ಕಲಬುರಗಿ: 2017-18ನೇ ಸಾಲಿನ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಹಾನಿಗೆ ಬೆಳೆವಿಮೆ ಮಂಜೂರಾಗಿದ್ದು, ರಾಜ್ಯಕ್ಕೆ 597.57 ಕೋಟಿ ರೂ. ಬಿಡುಗಡೆಯಾಗಿದೆ. ಪ್ರಧಾನಮಂತ್ರಿ ಫಸಲು ಬೀಮಾ (ವಿಮಾ) ಯೋಜನೆ ಅಡಿ ಮುಂಗಾರು ಹಂಗಾಮಿನ ವಿವಿಧ ಬೆಳೆಗಳಾದ ತೊಗರಿ, ಭತ್ತ, ರಾಗಿ, ಮೆಕ್ಕೆಜೋಳ, ಸೋಯಾಬಿನ್, ಹತ್ತಿ, ಹೆಸರು, ನೆಲಗಡಲೆ ಸೇರಿದಂತೆ ಇತರ ಮುಂಗಾರು ಬೆಳೆಗಳಿಗೆ ಬೆಳೆವಿಮೆ ಈಗಷ್ಟೇ ಮಂಜುರಾಗಿದ್ದು, ರೈತರ ಖಾತೆಗಳಿಗೆ ಪರಿಹಾರ ಮೊತ್ತ ಜಮಾ ಪ್ರಕ್ರಿಯೆ ಆರಂಭವಾಗಿದೆ. 15ರಿಂದ 20 ದಿನದೊಳಗೆ ಎಲ್ಲ ರೈತರಿಗೆ ಹಣ ಕೈ ಸೇರಲಿದೆ.
2016-17ನೇ ಸಾಲಿನ ಮುಂಗಾರು ಹಂಗಾಮಿಗೆ ರಾಜ್ಯಕ್ಕೆ 627. 69 ಕೋಟಿ ರೂ. ಬೆಳೆವಿಮೆ ಬಿಡುಗಡೆಯಾಗಿತ್ತು. 2015-16ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ರಾಜ್ಯಕ್ಕೆ 693.12 ಕೋಟಿ ರೂ. ಬೆಳೆವಿಮೆ ಬಿಡುಗಡೆಯಾಗಿತ್ತು. ಆದರೆ ಕಳೆದ ವರ್ಷ 597 ಕೋಟಿ ರೂ. ಮಾತ್ರ ಬೆಳೆವಿಮೆ ಮಂಜೂರಾಗಿದೆ. ಬೆಳೆಗಳ ಹಾನಿಗೆ ವೈಜ್ಞಾನಿಕ ಹಾಗೂ ಸಮರ್ಪಕ ಬೆಳೆವಿಮೆ ಬಿಡುಗಡೆಯಾದರೆ ಸಾಲ ಮನ್ನಾದಂತಹ ಬೇಡಿಕೆಯೇ ಎದುರಾಗುವುದಿಲ್ಲ. ಸುಧಾರಿತ ಬೆಳೆವಿಮೆ ಯೋಜನೆ ಕಾರ್ಯರೂಪಕ್ಕೆ ತರಲಾಗಿದ್ದರೂ ಬೆಳೆವಿಮೆ ಯಾರಿಗುಂಟು-ಯಾರಿಗಿಲ್ಲ ಎನ್ನುವಂತೆ ಆಗುತ್ತಿರುವುದರಿಂದ ರೈತರ ಅಸಮಾಧಾನಕ್ಕೆ ಕಾರಣವಾಗುತ್ತಿದೆ.
ಯಾವ ಜಿಲ್ಲೆಗೆ ಎಷ್ಟು?: ರಾಜ್ಯದಲ್ಲಿ ಅಂದಾಜು ಮುಂಗಾರು ಹಂಗಾಮಿನಲ್ಲಿ 15 ಲಕ್ಷ ಸಮೀಪ ರೈತರು ಬೆಳೆವಿಮೆ ಪ್ರೀಮಿಯಂ ತುಂಬಿದ್ದಾರೆ. ಅದರಲ್ಲಿ 5.59 ಲಕ್ಷ ರೈತರಿಗೆ 597.57 ಕೋಟಿ ರೂ. ಮಂಜೂರಾಗಿದ್ದು, ಅತಿ ಹೆಚ್ಚಿನ ಹಣ ಧಾರವಾಡ ಜಿಲ್ಲೆಗೆ ಬಿಡುಗಡೆಯಾಗಿದೆ. ಧಾರವಾಡ ಜಿಲ್ಲೆಗೆ 149 ಕೋಟಿ ರೂ., ಗದಗ ಜಿಲ್ಲೆಗೆ 55 ಕೋಟಿ ರೂ., ಹಾಸನ ಜಿಲ್ಲೆಗೆ 16 ಕೋಟಿ ರೂ., ಮಂಡ್ಯ ಜಿಲ್ಲೆಗೆ 41 ಕೋಟಿ ರೂ., ಚಾಮರಾಜ ನಗರ 10 ಕೋಟಿ ರೂ., ಹಾವೇರಿ ಜಿಲ್ಲೆಗೆ 44 ಕೋಟಿ ರೂ., ದಾವಣಗೆರೆಗೆ 12 ಕೋಟಿ ರೂ., ಶಿವಮೊಗ್ಗ ಜಿಲ್ಲೆಗೆ 35 ಕೋಟಿ ರೂ., ಉತ್ತರ ಕನ್ನಡ ಜಿಲ್ಲೆಗೆ 31 ಕೋಟಿ ರೂ., ಬೆಳಗಾವಿಗೆ 3.45 ಕೋಟಿ ರೂ., ಬಾಗಲಕೋಟೆಗೆ 12 ಕೋಟಿ ರೂ., ಚಿತ್ರದುರ್ಗಕ್ಕೆ 22 ಕೋಟಿ ರೂ., ತುಮಕೂರಿಗೆ 76 ಕೋಟಿ ರೂ., ವಿಜಯಪುರಕ್ಕೆ 69 ಕೋಟಿ ರೂ. ಬೆಳೆವಿಮೆ ಬಿಡುಗಡೆಯಾಗಿದೆ. ಬೆಳೆವಿಮೆ ವ್ಯಾಪ್ತಿಗೆ ಒಳಪಡುವ ಬೆಳೆಗಳನ್ನು ಬೆಳೆಯದಿರುವ ದಕ್ಷಿಣ ಕನ್ನಡ ಜಿಲ್ಲೆಗೆ 2.68 ಲಕ್ಷ ರೂ., ಉಡುಪಿ ಜಿಲ್ಲೆಗೆ 1.13 ಲಕ್ಷ ರೂ., ಕೊಡಗು ಜಿಲ್ಲೆಗೆ 37 ಲಕ್ಷ ರೂ. ಬೆಳೆವಿಮೆ ಮಂಜೂರಾಗಿದೆ.
ಹೈ.ಕ ಭಾಗಕ್ಕಿಲ್ಲ ಬೆಳೆವಿಮೆ ಭಾಗ್ಯ: ಹೆಚ್ಚಾಗಿ ಮಳೆಯಾಶ್ರಿತ ಕೃಷಿ ಅವಲಂಬಿತ ಬಿಸಿಲು ನಾಡು ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ರಾಜ್ಯ ಸರ್ಕಾರ ಘೋಷಿಸಿದ ಸುಸ್ತಿ ಬೆಳೆ ಸಾಲ ಮನ್ನಾದಲ್ಲಿ ಆಗಿರುವ ಅನ್ಯಾಯದಂತೆ ಬೆಳೆವಿಮೆ ಮಂಜೂರಾತಿಯಲ್ಲೂ ಆಗಿದೆ. ಕಲಬುರಗಿ ಜಿಲ್ಲೆಗೆ 3.53 ಲಕ್ಷ ರೂ., ಬೀದರ ಜಿಲ್ಲೆಗೆ 84 ಲಕ್ಷ ರೂ., ಬಳ್ಳಾರಿ ಜಿಲ್ಲೆಗೆ 1.89 ಕೋಟಿ ರೂ., ಯಾದಗಿರಿ ಜಿಲ್ಲೆಗೆ 34 ಲಕ್ಷ ರೂ. ಮಾತ್ರ ಬೆಳೆವಿಮೆ ಮಂಜೂರಾಗಿದೆ. ಆದರೆ ಸ್ವಲ್ಪ ಪರವಾಗಿಲ್ಲ ಎನ್ನುವಂತೆ ರಾಯಚೂರು ಜಿಲ್ಲೆಗೆ 27 ಕೋಟಿ ರೂ., ಕೊಪ್ಪಳ ಜಿಲ್ಲೆಗೆ 8 ಕೋಟಿ ರೂ. ಮಂಜೂರಾಗಿದೆ. ಸುಸ್ತಿ ಸಾಲ ಮನ್ನಾದಲ್ಲೂ ಈ ಭಾಗದ ರೈತರು ಸಹಕಾರಿ ಸಂಘಗಳಲ್ಲಿ ಶೇ.1 ಪ್ರಮಾಣವನ್ನು ಹೊಂದಿಲ್ಲ. 2016-17ನೇ ಸಾಲಿನಲ್ಲಿ ಬೀದರ ಜಿಲ್ಲೆಗೆ 129 ಕೋಟಿ ರೂ., ಕಲಬುರಗಿಗೆ 3 ಕೋಟಿ ರೂ., ಯಾದಗಿರಿಗೆ 6 ಕೋಟಿ. ರೂ., ಕೊಪ್ಪಳಕ್ಕೆ 35ಕೋಟಿ ರೂ., ರಾಯಚೂರಿಗೆ 5 ಕೋಟಿ ರೂ., ಬಳ್ಳಾರಿಗೆ 2.42 ಕೋಟಿ ರೂ. ಬೆಳೆ ವಿಮೆ ಮಂಜೂರಾಗಿತ್ತು.
130 ಕೋಟಿ ರೂ. ಪ್ರೀಮಿಯಂ: ಸಹಕಾರಿ ಸಂಘಗಳಲ್ಲಿ ರೈತರು ಪಡೆಯುವ ಸಾಲದ ಮೇಲೆ ಶೇ.2ರಷ್ಟನ್ನು ರೈತರು ಬೆಳೆವಿಮೆಗೆಂದು ಪ್ರೀಮಿಯಂ ತುಂಬುತ್ತಾರೆ. ಈ ಹಣ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿಯೇ ಸುಮಾರು 130 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರಷ್ಟೇ ಪ್ರಮಾಣವನ್ನು ರಾಜ್ಯ ಸರ್ಕಾರ ಒಗ್ಗೂಡಿಸಿ ವಿಮಾ ಕಂಪನಿಗಳಿಗೆ ಹಣ ತುಂಬಲಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಂತೂ ಇದರ ನಾಲ್ಕು ಪಟ್ಟು ಹಣ ರೈತರಿಂದ ಬೆಳೆವಿಮೆಗೆಂದು ಪ್ರೀಮಿಯಂ ತುಂಬಲಾಗಿರುತ್ತದೆ. ಒಟ್ಟಾರೆ ವಿಮಾ ಕಂಪನಿಗಳಿಗೆ ಪ್ರೀಮಿಯಂ 950 ಕೋಟಿ ರೂ. ದಿಂದ 1000 ಕೋಟಿ ರೂ. ಸಮೀಪ ಆಗುತ್ತದೆ ಎಂದು ಅಂದಾಜಿಸಲಾಗಿದೆ.
2017-18ನೇ ಸಾಲಿನ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಹಾನಿಗೆ ಬೆಳೆವಿಮೆಗೆಂದು ರಾಜ್ಯಕ್ಕೆ 597.57 ಕೋಟಿ ರೂ. ಬಿಡುಗಡೆಯಾಗಿದೆ. ಈ ಹಣ ರೈತರ ಖಾತೆಗಳಿಗೆ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಿ ಈಗಾಗಲೇ 130 ಕೋಟಿ ರೂ. ಪಾವತಿಯಾಗಿದೆ. ವಾರದೊಳಗೆ ಉಳಿದ ಹಣ ರೈತರ ಖಾತೆಗೆ ಸಂದಾಯವಾಗಲಿದೆ. ಆಯಾ ಭಾಗದಲ್ಲಿನ ಕೃಷಿ ಉತ್ಪನ್ನಗಳ ಇಳುವರಿ ಪ್ರಮಾಣ ಆಧರಿಸಿ ಈ ಬೆಳೆವಿಮೆ ಮಂಜೂರಾಗಿದೆ.
●ವಿದ್ಯಾನಂದ, ಜಂಟಿ ಕೃಷಿ ನಿರ್ದೇಶಕ, ಕೇಂದ್ರ ಕೃಷಿ ಕಚೇರಿ, ಬೆಂಗಳೂರು
ಹಣಮಂತರಾವ ಭೈರಾಮಡಗಿ