ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಅರಣ್ಯ ಪ್ರದೇಶವೊಂದರಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರಿನಲ್ಲಿ 52 ಕೆಜಿ ಚಿನ್ನ ಹಾಗೂ 9.86 ಕೋಟಿ ರೂಪಾಯಿ ನಗದು ಪತ್ತೆಯಾಗಿರುವ ಘಟನೆ ಗುರುವಾರ(ಡಿ.19) ತಡರಾತ್ರಿ ನಡೆದಿದೆ.
ಮಧ್ಯಪ್ರದೇಶ ಪೊಲೀಸರು ಮತ್ತು ಆದಾಯ ತೆರಿಗೆ ಅಧಿಕಾರಿಗಳು ಅರಣ್ಯ ಪ್ರದೇಶಕ್ಕೆ ತೆರಳಿ ಕಾರನ್ನು ತಪಾಸಣೆ ನಡೆಸುವ ವೇಳೆ ಕಾರಿನೊಳಗೆ ಚಿನ್ನದ ಗಟ್ಟಿ ಹಾಗೂ ಕೋಟಿಗಟ್ಟಲೆ ನಗದು ಹಣ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ. ಸದ್ಯ ಕಾರನ್ನು ವಶಕ್ಕೆ ಪಡೆದುಕೊಂಡ ಅಧಿಕಾರಿಗಳು ಕಾರು ಯಾರಿಗೆ ಸೇರಿದ್ದು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.
ರಾತಿಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಮೆಂಡೋರಿ-ಕುಶಾಲ್ಪುರ್ ರಸ್ತೆಯ ಬಳಿ ಇರುವ ನಿರ್ಮಾಣ ಹಂತದ ಮನೆಯ ಬಳಿ ಕಾರನ್ನು ನಿಲ್ಲಿಸಲಾಗಿದ್ದು ಕಾರಿನಲ್ಲಿ 52 ಕೆಜಿ ಚಿನ್ನದ ಗಟ್ಟಿಗಳು ಪತ್ತೆಯಾಗಿದ್ದು ಇದರ ಮೊತ್ತ 40 ಕೋಟಿ ರೂಪಾಯಿಗೂ ಅಧಿಕ ಮೌಲ್ಯ ಹೊಂದಿದೆ ಎನ್ನಲಾಗಿದೆ, ಜೊತೆಗೆ 9.86 ಕೋಟಿ ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಸಂಬಂಧ ಮಾಹಿತಿ ನೀಡಿದ ಉಪ ಪೊಲೀಸ್ ಆಯುಕ್ತ ಪ್ರಿಯಾಂಕಾ ಶುಕ್ಲಾ ಗುರುವಾರ ರಾತ್ರಿ ಮೆಂಡೋರಿ-ಕುಶಾಲ್‌ಪುರ ರಸ್ತೆಯ ಬಳಿ ನಿರ್ಮಾಣ ಹಂತದ ಮನೆಯ ಬಳಿ ಕಾರೊಂದು ಅನಾಥವಾಗಿ ನಿಲ್ಲಿಸಿರುವ ಕುರಿತು ಮಾಹಿತಿ ಬಂದಿತ್ತು ಅದರಂತೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ ವೇಳೆ ಕಾರಿನಲ್ಲಿ ಏಳೆಂಟು ಬ್ಯಾಗ್ ಗಳು ಪತ್ತೆಯಾಗಿವೆ ಇದನ್ನು ಪರಿಶೀಲಿಸಿದಾಗ ಚಿನ್ನ ಹಾಗೂ ನಗದು ಪತ್ತೆಯಾಗಿದೆ ಎಂದು ಹೇಳಿದರು.
ನಗರದ ಹಲವು ಕಡೆ ಕಳೆದ ಕೆಲ ದಿನಗಳಿಂದ ಐಟಿ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಾಳಿಯಿಂದ ಪಾರಾಗುವ ಉದ್ದೇಶದಿಂದ ಯಾರೋ ಚಿನ್ನದ ಗಟ್ಟಿ ಹಾಗೂ ಅಪಾರ ಪ್ರಮಾಣದ ನಗದನ್ನು ಕಾರಿನಲ್ಲಿ ಇರಿಸಿರುವ ಶಂಕೆ ವ್ಯಕ್ತಪಡಿಸಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ