ಹೊಸದಿಲ್ಲಿ: ವಾಡಿಕೆಗಿಂತ ಮೂರು ದಿನಗಳ ಮೊದಲೇ ಕೇರಳಕ್ಕೆ ಮುಂಗಾರು ಪ್ರವೇಶಿಸಿದ್ದರೆ, ಅದಕ್ಕೆ ಪೂರಕವಾಗಿ ದೇಶದ ಉತ್ತರ ಮತ್ತು ಪೂರ್ವ ಭಾಗಗಳ 5 ರಾಜ್ಯಗಳಲ್ಲಿ ಮಂಗಳವಾರ ಧೂಳು ಬಿರುಗಾಳಿ, ಮಳೆ, ಗುಡುಗು ಸಿಡಿಲಿಂದಾಗಿ 54 ಮಂದಿ ಅಸುನೀಗಿದ್ದಾರೆ.
ಬಿಹಾರದಲ್ಲಿ 19, ಉತ್ತರ ಪ್ರದೇಶದಲ್ಲಿ 17, ಜಾರ್ಖಂಡ್‌ನಲ್ಲಿ 12, ಮಧ್ಯಪ್ರದೇಶದಲ್ಲಿ 4 ಹಾಗೂ ಪಶ್ಚಿಮ ಬಂಗಾಲದಲ್ಲಿ 2 ಮಂದಿ ಅಸುನೀಗಿದ್ದಾರೆ. ಬಿಹಾರದಲ್ಲಿ ಧಾರಾಕಾರ ಮಳೆ, ಗುಡುಗು ಮತ್ತು ಸಿಡಿಲಿನಿಂದಾಗಿ ಹಾನಿ ಉಂಟಾಗಿದೆ. ಗಂಗಾ ನದಿಗೆ ಹೊಂದಿಕೊಂಡಂತಿರುವ ನಾಲ್ಕು ಜಿಲ್ಲೆಗಳಲ್ಲಿ 19 ಮಂದಿ ಅಸುನೀಗಿದ್ದು, ಮೃತರಲ್ಲಿ ಮಹಿಳೆಯರು, ಮಕ್ಕಳೂ ಸೇರಿದ್ದಾರೆ. ಗಯಾ ಜಿಲ್ಲೆಯಲ್ಲಿ ಛಾವಣಿ ಬಿದ್ದು, ಮರ ಮುರಿದು ಬಿದ್ದು ಐವರು ಅಸುನೀಗಿದ್ದಾರೆ.
ಇನ್ನು ಉತ್ತರ ಪ್ರದೇಶದಲ್ಲಿ ಪ್ರಾಕೃತಿಕ ವಿಪತ್ತಿನಲ್ಲಿ ಒಟ್ಟು 17 ಮಂದಿ ಅಸುನೀಗಿ, 10 ಮಂದಿ ಗಾಯಗೊಂಡಿದ್ದಾರೆ. ಗುಡುಗು-ಸಿಡಿಲಿನಿಂದ ಕೂಡಿದ ಮಳೆಯ ಜತೆ ಪ್ರತಿ ಗಂಟೆಗೆ 50ರಿಂದ 70 ಕಿಮೀ ವೇಗದಲ್ಲಿ ಗಾಳಿಯೂ ಬೀಸುತ್ತಿತ್ತು. ಹೀಗಾಗಿ ಎಲ್ಲೆಡೆ ವಿದ್ಯುತ್ ಕಂಬಗಳು, ಮರಗಳು ಉರುಳಿ ಬಿದ್ದಿವೆ. ಉನ್ನಾವ್ ಜಿಲ್ಲೆಯಲ್ಲಿ 5, ಕನೌಜ್ ಮತ್ತು ರಾಯ್‌ಬರೇಲಿಯಲ್ಲಿ ತಲಾ ಮೂವರು, ಕಾನ್ಪುರ, ಫಿಲಿಭಿತ್, ಗೊಂಡಾ ಜಿಲ್ಲೆಗಳಲ್ಲಿ ತಲಾ ಇಬ್ಬರು ಅಸುನೀಗಿದ್ದಾರೆ.
ಮಳೆಯಿಂದ ತೊಂದರೆಗೆ ಈಡಾಗಿರುವ ಜಿಲ್ಲೆಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಶುರುವಾಗಿವೆ. ಮನೆ ಕಳೆದುಕೊಂಡವರಿಗೆ ಶಿಬಿರಗಳನ್ನು ಆರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಉತ್ತರ ಪ್ರದೇಶ ಸರಕಾರ ಆದೇಶಿಸಿದೆ. ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಗಾಳಿ, ಗುಡುಗು-ಸಿಡಿಲು ಸಹಿತ ಮಳೆ ಮುಂದಿನ ಕೆಲ ದಿನಗಳ ಕಾಲ ಬೀಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಅರಣ್ಯಾಧಿಕಾರಿಗಳ ನಿಟ್ಟುಸಿರು: ಇದೇ ವೇಳೆ ಉತ್ತರ ಪ್ರದೇಶದ ಪೂರ್ವ ಭಾಗಗಳಲ್ಲಿ ಮಂಗಳವಾರ ಗರಿಷ್ಠ ತಾಪಮಾನ 47 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇನ್ನು ಬೇಸಗೆ ಅವಧಿಯಲ್ಲಿ ಕಾಡ್ಗಿಚ್ಚಿನಿಂದ ಕಂಗೆಟ್ಟಿದ್ದ ಉತ್ತರಾಖಂಡದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಹೀಗಾಗಿ ಕಾಡ್ಗಿಚ್ಚು ನಿಯಂತ್ರಿಸುವಲ್ಲಿ ಹರಸಾಹಸ ನಡೆಸುತ್ತಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಜಾರ್ಖಂಡ್‌ನ ಫಕುರ್ ಮತ್ತು ಛತ್ರಾ ಜಿಲ್ಲೆಗಳಲ್ಲಿ ಸಿಡಿಲು ಬಡಿದು 12 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯ ಪ್ರದೇಶದಲ್ಲಿ ಮಳೆ ಪ್ರಕೋಪಕ್ಕೆ ನಾಲ್ವರು ಸಾವನ್ನಪ್ಪಿದರೆ, ಪಶ್ಚಿಮ ಬಂಗಾಳದಲ್ಲಿ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಒಟ್ಟಾರೆಯಾಗಿ ಈ ತಿಂಗಳ ಆರಂಭದಿಂದ ಮಂಗಳವಾರ ಸಂಜೆಯ ವರೆಗೆ ಉತ್ತರ ಭಾರತದಲ್ಲಿ ಪ್ರಾಕೃತಿಕ ವಿಕೋಪಕ್ಕೆ ಒಟ್ಟು 290 ಮಂದಿ ಅಸುನೀಗಿದ್ದಾರೆ.