Advertisement

School: ಕಳೆದ ವರ್ಷಕ್ಕಿಂತ 567 ಶಾಲೆ ಕಡಿಮೆ: ಸದ್ದಿಲ್ಲದೆ ಮುಚ್ಚುತ್ತಿದೆ ಶಿಕ್ಷಣ ಇಲಾಖೆ

08:45 PM Aug 18, 2023 | Team Udayavani |

ಬೆಂಗಳೂರು: ಶೂನ್ಯ ದಾಖಲಾತಿ, ಮಕ್ಕಳ ದಾಖಲಾತಿ ಕೊರತೆ, ಶಿಕ್ಷಕರ ಕೊರತೆಗಳ ನೆಪವೊಡ್ಡಿ ಸರ್ಕಾರಿ ಶಾಲೆಗಳನ್ನು ಸದ್ದಿಲ್ಲದೆ ಒಂದೊಂದಾಗಿ ಮುಚ್ಚುವ ಪ್ರಯತ್ನ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ. ಶಾಲಾ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ ನೀಡುವ ಮಾಹಿತಿಯ ಪ್ರಕಾರ ಕಳೆದ ವರ್ಷಕ್ಕಿಂತ 2023-24ರ ಸಾಲಿನಲ್ಲಿ 567 ಶಾಲೆಗಳು ಕಡಿಮೆಯಾಗಿದೆ.

Advertisement

2022-23ರ ಸಾಲಿನಲ್ಲಿ ರಾಜ್ಯದಲ್ಲಿ 48,066 ಸರ್ಕಾರಿ ಶಾಲೆಗಳಿದ್ದರೆ ಈ ವರ್ಷ ಶಾಲೆಗಳ ಸಂಖ್ಯೆ 47,449ಕ್ಕೆ ಕುಸಿದಿದೆ. ಇನ್ನು ಕಾರ್ಪೋರೇಟ್‌ ಸಾಮಾಜಿಕ ನಿಧಿ (ಸಿಎಸ್‌ಆರ್‌) ಯನ್ನು ಬಳಸಿ 2 ರಿಂದ 3 ಗ್ರಾಮ ಪಂಚಾಯತ್‌ಗೆ ಒಂದರಂತೆ ಆಧುನಿಕ ಶಾಲೆಗಳನ್ನು ಸ್ಥಾಪಿಸುವ ಸರ್ಕಾರದ ಚಿಂತನೆಯ ಫ‌ಲವಾಗಿ ಸರ್ಕಾರಿ ಶಾಲೆಗಳ ಸಂಖ್ಯೆ ಇನ್ನಷ್ಟು ಕುಸಿಯುವ ಅಪಾಯವಿದೆ.

ಸರ್ಕಾರಿ ಶಾಲೆಗಳನ್ನು ಮುಚ್ಚುವ ಹೇಳಿಕೆ ವಿವಾದಕ್ಕೆ ಆಸ್ಪದ ನೀಡುವ ಹಿನ್ನೆಲೆಯಲ್ಲಿ ಸರ್ಕಾರ ಶಾಲೆಗಳನ್ನು ನೇರವಾಗಿ ಮುಚ್ಚದೆ, ಮಕ್ಕಳ ಕೊರತೆ, ಶಿಕ್ಷಕರ ಕೊರತೆಗಳೆಂಬ ನೆಪವೊಡ್ಡಿ ಪಕ್ಕದ ಶಾಲೆಗಳೊಂದಿಗೆ ವಿಲೀನಗೊಳಿಸುತ್ತಿದೆ.

ಈ ವರ್ಷದ ಮಕ್ಕಳ ದಾಖಲಾತಿ ಪ್ರಕ್ರಿಯೆಯ ಪರಿಷ್ಕರಣೆ ಈ ತಿಂಗಳ ಅಂತ್ಯದವೆರೆಗೂ ಚಾಲ್ತಿಯಲ್ಲಿರಲಿದೆ. ಅದೇ ರೀತಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆ, ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದರೂ ಸಹ ಶಿಕ್ಷಕರ ಬಡ್ತಿ ಪ್ರಕ್ರಿಯೆ ಪೂರ್ಣಗೊಳ್ಳಲು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಶೂನ್ಯ ದಾಖಲಾತಿ ಮತ್ತು ಹತ್ತಕ್ಕಿಂತ ಕಡಿಮೆ ದಾಖಲಾತಿ ಇರುವ, ಶೂನ್ಯ ಶಿಕ್ಷಕರಿರುವ, ಏಕೋಪಾಧ್ಯಯ ಶಾಲೆಗಳ ಖಚಿತ ಮಾಹಿತಿ ಇನ್ನಷ್ಟೆ ಹೊರಬರಬೇಕಿದೆ.

ಆದರೆ ಲಭ್ಯ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಸದ್ಯ ಆರು ಶಾಲೆಗಳನ್ನು ಶೂನ್ಯ ದಾಖಲಾತಿಯ ಕಾರಣಕ್ಕೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ದಕ್ಷಿಣ ಕನ್ನಡದ ಸುಳ್ಯ, ಉತ್ತರ ಕನ್ನಡದ ಕಾರವಾರದಲ್ಲಿ ಮೂರು, ಹೊನ್ನಾವರದಲ್ಲಿ ಎರಡು, ಅಂಕೋಲಾ ತಾಲೂಕಿನಲ್ಲಿ ಒಂದು ಶಾಲೆಯನ್ನು ಮುಚ್ಚಲಾಗಿದೆ, ಉಳಿದ 561 ಶಾಲೆಗಳ ವಿವರ ಇನ್ನಷ್ಟೆ ಹೊರಬರಬೇಕಿದೆ.

Advertisement

ಉಳಿದಂತೆ ರಾಜ್ಯದಲ್ಲಿ ಒಂದಂಕಿಯ ವಿದ್ಯಾರ್ಥಿಗಳಿರುವ ಶಾಲೆಗಳ ಸಂಖ್ಯೆ ಸರಿ ಸುಮಾರು 3,700ರಷ್ಟಿದೆ. ಅದೇ ರೀತಿ ಏಕೋಪಾಧ್ಯಯ ಶಾಲೆಗಳ ಸಂಖ್ಯೆ 6,500ರಷ್ಟಿದೆ. ಸಹ ಶಿಕ್ಷಕರ ಬಡ್ತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಆಗುವ ನಿರೀಕ್ಷೆಯಿದೆ.

ಇನ್ನು 13,500 ಶಿಕ್ಷಕರ ನೇಮಕ ಪ್ರಕ್ರಿಯೆಯ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಸುಮಾರು ಹತ್ತು ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಮಂದಾಗಿದೆ. ಕಾಯಂ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಯಾವಾಗ ಪೂರ್ಣಗೊಳ್ಳಲಿದೆ ಎಂಬ ಸ್ಪಷ್ಟತೆ ಸರ್ಕಾರಕ್ಕೆ ಇನ್ನೂ ಲಭಿಸಿಲ್ಲ.

ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದ ಹಳ್ಳಿಗಳಿಗೆ ಮರು ವಲಸೆ 2020 ರಿಂದ 2022ರ ತನಕ ಸರ್ಕಾರಿ ಶಾಲೆಗೆ ದಾಖಲಾತಿ ತುಸು ಚಿಗಿತುಕೊಂಡಿತ್ತು. ಆದರೆ ಈ ವರ್ಷ ಅಂತಹ ಉತ್ಸಾಹ ಕಂಡು ಬಂದಿಲ್ಲ. ಆದ್ದರಿಂದ ಈ ವರ್ಷ ಸರ್ಕಾರಿ ಶಾಲೆಗಳಿಗೆ ಮಕ್ಕಳ ನೋಂದಣಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ ಎಂಬ ಮಾಹಿತಿಯೂ ಇದೆ. ಆದರೆ ಶಿಕ್ಷಣ ಇಲಾಖೆ ಈ ಮಾಹಿತಿಯನ್ನು ಇನ್ನಷ್ಟೇ ದೃಢಗೊಳಿಸಬೇಕಿದೆ.

ಶಿಕ್ಷಣ ಇಲಾಖೆಯ ವೆಬ್‌ಸೈಟ್‌ ಮಾಹಿತಿ
ಸರ್ಕಾರಿ ಶಾಲೆಗಳು – 47,449
ವಿದ್ಯಾರ್ಥಿಗಳ ಸಂಖ್ಯೆ – 42,66,645
ಶಿಕ್ಷಕರ ಸಂಖ್ಯೆ – 1,73,647

Advertisement

Udayavani is now on Telegram. Click here to join our channel and stay updated with the latest news.

Next