂತಲೂ ಹೆಚ್ಚು ನೀರು ಬಂದಿರುವುದರಿಂದ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ ಎಂದು ತಿಳಿಸಿದರು.

ಮನೆ ಕಳೆದುಕೊಂಡವರಿಗೆ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ 95 ಸಾವಿರ ರೂ. ಮಾತ್ರ ನೀಡಲಾಗುತ್ತಿದ್ದು ರಾಜ್ಯ ಸರಕಾರವು ಮನೆ ಕಳೆದುಕೊಂಡ ಎ ಮತ್ತು ಬಿ ವರ್ಗದ 42,893 ಕುಟುಂಬಗಳಿಗೆ ಪ್ರತಿ ಮನೆಗೂ 5 ಲಕ್ಷ ರೂ.ಪರಿಹಾರ ನೀಡುತ್ತಿದೆ. ಸಿ ಕೆಟಗೆರಿಯ 77,513 ಮನೆ ಕಳೆದುಕೊಂಡ ಕುಟುಂಬಗಳಿಗೆ 25 ಸಾವಿರದಿಂದ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದರು.

ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪರಿಹಾರ ನೀಡಲಾಗುತ್ತಿದ್ದು, ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಟ್ಟು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next