ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಆರ್ಭಟ ಮುಂದುವರಿದಿದ್ದು, ಸೋಮವಾರ ಏಳು ತಿಂಗಳ ಗಂಡು ಮಗು ಸೇರಿ 53 ಜನರಿಗೆ ಮಹಾಮಾರಿ ರೋಗ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,699ಕ್ಕೆ ಏರಿಕೆಯಾಗಿದೆ.
ಕಲಬುರಗಿ ನಗರ ಮತ್ತು ತಾಲೂಕು ವ್ಯಾಪ್ತಿಯಲ್ಲೇ 32 ಜನರಿಗೆ ಕೋವಿಡ್ ಕಾಣಿಸಿಕೊಂಡಿದೆ. ಕಮಲಾಪುರ ತಾಲೂಕಿನಲ್ಲಿ 10 ಜನರು, ಅಫಜಲಪುರ ತಾಲೂಕಿನಲ್ಲಿ 6 ಮಂದಿ ಮತ್ತು ಚಿಂಚೋಳಿ ತಾಲೂಕಿನಲ್ಲಿ ಐವರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ 23 ಮಹಿಳೆಯರು, 30 ಪುರುಷರು ಇದ್ದಾರೆ. ಇವರಲ್ಲಿ ಚಿಂಚೋಳಿ ತಾಲೂಕಿನ ಕುಂಚಾವರಂನಲ್ಲಿ ಸೋಂಕಿತನ ನೇರ ಸಂಪರ್ಕದಿಂದ ಏಳು ತಿಂಗಳ ಮಗುವಿಗೆ ಕೋವಿಡ್ ತಗುಲಿದೆ.
ಕಲಬುರಗಿ ನಗರದಲ್ಲಿ 14 ಮಂದಿಗೆ ಸೋಂಕಿತರ ನೇರ ಸಂಪರ್ಕದಿಂದ ಸೋಂಕು ಅಂಟಿಕೊಂಡಿದೆ. ಮಹಾರಾಷ್ಟ್ರದಿಂದ ಮರಳಿದ 15, ತೀವ್ರ ಉಸಿರಾಟದ ತೊಂದರೆಯ ಒಬ್ಬರು, ಜ್ವರದಿಂದ ಬಳಲುತ್ತಿದ್ದ 9 ಮಂದಿಗೆ ಕಾಣಿಸಿಕೊಂಡಿದೆ. ಬೆಂಗಳೂರು ಮತ್ತು ಬೆಂಗಳೂರು ಪ್ರವಾಸ ಕೈಗೊಂಡ ತಲಾ ಒಬ್ಬರು ಹಾಗೂ 12 ಜನರಿಗೆ ಹೇಗೆ ಸೋಂಕು ಅಂಟಿಕೊಂಡಿದೆ ಎಂದು ಪತ್ತೆಯಾಗಿಲ್ಲ. ರ್‍ಯಾಂಡಮ್ ಪರೀಕ್ಷೆಯಲ್ಲಿ ನಗರದ ಮಹೆಬೂಬ್ ನಗರದ 57 ವರ್ಷದ ಪುರುಷ, ಜ್ವರ ಹಾಗೂ ಉಸಿರಾಟದ ಸಮಸ್ಯೆಯುಳ್ಳ ಎಂಎಸ್‌ಕೆ ಮಿಲ್‌ನ ಹುಸೇನ್ ಗಾರ್ಡನ್‌ನ 25 ವರ್ಷದ ಮಹಿಳೆ, ಆರ್.ಜೆ.ನಗರದ 15 ವರ್ಷದ ಬಾಲಕಿ, ನ್ಯೂ ರಾಘವೇಂದ್ರ ಕಾಲೋನಿಯ 52 ವರ್ಷದ ಪುರುಷ ಸೋಂಕು ಅಂಟಿದೆ.
ವಿದ್ಯಾ ನಗರದಲ್ಲಿ ಎರಡು ವರ್ಷದ ಬಾಲಕ ಮತ್ತು ಸೇರಿ ಐವರಿಗೆ ಕೋವಿಡ್ ಪತ್ತೆಯಾಗಿದ್ದು, ಇವರೆಲ್ಲರಿಗೂ ಸೋಂಕಿತ ಪಿ-14,650 ವ್ಯಕ್ತಿಯಿಂದಲೇ ಸೋಂಕು ಹರಡಿದೆ. ವಿವೇಕಾನಂದ ನಗರದಲ್ಲಿ ಬೆಂಗಳೂರು ಪ್ರವಾಸ ಹಿನ್ನೆಲೆಯ 34 ವರ್ಷದ ಪುರುಷನಿಗೆ ಸೋಂಕು ಪತ್ತೆಯಾಗಿದೆ. ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದ ಮಹಾರಾಷ್ಟ್ರದಿಂದ ಆಗಮಿಸಿದ 31 ವರ್ಷದ ಪುರುಷ, 25 ವರ್ಷದ ಮಹಿಳೆಗೆ ಕೋವಿಡ್ ದೃಢಪಟ್ಟಿದೆ.
ಅಫಜಲಪುರ ತಾಲೂಕಿನ ಹಸರಗುಂಡಿಗಿ ಗ್ರಾಮದಲ್ಲಿ ಮಹಾರಾಷ್ಟ್ರದಿಂದ ವಾಪಸ್ ಆಗಿರುವ ಐವರು, ಕಮಲಾಪುರ ತಾಲೂಕಿನ ಸೊಂತ ಗ್ರಾಮದಲ್ಲಿ ಏಳು ಜನರಿಗೆ ಕೋವಿಡ್ ವಕ್ಕರಿಸಿದೆ. ಇದೇ ವೇಳೆ ಸೋಮವಾರ ಒಂದೇ ದಿನ 69 ಮಂದಿ ಕೋವಿಡ್ ದಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಆಸ್ಪತ್ರೆಯಿಂದ ಬಿಡುಗಡೆಗೊಂಡವರ ಸಂಖ್ಯೆ 1,310ಕ್ಕೆ ಏರಿಕೆಯಾಗಿದೆ. ಇದುವರೆಗೆ 27 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, 362 ಮಂದಿಗೆ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.