Advertisement
ನೀಲಗಿರಿ ನಿಷೇಧಕ್ಕೆ ಹೋರಾಟ: ನೀಲಗಿರಿ ಮತ್ತು ಅಕೇಷಿಯಾ ಮರಗಳು ಹೆಚ್ಚು ಪ್ರಮಾಣದಲ್ಲಿ ಅಂತರ್ಜಲವನ್ನು ಹೀರುತ್ತವೆ. ಆ ಮರಗಳು ಬೆಳೆಯುವ ಪ್ರದೇಶದಲ್ಲಿ ಬೇರೆ ಪ್ರಭೇದದ ಗಿಡ, ಮರಗಳು ಬೆಳೆಯುವುದಿಲ್ಲ. ಅಷ್ಟೇಕೆ ಹುಲ್ಲು ಕೂಡ ಬೆಳೆಯುವುದಿಲ್ಲ. ಹಾಗಾಗಿ ನೀಲಗಿರಿ ಮತ್ತು ಅಕೇಷಿಯಾ ಬೆಳೆಯುವುದನ್ನು ರಾಜ್ಯದಲ್ಲಿ ನಿರ್ಬಂಧಿಸಬೇಕು ಎಂದು ರೈತ ಸಂಘಟನೆಗಳು ಹಾಗೂ ಪರಿಸರವಾದಿಗಳ ಹಲವು ವರ್ಷಗಳ ಫಲವಾಗಿ ನೀಲಗಿರಿ ಮತ್ತು ಅಕೇಷಿಯಾ ಮರಗಳನ್ನು ಹಂತ, ಹಂತವಾಗಿ ತೆರವುಗೊಳಿಸಲು ಸರ್ಕಾರ ಮುಂದಾಗಿದ್ದು, ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದೆ. ಅರಣ್ಯ ಇಲಾಖೆ 2020-21ನೇ ಸಾಲಿನಿಂದ ಈ ಎರಡೂ ಪ್ರಭೇದದ ಗಿಡ, ಮರಗಳನ್ನು ತೆರವುಗೊಳಿಸುವ ಕಾರ್ಯಯೋಜನೆ ಜಾರಿಯಾಗುತ್ತಿದೆ. ಈ ಆರ್ಥಿಕ ವರ್ಷದಲ್ಲಿ ಹಾಸನ ಜಿಲ್ಲೆಯಲ್ಲಿ 560 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ನೀಲಗಿರಿ ಮತ್ತು ಅಕೇಷಿಯಾ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಕಾರ್ಯಯೋಜನೆಯನ್ನು ರೂಪಿಸಿದೆ.
Related Articles
Advertisement
ನೀಲಗಿರಿ, ಅಕೇಶಿಯಾ ತೆರವಾಗಲಿರುವ ಪ್ರದೇಶಗಳು: ಪ್ರಾದೇಶಿಕ ವಿಭಾಗವು 2020-21ನೇ ಸಾಲಿನಲ್ಲಿ ನೀಲಗಿರಿ ಮತ್ತು ಅಕೇಷಿಯಾ ತೆರವುಗೊಳಿಸಲು ಉದ್ದೇಶಿಸಿರುವ ಜಿಲ್ಲೆಯ 360 ಹೆಕ್ಟೇರ್ ಪ್ರದೇಶಗಳೆಂದರೆ, ಬೇಲೂರು ತಾಲೂಕಿನ ಹಗರೆ ಗ್ರಾಮದಲ್ಲಿ 50 ಹೆಕ್ಟೇರ್, ಪ್ರಸಾದಿಹಳ್ಳಿ 20 ಹೆಕ್ಟೇರ್, ಐದಳ್ಳ ಕಾವಲು 30 ಹೆಕ್ಟೇರ್, ರಾಮದೇವರಹಳ್ಳ 25 ಹೆಕ್ಟೇರ್, ಹುಲುಗುಂಡಿ 20 ಹೆಕ್ಟೇರ್, ತಿರುಮಲದೇವರ ಗುಡ್ಡ ( ಟಿ.ಡಿ.ಗುಡ್ಡ)ದ 4 ಬ್ಲಾಕ್‌ಗಳಲ್ಲಿನ 80 ಹೆಕ್ಟೇರ್, ಆಲೂರು ತಾಲೂಕಿನ ಬಲ್ಲೂರು ಬೆಟ್ಟಹಳ್ಳಿ 35 ಹೆಕ್ಟೇರ್, ಅರಸೀಕೆರೆ ತಾಲೂಕು ಡಿ.ಎಂ.ಕುರ್ಕೆಯ 2 ಬ್ಲಾಕ್‌ಗಳಲ್ಲಿ 75 ಹೆಕ್ಟೇರ್, ಚನ್ನರಾಯಪಟ್ಟಣ ತಾಲೂಕು ಮಲ್ಲಪ್ಪನಬೆಟ್ಟದಲ್ಲಿನ 25 ಹೆಕ್ಟೇರ್ ಪ್ರದೇಶದಲ್ಲಿ ನೀಲಗಿರಿ ಮತ್ತುಅಕೇಷಿಯಾ ತೆರವುಗೊಳಿಸಲು ಯೋಜಿಸಿದೆ.
ಸಾಮಾಜಿಕ ಅರಣ್ಯ ವಿಭಾಗವು ವಿಸ್ತಾರವಾದ ಪ್ರದೇಶಗಳಲ್ಲಿ ನೀಲಗಿರಿ ಮತ್ತು ಅಕೇಷಿಯಾ ಬೆಳೆಸಿಲ್ಲ. ಜಿಲ್ಲೆಯ 110 ಪ್ರದೇಶಗಳಲ್ಲಿ 5 ರಿಂದ 42 ಹೆಕ್ಟೇರ್‌ವರೆಗಿನ ಪ್ರದೇಶಗಳಲ್ಲಿ ನೀಲಗಿರಿ ಮತ್ತು ಅಕೇಷಿಯಾ ಬೆಳೆಸಿದ್ದು, ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮದ ಬಳಿ 42 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವುದೇ ವಿಸ್ತಾರವಾದ ಪ್ರದೇಶ. ಆಯ್ದ ಪ್ರದೇಶಗಳಲ್ಲಿ ಅಂದರೆ ಗಿಡಗಳನ್ನು ನೆಟ್ಟು ಗರಿಷ್ಠ ಅವಧಿಯಾಗಿರುವ 200 ಹೆಕ್ಟೇರ್ ಪ್ರದೇಶಗಳಲ್ಲಿ ನೀಲಗಿರಿ ಮತ್ತು ಅಕೇಷಿಯಾ ತೆರವುಗೊಳಿಸಲು ಪ್ರಸ್ತಾವನೆ ಸಿದ್ಧಪಡಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿದೆ.
ಹಂತ ಹಂತವಾಗಿ ನೀಲಗಿರಿ, ಅಕೇಷಿಯಾ ತೆರವು: ನೀಲಗಿರಿ ಮತ್ತು ಅಕೇಷಿಯಾ ನೆಟ್ಟು ಕನಿಷ್ಠ 10 ವರ್ಷಗಳಾದ ನಂತರ ಕಟಾವು ಮಾಡಬೇಕು. ಹಾಗಾಗಿ ಎಲ್ಲೆಲ್ಲಿ ಹೆಚ್ಚು ಅವಧಿಯಾಗಿದೆ ಹಾಗೂ ಬಲಿತ ನೀಲಗಿರಿ ಮತ್ತು ಅಕೇಷಿಯಾ ಮರಗಳನ್ನು ಹಂತ, ಹಂತವಾಗಿ ತೆರವುಗೊಳಿಸಲಾಗುವುದು ಎಂದು ಹಾಸನ ಪ್ರಾದೇಶಿಕ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು ತಿಳಿಸಿದ್ದಾರೆ. ಬುರಡಾಳುಬೋರೆ ಅರಣ್ಯದಲ್ಲಿ ನೀಲಗಿರಿ ತೆರವುಗೊಳಿಸಬೇಕೆಂದು ಪರಿಸರವಾದಿಗಳ ಒತ್ತಡವಿದೆ. ಆದರೆ ಅಲ್ಲಿ ಮರಗಳು ಬಲಿಯಲು ಇನ್ನೂ ಒಂದು ವರ್ಷ ಬೇಕಾಗಿದೆ. 2021 ರ ನಂತರ ಬುರುಡಾಳು ಬೋರೆಯ ಮರಗಳನ್ನು ತೆರವುಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ಸಾಮಾಜಿಕ ಅರಣ್ಯ ವಿಭಾಗದಲ್ಲಿ ತೆರವು: ಸಾಮಾಜಿಕ ಅರಣ್ಯ ವಿಭಾಗದಲ್ಲಿ ಈ ವರ್ಷ 200 ಹೆಕ್ಟೇರ್ ಪ್ರದೇಶದಲ್ಲಿ ನೀಲಗಿರಿ ಮತ್ತು ಅಕೇಷಿಯಾ ತೆರವುಗೊಳಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ಹಾಸನ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್. ಅನುಪಮ ತಿಳಿಸಿದ್ದಾರೆ. ಸರ್ಕಾರದಿಂದ ಅನುಮೋದನೆ ಸಿಕ್ಕ ಬಳಿಕ ಮೊದಲು ನೀಲಗಿರಿ ಮತ್ತು ಅಕೇಷಿಯಾ ತೆರವುಗಳಿಸಿ ದೇಸಿ ಪ್ರಭೇದದ ಗಿಡಗಳಾದ ಹೆಬ್ಬೇವು, ಆಲ, ಅರಳಿ, ನೇರಳೆ, ಹೊಂಗೆ, ಹಿಪ್ಪೆ, ಮುತ್ತಗ ಗಿಡಗಳನ್ನು ನೆಡುವ ಕ್ರಿಯಾಯೋಜನೆ ಸಿದ್ಧಪಡಿಸಲಾಗುವುದು ಎಂದು ಹೇಳಿದ್ದಾರೆ.
ಪರಿಸರಕ್ಕೆ ಪೂರಕವಲ್ಲ: ನೀಲಗಿರಿ ಮತ್ತು ಅಕೇಷಿಯಾ ನಮ್ಮ ದೇಶದ ಪ್ರಭೇದಗಳಲ್ಲ. ಆ ಪ್ರಭೇದಗಳು ಅತಿ ಹೆಚ್ಚು ಅಂತರ್ಜಲ ಹೀರುತ್ತವೆ. ಅವುಗಳನು ಹಣ್ಣು ಬಿಡುವುದಿಲ್ಲ. ಅವುಗಳ ಎಲೆಗಳೂ ಬಹುಬೇಗ ಕರಗುವುದಿಲ್ಲ ಎಂದು ವಕೀಲರು ಮತ್ತು ಪರಿಸರವಾದಿ ಎಚ್.ಎ.ಕಿಶೋರ್ ಹೇಳಿದ್ದಾರೆ. ಪರಿಸರ ಪೂರಕವಲ್ಲದ ನೀಲಗಿರಿ ಅಕೇಷಿಯಾವನ್ನು ಬರಡು ಭೂಮಿಯಲ್ಲಿ ಬೆಳೆಯಬೇಕು ಎಂದಿದ್ದರೂ ಅರಣ್ಯ ಇಲಾಖೆಯವರು ಫಲವತ್ತಾದ ಪ್ರದೇಶಗಳಲ್ಲೂ ಬೆಳೆಸಿದರು.
ವಿಜಯಶಂಕರ್ ಅವರು ಅರಣ್ಯ ಸಚಿವರಾಗಿದ್ದಾಗ ನೀಲಗಿರಿ ಮತ್ತು ಅಕೇಷಿಯಾ ಪ್ರಭೇದಗಳನ್ನು ತೆರವುಗೊಳಿಸಿ ದೇಸಿ ಪ್ರಭೇದಗಳನ್ನು ಬೆಳೆಸಬೇಕು ಎಂದು ನಿರ್ಧರಿಸಿದ್ದರು. ತಡವಾಗಿಯಾದರೂ ಆ ನಿರ್ಧಾರ ಜಾರಿಯಾಗುತ್ತಿದೆ. ನೀಲಗಿರಿ ಮತ್ತು ಅಕೇಷಿಯಾ ಅತಿಹೆಚ್ಚು ಅಂತರ್ಜಲ ಹೀರುವುದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದರೂ ಆ ಪ್ರಭೇದಗಳು ಪರಿಸರ ಪೂರಕವಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ದರಿಂದ ಆದಷ್ಟೂ ತ್ವರಿತವಾಗಿ ಆ ಎರಡೂ ಪ್ರಬೇಶಗಳ ಮರಗಳನ್ನು ಸಂಪೂರ್ಣ ತೆರವುಗೊಳಿಸಿ ದೇಸಿ ಪ್ರಭೇದಗಳನ್ನು ಬೆಳೆಸಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
* ಎನ್. ನಂಜುಂಡೇಗೌಡ