ನವದೆಹಲಿ: ಕಪ್ಪು ಹಣ ಪತ್ತೆ ಹಚ್ಚುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದ್ದ ನೋಟು ನಿಷೇಧ ಫಲಕಾರಿಯಾಗಿದ್ದು, 13 ಬ್ಯಾಂಕ್ ಗಳು ಸುಮಾರು 5, 800 ನಕಲಿ ಕಂಪನಿಗಳ ಮಾಹಿತಿಯನ್ನು ನೀಡಿರುವುದಾಗಿ ಶುಕ್ರವಾರ ಕೇಂದ್ರ ಸರ್ಕಾರ ತಿಳಿಸಿದ್ದು, ಅಲ್ಲದೇ ನೋಟು ನಿಷೇಧದ ಬಳಿಕ ಝೀರೋ ಬ್ಯಾಲೆನ್ಸ್ ಹೊಂದಿದ್ದ ಖಾತೆಗಳಲ್ಲಿ 4,574 ಕೋಟಿ ರೂಪಾಯಿ ಠೇವಣಿ ಇಟ್ಟಿರುವ ಮಾಹಿತಿ ಬೆಳಕಿಗೆ ಬಂದಿದೆ.
ನೋಟು ನಿಷೇಧದ ನಂತರ 5,800 ನಕಲಿ ಕಂಪನಿಗಳ 13, 140 ಖಾತೆಗಳಲ್ಲಿ 4,574 ಕೋಟಿ ರೂಪಾಯಿ ಡೆಪಾಸಿಟ್ ಇಟ್ಟಿರುವ ಬಗ್ಗೆ ಬ್ಯಾಂಕ್ ಗಳು ಮಾಹಿತಿ ನೀಡಿವೆ. ಅಲ್ಲದೇ ಈ ಖಾತೆಯಿಂದ ಈವರೆಗೆ 4, 552 ಕೋಟಿ ರೂಪಾಯಿಯನ್ನು ಹಿಂಪಡೆಯಲಾಗಿದೆ ಎಂದು ವರದಿ ತಿಳಿಸಿದೆ.
ಸರ್ಕಾರದ ಪ್ರಕಾರ, ಒಂದೊಂದು ಕಂಪನಿಗಳು ನೂರಕ್ಕೂ ಹೆಚ್ಚು ಖಾತೆಗಳನ್ನು ಹೊಂದಿವೆ. ಬ್ಯಾಂಕ್ ಗಳು ನೀಡಿರುವ ಮೊದಲ ಕಂತಿನ ಅಂಕಿಅಂಶ(ಡಾಟಾ)ದ ಪ್ರಕಾರ ನೋಟು ನಿಷೇಧದ ಬಳಿಕ ಈ ನಕಲಿ ಸಂಸ್ಥೆಗಳಿಂದ ಕೋಟ್ಯಂತರ ರೂಪಾಯಿ (2,09,032 ) ವರ್ಗಾವಣೆ ಆದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ತಿಂಗಳು ಸರ್ಕಾರವು 2 ಲಕ್ಷಕ್ಕೂ ಹೆಚ್ಚು ಕಾರ್ಯ ನಿರ್ವಹಿಸದೇ ನಾಮ್ ಕೆ ವಾಸ್ತೆ ಇರುವ’ ಕಂಪೆನಿಗಳ ಬ್ಯಾಂಕ್ ಖಾತೆಗಳ ಕಾರ್ಯಾಚರಣೆಗಳಿಗೆ ನಿರ್ಬಂಧಗಳನ್ನು ವಿಧಿಸಿ ಆದೇಶಿದಿತ್ತು. ಕಪ್ಪು ಹಣ ಮತ್ತು ನಕಲಿ ಸಂಸ್ಥೆಗಳ ವಿರುದ್ಧದ ಹೋರಾಟದಲ್ಲಿ ಇದೊಂದು ಮಹತ್ವದ ಬೆಳವಣಿಗೆ ಎಂದು ಕೇಂದ್ರ ಸರ್ಕಾರ ಬಣ್ಣಿಸಿದ್ದು, 2 ಲಕ್ಷದಷ್ಟು ಸಂಖ್ಯೆಯಲ್ಲಿರುವ ಈ ನಾಮ್ ಕೆ ವಾಸ್ತೆ ಸಂಸ್ಥೆಗಳಲ್ಲಿ ಇದೀಗ ಮೊದಲ ಹಂತವಾಗಿ 5,800 ಸಂಸ್ಥೆಗಳ ಮಾಹಿತಿ ದೊರಕಿದೆ ಎಂದು ತಿಳಿಸಿದೆ.