Advertisement

55 ಕೆಸ್ಸಾರ್ಟಿಸಿ ಬಸ್‌ ಪರವಾನಗಿ ರದ್ದು ಪ್ರಕರಣ

03:45 AM Jul 04, 2017 | Team Udayavani |

ಉಡುಪಿ: ಉಡುಪಿ ನಗರದಿಂದ ಸಂಚರಿಸುವ 55 ಕೆಎಸ್ಸಾರ್ಟಿಸಿ ಬಸ್‌ಗಳ ಪರವಾನಿಗೆ ರದ್ದು ಮಾಡಿ ರಾಜ್ಯ ಹೈಕೋರ್ಟ್‌ ಆದೇಶ ಹೊರಡಿಸಿದ್ದರೂ ನಿರಾತಂಕವಾಗಿ ಸಂಚಾರ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸೋಮವಾರ ಖಾಸಗಿ ಬಸ್‌ ಮಾಲಕರ ಸಂಘದ ವತಿಯಿಂದ ರಾಜ್ಯ ಖಾಸಗಿ ಬಸ್‌ ಮಾಲಕರ ಸಂಘ ಹಾಗೂ ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಹಾಗೂ ಪ್ರಾದೇಶಿಕ ಸಾರಿಗೆ ಉಪ ಆಯುಕ್ತ‌ ಎಚ್‌. ಗುರುಮೂರ್ತಿ ಕುಲಕರ್ಣಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. 

Advertisement

ನ್ಯಾಯಾಲಯದ ಆದೇಶ ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಆದೇಶವನ್ನು ತಲುಪಿಸಿದ್ದರೂ, ವಿಚಾರಣೆ ವೇಳೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೈಕೋರ್ಟಿನಲ್ಲಿ ಖುದ್ದು ಹಾಜರಿದ್ದರು. ಆದರೂ ಅಧಿಕೃತ ಆದೇಶ ಸಿಕ್ಕಿಲ್ಲವೆನ್ನುತ್ತಾರೆ. ಅದೇ ಖಾಸಗಿ ಬಸ್‌ಗಳ ವಿರುದ್ಧ ಇಂತಹ ಆದೇಶ ಬಂದರೆ ತತ್‌ಕ್ಷಣ ಜಾರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಒತ್ತಡ ಹಾಕುವುದಲ್ಲದೆ, ಪ್ರಹಾರವೇ ನಡೆಸುತ್ತಾರೆ. ಈ ರೀತಿಯ ಪಕ್ಷಪಾತಿ ಧೋರಣೆ ಸರಿಯಲ್ಲ ಎಂದು ಖಾಸಗಿ ಬಸ್‌ ಮಾಲಕರ ಸಂಘದ ಸದಸ್ಯರು ಅಳಲು ತೋಡಿಕೊಂಡರು.

ಜೂ. 22ಕ್ಕೆ ಆದೇಶ ಪ್ರಕಟ
ಬಸ್‌ಗಳ ಸಂಚಾರಕ್ಕೆ ತಡಯೊಡ್ಡಿ ಜೂ. 22 ರಂದು ನ್ಯಾ| ಎಸ್‌. ಸುಜಾತ ನೇತೃತ್ವದ ಹೈಕೋರ್ಟ್‌ ಪೀಠ ಆದೇಶ ನೀಡಿತ್ತು. ಜೂ. 29 ರಂದು ಕೆಸ್ಸಾರ್ಟಿಸಿ ಅಧಿಕಾರಿಗಳಿಗೆ ಅಧಿಕೃತ ಪತ್ರ ರವಾನೆಯಾಗಿದೆ ಎಂದು ಆರ್‌ಟಿಓ ಅಧಿಕಾರಿಗಳು ಹೇಳುತ್ತಾರೆ. ಆದರೂ ಆದೇಶ ಪಾಲನೆಗೆ ಮೀನಮೇಷ ಎಣಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹಾಳಾದರೆ ಕೆಎಸ್ಸಾರ್ಟಿಸಿ ಹಾಗೂ ಸಾರಿಗೆ ಅಧಿಕಾರಿಗಳೇ ಹೊಣೆ ಎಂದು ಆರೋಪಿಸಿದ್ದಾರೆ. 

ರದ್ದು ಯಾಕೆ?
ಹೈಕೋರ್ಟ್‌ 55 ಸರಕಾರಿ ಬಸ್‌ಗಳ ಪರವಾನಗಿ ರದ್ದುಗೊಳಿಸಲು ಕಾರಣ ಸಮಯದ ವೇಳಾಪಟ್ಟಿ ಗೊಂದಲ. 1997 ಹಾಗೂ 2007ರ ಕಾಯ್ದೆ ಪ್ರಕಾರ ಎಲ್ಲ ಸರಕಾರಿ ಹಾಗೂ ಖಾಸಗಿ ಬಸ್‌ಗಳಿಗೆ ಒಂದೇ ರೀತಿಯ ಸಮಯದ ಅಂತರವನ್ನು ನಿಗದಿ ಮಾಡಬೇಕು ಎಂದಿದೆ. ಆದರೆ ಈಗ ಹೊಸದಾಗಿ ಬಂದಿರುವ ನರ್ಮ್ ಬಸ್‌ಗಳ ವೇಳಾಪಟ್ಟಿಯಲ್ಲಿ ಅನೇಕ ವ್ಯತ್ಯಾಸಗಳಿವೆ. ಅದಲ್ಲದೆ ಪ್ರಕರಣ ಕೋರ್ಟ್‌ನಲ್ಲಿರುವಾಗ ಬಸ್‌ಗಳಿಗೆ ಪರವಾನಿಗೆ ನೀಡುವ ಹಕ್ಕಿಲ್ಲ. ಆ ಕಾರಣ ಹೈಕೋರ್ಟ್‌ ರದ್ದುಗೊಳಿಸಿದೆ. 

ನಿಯೋಗದಲ್ಲಿ ಉಡುಪಿ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಶಿವರಾಮ ಶೆಟ್ಟಿ, ವಿನಯ ಮೂರ್ತಿ, ಪ್ರವೀಣ್‌ ಶೆಟ್ಟಿ, ಸುಧಾಕರ ಕಲ್ಮಾಡಿ, ಇಬ್ರಾಹಿಂ ಮನ್ನಾರ್‌, ಹಮೀದ್‌, ಅಜಯ್‌ ರಾವ್‌, ಕಿರಣ್‌ ರಾವ್‌ ಮತ್ತಿತರರು ಉಪಸ್ಥಿತರಿದ್ದರು.  

Advertisement

ಸಾರಿಗೆ ಆಯುಕ್ತರ ಜತೆ ಚರ್ಚಿಸಿ ನಿರ್ಧಾರ
ಖಾಸಗಿ ಬಸ್‌ ಮಾಲಕರ ಪರವಾಗಿ ಮನವಿ ಬಂದಿದೆ. ಶೀಘ್ರ ಪರಿಶೀಲಿಸುತ್ತೇವೆ. ಕೆಸ್ಸಾರ್ಟಿಸಿ ಬಸ್‌ ಅಧಿಕಾರಿಗಳಿಗೂ ಸ್ವಲ್ಪ ಸಮಯ ನೀಡಬೇಕಾಗುತ್ತದೆ. ಸಾರಿಗೆ ಆಯುಕ್ತರ ಜತೆ ಮಾತನಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. 
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಜಿಲ್ಲಾಧಿಕಾರಿ

ಡಿಸಿ ಜತೆ ಚರ್ಚಿಸಿ ಸೂಕ್ತ ಕ್ರಮ
ಕೆಎಸ್ಸಾರ್ಟಿಸಿಗೆ ನೀಡಿರುವ 55 ಬಸ್‌ಗಳ ಪರವಾನಗಿಯನ್ನು ರದ್ದುಗೊಳಿಸಿ ಹೈಕೋರ್ಟ್‌ ಆದೇಶ ನೀಡಿದೆ. ಕೋರ್ಟ್‌ ಆದೇಶ ಪಾಲಿಸುವಂತೆ ಕೆಎಸ್ಸಾರ್ಟಿಸಿಗೂ ಸೂಚನೆ ಕೊಟ್ಟಿದ್ದೇವೆ. ನ್ಯಾಯಾಲಯದ ಆದೇಶ ಧಿಕ್ಕರಿಸಿದರೆ ಕೋರ್ಟ್‌ ಆದೇಶ ಉಲ್ಲಂಘನೆಗೆ ಗುರಿಯಾಗಬೇಕಾಗುತ್ತದೆ. ಜಿಲ್ಲಾಧಿಕಾರಿ ಜತೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ. 
  – ಎಚ್‌. ಗುರುಮೂರ್ತಿ ಕುಲಕರ್ಣಿ, ಪ್ರಭಾರ ಉಪ ಸಾರಿಗೆ ಆಯುಕ್ತ

ಆದೇಶ ಉಲ್ಲಂಘನೆ ಅರ್ಜಿ ಹಾಕುತ್ತೇವೆ
ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಮುತ್ತಿಗೆ ಹಾಕುವ ನಿರ್ಧಾರವನ್ನು ಸದ್ಯಕ್ಕೆ ತಡೆಯಲಾಗಿದೆ. ಹೈಕೋರ್ಟ್‌ ಆದೇಶದಂತೆ ಸರಕಾರಿ ಬಸ್‌ಗಳನ್ನು ತತ್‌ಕ್ಷಣ ನಿಲ್ಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಸಾರಿಗೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಇನ್ನೂ ಆದೇಶ ಸಿಕ್ಕಿಲ್ಲ ಎನ್ನುತ್ತಿದ್ದಾರೆ. ಇದು ಕಾನೂನು ಉಲ್ಲಂಘನೆಯಾಗುತ್ತದೆ. ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಆದೇಶ ಉಲ್ಲಂಘನೆ ಅರ್ಜಿ ಸಹ ಸಲ್ಲಿಸಲಿದ್ದೇವೆ. 

 – ರಾಜವರ್ಮ ಬಲ್ಲಾಳ್‌, ಅಧ್ಯಕ್ಷರು ರಾಜ್ಯ ಖಾಸಗಿ ಬಸ್‌ ಮಾಲಕರ ಸಂಘ, ಕೆನರಾ ಬಸ್‌ ಮಾಲಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next