ಅಲಿಘರ್ (ಯುಪಿ): ನಗರದ ಹೊರವಲಯದಲ್ಲಿರುವ ಮಾಂಸ ಸಂಸ್ಕರಣಾ ಘಟಕದಲ್ಲಿ ಗುರುವಾರ ಬೆಳಗ್ಗೆ ಆಕಸ್ಮಿಕವಾಗಿ ಅಮೋನಿಯಾ ಅನಿಲ ಸೋರಿಕೆಯಾಗಿ 59 ಮಂದಿ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ಬಳಿಕ ತಕ್ಲಾಸ್‌ಪುರ ಪ್ರದೇಶದಲ್ಲಿ ಮಾಂಸದ ಕಾರ್ಖಾನೆಯ ಮಾಲೀಕ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ಐಟಿ ನಿಯಮಗಳನ್ನು ಉಲ್ಲಂಘಿಸಿದ 67 ವೆಬ್‌ಸೈಟ್‌ಗಳಿಗೆ ಕೇಂದ್ರದ ನಿರ್ಬಂಧ
ಎಲ್ಲಾ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ ಮತ್ತು ರೋರಾವರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಇಂದರ್ ವೀರ್ ಸಿಂಗ್ ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಆಕಸ್ಮಿಕವಾಗಿ ಅಮೋನಿಯಾ ಗ್ಯಾಸ್ ಪೈಪ್‌ಲೈನ್ ಒಡೆದ ನಂತರ ಸೋರಿಕೆ ಸಂಭವಿಸಿದೆ. ಎಲ್ಲರೂ ಅಪಾಯದಿಂದ ಪಾರಾಗಿರುವುದರಿಂದ ಜನರು ಯಾವುದೇ ವದಂತಿಗಳನ್ನು ನಂಬಬಾರದು. ಮುಂಜಾಗ್ರತಾ ಕ್ರಮವಾಗಿ ಕಾರ್ಖಾನೆಯ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ತಿಳಿಸಿದ್ದಾರೆ.
ಹಿರಿಯ ಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು ಮತ್ತು ಮಹಿಳೆಯರು ಸೇರಿದಂತೆ 59 ಕಾರ್ಮಿಕರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
59 ಕಾರ್ಮಿಕರನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ತುರ್ತು ಚಿಕಿತ್ಸೆಯ ಬಳಿಕ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ ಹ್ಯಾರಿಸ್ ಮನ್ಸೂರ್ ಖಾನ್ ಪಿಟಿಐಗೆ ತಿಳಿಸಿದ್ದಾರೆ.