ನವದೆಹಲಿ:ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 58,097 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದು ಮಂಗಳವಾರಕ್ಕಿಂತ ಶೇ.55ರಷ್ಟು ಹೆಚ್ಚಳವಾದಂತಾಗಿದೆ. ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 2,135ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ (ಜನವರಿ 05) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಮೂಡಬಿದಿರೆ: ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ಸಾವು
ಮಂಗಳವಾರ ದೇಶದಲ್ಲಿ 37,379 ಕೋವಿಡ್ ಪ್ರಕರಣ ವರದಿಯಾಗಿತ್ತು, ಇಂದು ಕೋವಿಡ್ ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ (58,097) ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ 653 ಒಮಿಕ್ರಾನ್ ಪ್ರಕರಣ ದಾಖಲಾಗಿದ್ದು, ದೆಹಲಿಯಲ್ಲಿ 464 ಒಮಿಕ್ರಾನ್ ಪ್ರಕರಣ ವರದಿಯಾಗಿದೆ.
ಕೋವಿಡ್ ಪ್ರಕರಣಗಳ ಹೆಚ್ಚಳದ ನಡುವೆಯೇ ದೇಶಾದ್ಯಂತ ಲಸಿಕೆ ಅಭಿಯಾನ ತ್ವರಿತಗೊಳಿಸಲಾಗಿದೆ. ಇದೀಗ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಭಾರತದಲ್ಲಿ ಈವರೆಗೆ 147 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
24ಗಂಟೆಯಲ್ಲಿ 15,359 ಮಂದಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.98.01ರಷ್ಟಿದೆ. ದೇಶಾದ್ಯಂತ ಈವರೆಗೆ ಕೋವಿಡ್ ಸೋಂಕಿನಿಂದ ಒಟ್ಟು 3,43,21,803 ಮಂದಿ ಗುಣಮುಖರಾಗಿದ್ದಾರೆ ಎಂದು ಅಂಕಿಅಂಶದಲ್ಲಿ ತಿಳಿಸಿದೆ.