ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದೇ ದಿನದಲ್ಲಿ 5,357 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ನಡುವೆಯೇ ದೇಶದ ಮೂರು ರಾಜ್ಯಗಳಲ್ಲಿ ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿದ್ದು, ಜನರನ್ನು ಎಚ್ಚರಿಸುವ ಸಲುವಾಗಿ ಸೋಮವಾರ ಮತ್ತು ಮಂಗಳವಾರ ದೇಶಾದ್ಯಂತ ಮಾಕ್‌ಡ್ರಿಲ್ ನಡೆಸಲು ಸಿದ್ಧತೆ ನಡೆಸಲಾಗಿದೆ.
ಸೋಂಕಿತರ ಸಂಖ್ಯೆ ಹೆಚ್ಚಳದ ಹಿನ್ನೆಲೆ ಈಗಾಗಲೇ ಕೇಂದ್ರಸರ್ಕಾರ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದೆ.
ಅದರಂತೆ ಹರ್ಯಾಣದಲ್ಲಿ ಸಾರ್ವಜನಿಕ ಸಭೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಇತ್ತ ಕೇರಳದಲ್ಲಿ ಗರ್ಭಿಣಿಯರು ಹಾಗೂ ಹಿರಿಯನಾಗರಿಕರಿಗೆ ಮಾಸ್ಕ್ ಧಾರಣೆ ಕಡ್ಡಾಯಗೊಳಿಸಲಾಗಿದೆ. ಪುದುಚೆರಿಯಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಇನ್ನು ಉತ್ತರ ಪ್ರದೇಶ ಹಾಗೂ ದೆಹಲಿಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕ ತಪಾಸಣೆ ಹಾಗೂ ಸಾರ್ವಜನಿಕ ಆರೋಗ್ಯ ತಪಾಸಣೆ ಬಗ್ಗೆ ತೀವ್ರ ಕಾಳಜಿ ವಹಿಸಲಾಗುತ್ತಿದೆ. ಭಾನುವಾರದ ವರದಿ ಪ್ರಕಾರ ದೇಶದಲ್ಲಿ ಪ್ರಸಕ್ತ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 32,814ಕ್ಕೆ ಏರಿಕೆಯಾಗಿದೆ.