ಮಾಸ್ಕೋ: 370 ಜನರಿದ್ದ ಮಲೇಷ್ಯಾ ಏರ್ ಲೈನ್ಸ್, 13 ಮಂದಿ ಪ್ರಯಾಣಿಕರಿದ್ದ ಭಾರತೀಯ ವಾಯುಸೇನೆ ವಿಮಾನ ಹೀಗೆ ಹಲವಾರು ವಿಮಾನಗಳು ನಿಗೂಢವಾಗಿ ನಾಪತ್ತೆಯಾಗಿರುವುದು ವರದಿಯಾಗಿದೆ. ಆದರೆ ರಷ್ಯಾದ ಆರ್ಕಿಕ್ಟ್ ಪ್ರದೇಶದಲ್ಲಿನ 55 ಟನ್ ತೂಕದ ಕಬ್ಬಿಣದ ಸೇತುವೆಯನ್ನೇ ಕತ್ತರಿಸಿಕೊಂಡು ಹೋಗಿದ್ದು, ಈವರೆಗೂ ಕಳ್ಳರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ.
ಡೈಲಿ ಮೇಲ್ ವರದಿ ಪ್ರಕಾರ, ರಷ್ಯಾದ ಮುರ್ಮಾಸ್ಕ್ ಪ್ರದೇಶದ ಊಂಬಾ ನದಿಗೆ ನಿರ್ಮಿಸಲಾಗಿದ್ದ 75 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನು ಕತ್ತರಿಸಿ ತೆಗೆಯಲಾಗಿದೆ. ಹೀಗೆ ಏಕಾಏಕಿ ಸೇತುವೆ ನಾಪತ್ತೆಯಾಗಿರುವ ಸುದ್ದಿ ರಷ್ಯಾದ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡತೊಡಗಿದಾಗ ಪ್ರಕರಣ ಬೆಳಕಿಗೆ ಬಂದಿರುವುದಾಗಿ ವರದಿ ವಿವರಿಸಿದೆ.
ರಷ್ಯಾದ ಆನ್ ಲೈನ್ ಸೋಶಿಯಲ್ ಮೀಡಿಯಾ ತಾಣವಾದ ವಿಕೆಯಲ್ಲಿ ಪ್ರಕಟವಾದ ಚಿತ್ರದಲ್ಲಿ, ಸೇತುವೆ ಒಂದು ಭಾಗ ನದಿಗೆ ಬಿದ್ದಿದೆ. ಸುಮಾರು ಹತ್ತು ದಿನಗಳ ನಂತರ ನಿಗೂಢವಾಗಿ ನಾಪತ್ತೆಯಾದ ಸೇತುವೆ ಎಂಬ ಸುದ್ದಿ ವಿಕೆಯಲ್ಲಿ ಹರಿದಾಡಿತ್ತು. ಬಳಿಕ ನೀರಿನಲ್ಲಿ ಬಿದ್ದಿದ್ದ ಕಬ್ಬಿಣದ ಸೇತುವೆ ನಾಪತ್ತೆಯಾಗಿತ್ತು ಎಂದು ಪೋಸ್ಟ್ ಹಾಕಿರುವುದಾಗಿ ವರದಿ ತಿಳಿಸಿದೆ.
ಯಾರೋ ಅಪರಿಚಿತರು ಇದನ್ನು ಕದ್ದೊಯ್ದಿದ್ದಾರೆ. ವಸ್ತುಸ್ಥಿತಿ ಪ್ರಕಾರ ಈ ಅತೀ ಭಾರದ ಸೇತುವೆಯನ್ನು ಸುಲಭಕ್ಕೆ ತುಂಡರಿಸಲು ಸಾಧ್ಯವಿಲ್ಲ ಎಂದು ಹೇಳಿರುವ ವರದಿ, ನಾಪತ್ತೆಯಾಗಿರುವ ಸೇತುವೆಯ ದೃಶ್ಯವನ್ನು ಏರಿಯಲ್ (ವೈಮಾನಿಕ) ಮೂಲಕ ಸೆರೆಹಿಡಿಯಲಾಗಿರುವುದನ್ನು ಪೋಸ್ಟ್ ಮಾಡಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಈ ಸೇತುವೆಯನ್ನು ಉದ್ದೇಶಪೂರ್ವಕವಾಗಿ ಕತ್ತರಿಸಿ, ನಂತರ ಕಳ್ಳರು ಅದನ್ನು ಕದ್ದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಕಿರೋವಸ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೇತುವೆ ನಾಪತ್ತೆಯಾಗಿರುವ ಘಟನೆ ತನಿಖೆ ನಡೆಯುತ್ತಿದೆ. ಆದರೆ ಕಳ್ಳರ ಗುರುತು ಈವರೆಗೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ!