ಮಸ್ಕಿ: ಎನ್‌ಆರ್‌ಬಿಸಿ 5ಎ ಕಾಲುವೆ ಅನುಷ್ಠಾನಕ್ಕೆ ಆಗ್ರಹಿಸಿ ರೈತರು ನಡೆಸಿದ ಅನಿರ್ದಿಷ್ಠ ಧರಣಿ ಸ್ಥಳಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಬುಧವಾರ ಭೇಟಿ ನೀಡಿ ರೈತರ ಮನವೊಲಿಸುವ ಯತ್ನ ನಡೆಸಿದರು. ಆದರೆ ಸವಾಲ್-ಜವಾಬ್, ಮಾತಿನಯುದ್ಧ, ಆಣೆ-ಪ್ರಮಾಣಗಳು ಪ್ರಸ್ತಾಪವಾಗಿ, ಕೊನೆಗೆ ವಾಗ್ವಾದವೂ ಉಂಟಾಗಿ ಸಂಧಾನ ಮತ್ತೆ ವಿಫಲವಾಯಿತು.
ಕಳೆದ 69 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟ 70ನೇ ದಿನಕ್ಕೆ ಕಾಲಿಟ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಸೇರಿ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ರೈತರ ಮನವೊಲಿಸುವ ಕಸರತ್ತು ನಡೆಸಿದ್ದರು. ಆದರೆ 5ಎ ಕಾಲುವೆ ಬೇಕು ಎಂದು ರೈತರು ಪಟ್ಟು ಹಿಡಿದಿದ್ದರು. ಕೊನೆಗೆ ಮತ್ತೂಮ್ಮೆ ಬುಧವಾರ ರೈತರ ಧರಣಿ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, 5ಎ ಕಾಲುವೆ ಜಾರಿಗೆ ತಾಂತ್ರಿಕ ಸಮಸ್ಯೆ ಇದೆ.
ಸರಕಾರ ಇದನ್ನು ಒಪ್ಪುತ್ತಿಲ್ಲ. ಇದರ ಬದಲಾಗಿ ನಂದವಾಡಗಿ ಏತ ನೀರಾವರಿ ಮೂಲಕ ಹರಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುವುದು. ಒಂದು ವೇಳೆ 5ಎ ಜಾರಿಗೆ ನಿಖರ ಮಾಹಿತಿ ಇದ್ದರೆ ಬನ್ನಿ, ನಿಮ್ಮನ್ನೂ ಜಲಸಂಪನ್ಮೂಲ ಸಚಿವರು, ಮುಖ್ಯಮಂತ್ರಿಗಳ ಬಳಿ ಕರೆದೊಯ್ಯುವೆ. ನೀವೆ ಅವರಿಗೆ ಮನವರಿಕೆ ಮಾಡಿ. ಸಾಧ್ಯವಾದರೆ 5ಎ ಯೋಜನೆಯನ್ನೇ ಜಾರಿ ಮಾಡಲಾಗುತ್ತದೆ ಎಂದು ಹೇಳಿದರು. ಈ ವೇಳೆ ಹೋರಾಟ ನಿರತ ರೈತರ ಪರವಾಗಿ ಹೋರಾಟ ಸಮಿತಿ ಗೌರವ ಅಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ ಮಾತ್ರ ಮಾತನಾಡಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ತಿಮ್ಮನಗೌಡ ಚಿಲ್ಕರಾಗಿ ನಡುವೆ ಸವಾಲ್-ಜವಾಬ್ ಮಾದರಿಯಲ್ಲಿ 5ಎ ಯೋಜನೆ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಮಾತಿನ ಯುದ್ಧ: 5ಎ ಜಾರಿಯೇ ಕಷ್ಟ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ತಾಂತ್ರಿಕ ಸಮಸ್ಯೆಗಳನ್ನು ಮುಂದಿಟ್ಟರೆ, ತಿಮ್ಮನಗೌಡ ಚಿಲ್ಕರಾಗಿ ಚುನಾಯಿತ ಪ್ರತಿನಿಧಿ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ದುರ್ಗಮ ಪ್ರದೇಶಗಳಿಗೂ ನೀರು ಹರಿಸಲಾಗಿದೆ. ಆದರೆ ಇಲ್ಲೇಕೆ ಸಾಧ್ಯವಿಲ್ಲ. ಸ್ವತಃ ಕೃಷ್ಣ ಭಾಗ್ಯ ಜಲ ನಿಗಮದ ಅ ಧಿಕಾರಿಗಳೇ ಭರವಸೆ ನೀಡಿದ್ದಾರೆ.
ಈ ಹಿಂದಿನ ನೀರಾವರಿ ಖಾತೆ ಮಂತ್ರಿಗಳು ಈ ಯೋಜನೆ ಜಾರಿ ಬಗ್ಗೆ ಧನಾತ್ಮಕವಾಗಿಯೇ ಮಾತನಾಡಿದ್ದರು. ಆದರೆ ನೀವೆ ಇದಕ್ಕೆಲ್ಲ ಅಡ್ಡಿ ಪಡಿಸಿದ್ದೀರಿ ಎಂದು ಮಾಜಿ ಶಾಸಕ ಪ್ರತಾಪಗೌಡ ವಿರುದ್ಧ ಆರೋಪಿಸಿದರು.
ಆಣೆ-ಪ್ರಮಾಣ: ಹೋರಾಟದ ವೇದಿಕೆಯಲ್ಲಿ ಮಾಜಿ ಶಾಸಕ ಮತ್ತು ಹೋರಾಟಗಾರ ತಿಮ್ಮನಗೌಡ ಚಿಲ್ಕರಾಗಿ ಮಧ್ಯ ಮಾತಿನಯುದ್ಧ ವಿಕೋಪಕ್ಕೆ ತೆರಳಿತು. ವೈಯಕ್ತಿಕ ಆಚರಣೆಗಳು ಚರ್ಚೆಗೆ ಬಂದವು. ಕೊನೆಗೆ ಆವೇಶಗೊಂಡ ಪ್ರತಾಪಗೌಡ ಪಾಟೀಲ್, “ನಾನು ಈ ಯೋಜನೆ ಜಾರಿಗೆ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ.
ಇದಕ್ಕಾಗಿ ನಾನು ಯಾವ ದೇವರ ಬಳಿ ಬಂದು ಆಣೆ-ಪ್ರಮಾಣ ಮಾಡಲು ಸಿದ್ಧ. ಬೇಕಿದ್ದರೆ ನಿಮ್ಮ ತಲೆ ಬಡಿದು ಹೇಳಲು ಸಿದ್ಧ’ ಎಂದರು. ಈ ವೇಳೆ ರೈತರ ನಡುವೆ ಮಾತಿನ ಗದ್ದಲ, ಚಕಮಕಿ ನಡೆಯಿತು. ವೇದಿಕೆಯಲ್ಲಿದ್ದ ರೈತರು ಹಾಗೂ ಪ್ರತಾಪಗೌಡ ಪಾಟೀಲ್ ಹಿಂಬಾಲಕರ ನಡುವೆ ವಾಗ್ವಾದಗಳು ನಡೆಯಿತು. ಪ್ರತಾಪಗೌಡ ಪಾಟೀಲ್ ಹಿಂಬಾಲಕರು ಟೆಂಟ್‌ನಿಂದ ಹೊರ ಹೋಗುತ್ತಿದ್ದ ವೇಳೆ ನೂಕಾಟ-ತಳ್ಳಾಟ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು ಘಟನೆ ತಿಳಿಗೊಳಿಸಿದರು.