ಪಣಜಿ, ನ. 22: ಈ ಬಾರಿಯ ಭಾರತೀಯ ಪನೋರಮಾ ವಿಭಾಗ ಸಿನಿ ಉತ್ಸಾಹಿಗಳಿಗೆ ತೆರೆದುಕೊಂಡಿದ್ದು ಮಲಯಾಳಂ ಭಾಷೆಯ ಅಟ್ಟಂ ಸಿನಿಮಾದ ಮೂಲಕ. 1978ರಲ್ಲಿ ಭಾರತೀಯ ಭಾಷೆಗಳ ಚಲನಚಿತ್ರಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸುವ ಸಲುವಾಗಿ ಈ ವಿಭಾಗವನ್ನು ಆರಂಭಿಸಲಾಯಿತು.
ಇದನ್ನೂ ಓದಿ:54th IFFI Goa:ನಿರ್ದೇಶಕನ ನಿರೀಕ್ಷೆ ಈಡೇರಿಸುವುದು ನಟನ ಆದ್ಯತೆ: ನಟ ವಿಜಯ್ ಸೇತುಪತಿ
ಈ ಬಾರಿಯ 54ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಇಫಿ) 25 ಕಥಾ ಸಿನಿಮಾಗಳು ಹಾಗೂ 20 ಕಥೇತರ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಇದರಲ್ಲಿ ಕನ್ನಡದ ಸಂದೀಪ್ ಕುಮಾರ್ ವಿ ನಿರ್ದೇಶಿಸಿದ ಆರಾರಿರಾರೋ ಚಲನಚಿತ್ರ ಪ್ರದರ್ಶನವಾಗುತ್ತಿದೆ. ಹಾಗೆಯೇ ರಿಷಭ್ ಶೆಟ್ಟಿಅಭಿನಯದ ʼಕಾಂತಾರʼ ಸಹ ಅಂತಾರಾಷ್ಟ್ರೀಯ ಸ್ಪರ್ಧೆ ಹಾಗೂ ಭಾರತೀಯ ಪನೋರಮಾ ವಿಭಾಗದಡಿ ಪ್ರದರ್ಶಿಸಲಾಗುತ್ತಿದೆ.
ನ. 21ರಂದು ಆರಂಭಗೊಂಡು ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿತವಾದ ಆಟ್ಟಂ ಚಲನಚಿತ್ರದ ನಿರ್ದೇಶಕ ಆನಂದ್ ಏಕರ್ಷಿ ಮಾತನಾಡುತ್ತಾ, ʼಕೆಲವು ಅನಿರೀಕ್ಷಿತ ಸನ್ನಿವೇಶಗಳಿಗೆ ಒಬ್ಬ ವ್ಯಕ್ತಿ ಹಾಗೂ ನನ್ನ ಚಿತ್ರ ವ್ಯಕ್ತಿ ಹಾಗೂ ಸಮೂಹ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಹೇಳಲು ನನ್ನ ಚಿತ್ರದ ಮೂಲಕ ಪ್ರಯತ್ನಿಸಿದ್ದೇನೆ. ಅದರೆ ಇದು ಯಾವುದೇ ಲಿಂಗ ಅಥವಾ ಪಿತೃ ಪ್ರಧಾನ ಸಂಗತಿಗಳ ಕುರಿತಾಗಿ ಅಲ್ಲʼ ಎಂದರು.
“ಪುರುಷ ಸಮೂಹವಾಗಿದ್ದು, ವ್ಯಕ್ತಿಯೊಬ್ಬ ನೆಲೆಯಲ್ಲಿ ಮಹಿಳೆ ಇದ್ದರೆ ಹೇಗಿರುತ್ತದೆ ಎಂಬುದು ಮತ್ತೊಂದು ನೆಲೆ. ಆದರೆ ಇದು ಲಿಂಗ ಅಸಮಾನತೆ ಬಗೆಗಾಗಲೀ, ಯಾವುದೋ ನಿರ್ದಿಷ್ಟ ಪ್ರದೇಶದ ಬಗೆಗಾಗಲಿ ಸಂಬಂಧಪಟ್ಟಿಲ್ಲʼ ಎಂದರಲ್ಲದೇ, ʼಈ ಚಿತ್ರ ಖಂಡಿತಾ 12 ಆಂಗ್ರಿ ಮೆನ್ ನಿಂದ ಪ್ರೇರಿತವಾಗಿಲ್ಲ. ಕೆಲವರು ಹಾಗೆ ಹೋಲಿಸಿದರೆ ಅದು ಗೌರವವೆಂದಷ್ಟೇ ಸ್ವೀಕರಿಸುವೆ. ಈ ಸಿನಿಮಾದ ಆಲೋಚನೆ ಕೋವಿಡ್ ಸಂದರ್ಭದಲ್ಲಿ ಗೆಳೆಯರೊಂದಿಗೆ ಎಲ್ಲಿಗೋ ಪ್ರಯಾಣಿಸುತ್ತಿದ್ದಾಗ ಮೂಡಿದ್ದು. ಹೀಗೇ ಚರ್ಚೆಗೊಳಗಾಗಿ ಚಿತ್ರದ ಪರಿಕಲ್ಪನೆಗೆ ಒಯ್ಯಿತುʼ ಎಂದದ್ದು ಆನಂದ್ ಏಕರ್ಷಿ.
ವಿನಯ್ ಫೋರ್ಟ್ ಮತ್ತು ಝರೀನಾ ಶಿಹಾಬ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ವಿನಯ್ ಫೋರ್ಟ್ ಸಹ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ಇಪ್ಪತ್ತು ವರ್ಷಗಳ ಗೆಳೆಯರೊಂದಿಗೆ ಪ್ರಯಾಣದಲ್ಲಿದ್ದಾಗ ತಮ್ಮ ಸ್ನೇಹ, ಕಲೆ ಎಲ್ಲವನ್ನೂ ಹೇಗೆ ಪ್ರತಿನಿಧಿಸುವುದು ಎಂದು ಯೋಚಿಸಿದಾಗ ಹೊಳೆದ ಕಲ್ಪನೆ ಸಿನಿಮಾ. ಅ ಹೊಣೆಗಾರಿಕೆ ಆನಂದರ ಮೇಲೆ ಬಿತ್ತುʼ ಎಂದರು. “ಸಿನಿಮಾಕ್ಕೆ ಸಿಕ್ಕ ಪ್ರೇಕ್ಷಕರ ಪ್ರತಿಕ್ರಿಯೆ ಆದ್ಭುತʼ ಎಂದು ಹರ್ಷ ವ್ಯಕ್ತಪಡಿಸಿದರು ಝರೀನಾ.
ಈ ಸಿನಿಮಾ ಒಂಬತ್ತು ಮಂದಿ ನಟರಿಗೆ ಚೊಚ್ಚಲ ಅವಕಾಶ. ಇವರೆಲ್ಲರನ್ನೂ ರಂಗಭೂಮಿಯಿಂದ ಸಿನಿಮಾಕ್ಕೆ ರೂಪಾಂತರಗೊಳಿಸುವಾಗ ಸಾಕಷ್ಟು ಶ್ರಮ ಹಾಕಬೇಕಾಯಿತು. ಸುಮಾರು ೩೫ ದಿನಗಳ ರಿಹರ್ಸಲ್ ಸಹ ಬೇಕಾಯಿತು ಎಂದು ಸಿನಿಮಾ ನಿರ್ಮಾಣದ ಬಗ್ಗೆ ಆನಂದ್ ವಿವರಿಸಲು ಮರೆಯಲಿಲ್ಲ.
ಆಟ್ಟಂ ಸಿನಿಮಾವು ಒಬ್ಬಳು ಮಹಿಳೆ ಹಾಗೂ 12 ಪುರುಷರ ನಡುವಿನ ಒಂದು ಕಥಾನಕ. ವ್ಯಕ್ತಿಗಳ, ಸಂದರ್ಭಗಳ ಹಾಗೂ ಸನ್ನಿವೇಶಗಳು ಮತ್ತು ಅದಕ್ಕೆ ಸಿಗುವ ಪ್ರತಿಕ್ರಿಯೆಗಳನ್ನು ಸೆರೆ ಹಿಡಿಯುವ ಪ್ರಯತ್ನ ಸಿನಿಮಾ ನಿರ್ದೇಶಕರದ್ದು.