ಹುಬ್ಬಳ್ಳಿ: ಕಾಂಗ್ರೆಸ್ ಅವಧಿಯಲ್ಲಿನ 59 ಪ್ರಕರಣಗಳನ್ನು ಲೋಕಾಯುಕ್ತಕ್ಕೆ ನೀಡಲು ನಿರ್ಧರಿಸಿದ್ದೇವೆ. ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರ ಪ್ರಕರಣ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂಬುವುದು ಸರಕಾರದ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಡಾಳು ಅವರ ಪ್ರಕರಣ ಲೋಕಾಯುಕ್ತ ತನಿಖೆ ಮಾಡುತ್ತಿದೆ. ಸತ್ಯಾಸತ್ಯತೆ ಹೊರಬರಬೇಕು. ಇದಕ್ಕಾಗಿ ಪ್ರಾಮಾಣಿಕ ತನಿಖೆ ನಡೆಯಬೇಕು ಎಂಬುವುದು ಸರಕಾರದ ಉದ್ದೇಶವಾಗಿದೆ. ಹೀಗಾಗಿ ಲೋಕಾಯುಕ್ತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ನಡೆದಿರುವ ಘಟನೆ ಆಧಾರದ ಮೇಲೆ ಸಚಿವ ಮಾಧುಸ್ವಾಮಿ ಮಾತನಾಡಿರಬಹುದು ಎಂದರು.
ಈ ಪ್ರಕರಣವನ್ನು ವಿರೋಧ ಪಕ್ಷಗಳು ದೊಡ್ಡದು ಮಾಡಲು ಹೊರಟಿವೆ. ಈ ಆಪಾದನೆ ಮೂಲಕ ತಮ್ಮ ಪಾಪಗಳು ಪರಿಹಾರ ಆಗಲಿವೆ ಎಂದುಕೊಂಡಿದ್ದಾರೆ. ಅವರು ಮಾಡಿರುವ ಭ್ರಷ್ಟಾಚಾರವನ್ನು ಸರಕಾರ ಮರೆತಿಲ್ಲ. ಅವರ ಅವಧಿಯಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿವೆ. ಇದೀಗ 59 ಪ್ರಕರಣಗಳನ್ನು ಲೋಕಾಯುಕ್ತಕ್ಕೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಯನ್ನು ಕೇಂದ್ರ ಸರಕಾರ ನಿರ್ಮಿಸುತ್ತದೆ. ಈ ಹೆದ್ದಾರಿ ಪ್ರಸ್ತಾಪ ಹೋಗಿದ್ದು 1993-94 ರಲ್ಲಿ. ಆಗ ಮುಖ್ಯಮಂತ್ರಿಯಾಗಿದ್ದವರು ಎಚ್.ಡಿ.ದೇವೇಗೌಡರು. ಹೀಗಿರುವಾಗ ಸಿದ್ದರಾಮಯ್ಯ ಅವರಿಗೆ ಹೇಗೆ ಕ್ರೆಡಿಟ್ ಸಿಗುತ್ತದೆ ಎಂದರು.