Advertisement

ಕುರುಡು ಕಾಂಚಾಣ ಭರ್ಜರಿ ಸದ್ದು: ರಾಜ್ಯದಲ್ಲಿ ಇದುವರೆಗೆ 58 ಕೋಟಿ ರೂ. ವಶಕ್ಕೆ

01:00 AM Mar 30, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಘೋಷಣೆ ಮುನ್ನವೇ “ಕುರುಡು ಕಾಂಚಾಣ’ ಭರ್ಜರಿ ಸದ್ದು ಮಾಡುತ್ತಿದೆ. ಇದುವರೆಗಿನ ಚುನಾವಣ ಅಕ್ರಮಗಳ ಮೊತ್ತ ಬರೋಬ್ಬರಿ 58 ಕೋ. ರೂ. ಆಗಿದ್ದು ಬೆಚ್ಚಿ ಬೀಳಿಸುವಂತಿದೆ.

Advertisement

ಮಾ. 9ರಿಂದ 27ರ ವರೆಗೆ ಒಟ್ಟು 1,985 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. ಅಕ್ರಮ ನಗದು ವಶಕ್ಕೆ ಸಂಬಂಧಿಸಿದ 196, ಮದ್ಯದ ಸಾಗಾಟ 1,406, ಬೆಲೆ ಬಾಳುವ ವಸ್ತುಗಳು 18, ಡ್ರಗ್ಸ್‌ 179 ಮತ್ತು ಉಡುಗೊರೆಗಳಿಗೆ ಸಂಬಂಧಿಸಿದ 186 ಎಫ್ಐಆರ್‌ಗಳು ಸೇರಿವೆ. ವಿವಿಧ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಒಟ್ಟು 26 ದೂರುಗಳನ್ನು ದಾಖಲಿಸಲಾಗಿದೆ.

ಮುಖ್ಯ ಚುನಾವಣ ಆಯುಕ್ತರು ಕರ್ನಾಟಕದಲ್ಲಿ ಹಣದ ಬಲವನ್ನು ನಿಯಂತ್ರಿಸುವುದೇ ದೊಡ್ಡ ಸವಾಲು ಎಂದು ಆತಂಕ ವ್ಯಕ್ತಪಡಿಸಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಪೊಲೀಸ್‌ ಇಲಾಖೆ ಒಟ್ಟು 34.36 ಕೋಟಿ ರೂ. ವಸ್ತುಗಳನ್ನು ವಶಪಡಿಸಿಕೊಂಡಿದೆ. ಇದರಲ್ಲಿ 14.24 ಕೋಟಿ ರೂ. ನಗದು, 530 ಕೆಜಿ ಡ್ರಗ್ಸ್‌, 15 ಕೆಜಿ ಚಿನ್ನ, 135 ಕೆಜಿ ಬೆಳ್ಳಿ ಸೇರಿದಂತೆ 11.20 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆಗಳು ಸೇರಿವೆ.

ಅಬಕಾರಿ ಇಲಾಖೆ ಯು 6.84 ಕೋಟಿ ರೂ. ನಗದು, 1.38 ಲಕ್ಷ ಲೀಟರ್‌ ಮದ್ಯ, 43 ಕೆಜಿ ಡ್ರಗ್ಸ್‌, ಆದಾಯ ತೆರಿಗೆ ಇಲಾಖೆ ಒಟ್ಟು 1.16 ಕೋಟಿ ರೂ. ನಗದು, ವಾಣಿಜ್ಯ ತೆರಿಗೆ ಇಲಾಖೆಯು ಒಟ್ಟು 5.12 ಕೋಟಿ ರೂ. ಮೌಲ್ಯದ ವಸ್ತುಗಳನ್ನು, ಡಿಆರ್‌ಐ ಒಟ್ಟು 1.03 ಕೋಟಿ ಮೌಲ್ಯದ ವಸ್ತುಗಳನ್ನು, ಎನ್‌ಸಿಬಿ 57.15 ಲಕ್ಷ ರೂ. ಮೌಲ್ಯದ ವಸ್ತುಗಳನ್ನು, ಸಿಬಿಐಸಿ ಒಟ್ಟು 3.97 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿವೆ.ರಾಜ್ಯದ ನಾಗರಿಕ ವಿಮಾನಯಾನ ವತಿಯಿಂದ 69.40 ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ.

ಈ ರೀತಿ ಮಾ. 9ರಿಂದ 27ರವರೆಗೆ ವಿವಿಧ ಇಲಾಖೆಗಳ ಎಲ್ಲ ತಂಡಗಳು ವಶಪಡಿಸಿಕೊಂಡು ವರದಿ ಮಾಡಿರುವ ನಗದು, ಮದ್ಯ, ಮಾದಕ ದ್ರವ್ಯ, ಅಮೂಲ್ಯ ವಸ್ತುಗಳು ಮತ್ತು ಉಚಿತ ವಸ್ತುಗಳ ಮೊತ್ತ ಬರೋಬ್ಬರಿ 57.72 ಕೋಟಿ ರೂ. ಆಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಪೊಲೀಸ್‌ ತಂಡಗಳು ಸೇರಿದಂತೆ ವಿವಿಧ ಇಲಾಖೆಗಳ ವಿಶೇಷ ತಂಡಗಳನ್ನು ರಾಜ್ಯಾದ್ಯಂತ ನಿಯೋಜಿಸಲಾಗಿದೆ. ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದ ನಗದು, ಉಚಿತ ಉಡುಗೊರೆ ಮತ್ತಿತರರ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ.

ನೀತಿ ಸಂಹಿತೆ ಜಾರಿ ತಂಡಗಳು
- 2,040 ಸಂಚಾರಿ ದಳಗಳು
- 2,605 ಸ್ಥಿರ ಕಣ್ಗಾವಲು ತಂಡಗಳು
- 266 ವೀಡಿಯೋ ವೀಕ್ಷಣೆ ತಂಡಗಳು
- 631 ವೀಡಿಯೋ ಕಣ್ಗಾವಲು ತಂಡಗಳು
- 225 ಲೆಕ್ಕಪರಿಶೋಧಕ ತಂಡಗಳು
- 234 ಸಹಾಯಕ ವೆಚ್ಚ ವೀಕ್ಷಕರು
- ಚೆಕ್‌ ಪೋಸ್ಟ್‌ಗಳು 942
- ಅಂತಾರಾಜ್ಯ ಗಡಿ ಚೆಕ್‌ ಪೋಸ್ಟ್‌ಗಳು -171

Advertisement

Udayavani is now on Telegram. Click here to join our channel and stay updated with the latest news.

Next