ಪಣಜಿ: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಭಾರತ ಸ್ವಾತಂತ್ರಗೊಂಡು 75 ವರ್ಷದ ಸವಿ ನೆನಪಿಗಾಗಿ ಭಾರತದಾದ್ಯಂತ ಯುವ ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರು ಉದ್ಯಮದೊಂದಿಗೆ ತೊಡಗಿಕೊಳ್ಳಲು ವೇದಿಕೆಯನ್ನು ಕಲ್ಪಿಸುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸರಣ ಮಂತ್ರಿ ಅನುರಾಗ್ ಠಾಕೂರ್ ನುಡಿದರು.
ಗೋವಾದ ಬಾಂಬೋಲಿಂ ಬಳಿಯಿರುವ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ 52 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಗೋವಾ ರಾಜ್ಯ ಸ್ವಾತಂತ್ರ್ಯಗೊಂಡು ಪ್ರಸಕ್ತ ವರ್ಷ 60 ವರ್ಷ ಪೂರ್ಣಗೊಂಡಿದ್ದು, ಗೋವಾಕ್ಕೆ ಇದು ಮಹತ್ವದ ವರ್ಷವಾಗಿದೆ. ಡ್ರೀಮ್ ಗರ್ಲ್ ಹೇಮಾಮಾಲಿನಿ ಯವರಿಗೆ ಇಂಡಿಯನ್ ಪರ್ಸನಾಲಿಟಿ ಅವಾರ್ಡ್ ಲಭಿಸುತ್ತಿದ್ದು ಅವರನ್ನು ಅಭಿನಂದಿಸುತ್ತೇನೆ ಎಂದು ಅನುರಾಗ್ ಠಾಕೂರ್ ನುಡಿದರು.
ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ, ಗೋವಾದ ಮಾಜಿ ಮುಖ್ಯಮಂತ್ರಿ ದಿ ಮನೋಹರ್ ಪರೀಕರ್ ರವರು 2004 ರಲ್ಲಿ ಗೋವಾಕ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸ್ವಾಗತಿಸಿದರು. ಅಂದಿನಿಂದ ವರ್ಷದಿಂದ ವರ್ಷಕ್ಕೆ ಗೋವಾದಲ್ಲಿ ಅತ್ಯುತ್ತಮವಾಗಿ ಚಲನಚಿತ್ರ ಮಹೋತ್ಸವ ಆಯೋಜಿಸಲಾಗುತ್ತಿದೆ. ಗೋವಾ ರಾಜ್ಯ ಒಂದು ಸುಂದರ ಪ್ರವಾಸಿ ತಾಣ, ಫಿಲ್ಮಶೂಟಿಂಗ್ ಡೆಸ್ಟಿನೇಶನ್, ಫಿಲ್ಮ ಶೂಟಿಂಗ್‍ಗಾಗಿ ಹೆಚ್ಚು ಒತ್ತು ನೀಡಲಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಗೋವಾದಲ್ಲಿ ಶೇ 100 ರಷ್ಟು ವ್ಯಾಕ್ಸಿನೇಶನ್ ಪೂರ್ಣಗೊಳ್ಳಲಿದೆ. ನಂತರ ಗೋವಾದಲ್ಲಿ ಹೆಚ್ಚು ಚಲನಚಿತ್ರ ಚಿತ್ರೀಕರಣ ಆರಂಭಗೊಳ್ಳಲಿದೆ. ಗೋವಾದಲ್ಲಿ ಫಿಲ್ಮ್ ಸಿಟಿ ಸ್ಥಾಪನೆಗೆ ಕೇಂದ್ರ ಸರ್ಕಾರ ಸಹಕಾರ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇಂಡಿಯನ್ ಪರ್ಸನಾಲಿಟಿ ಅವಾರ್ಡ್ ಸ್ವೀಕರಿಸಿ ಖ್ಯಾತ ತಾರೆ ಹೇಮಾಮಾಲಿನಿ ಮಾತನಾಡಿ, ಈ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ಚಲನಚಿತ್ರೋದ್ಯಮಕ್ಕೆ ಮತ್ತು ಯುವ ಕಲಾವಿದರಿಗೆ ಒಂದು ವೇದಿಕೆ ಕಲ್ಪಿಸಿಕೊಟ್ಟಿದೆ. ಈ ಕಾರ್ಯ ಹೀಗೆಯೇ ಮುಂದುವರೆಯಲಿ. ನನಗೆ ಈ ಅವಾರ್ಡ್ ಲಭಿಸಿರುವುದು ಸಂತಸ ತಂದಿದೆ ಎಂದರು.
ಇದನ್ನೂ ಓದಿ :ಅಂತಾರಾಷ್ಟ್ರೀಯ ಚಿತ್ರೋತ್ಸವ 52 : ಈ ಬಾರಿ ಎಂಟು ಕನ್ನಡ ಚಲನಚಿತ್ರಗಳ ಪ್ರದರ್ಶನ
ಈ ಸಂದರ್ಭದಲ್ಲಿ ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ, ಕೇಂದ್ರ ಸಚಿವ ಶ್ರೀಪಾದ ನಾಯ್ಕ, ಖ್ಯಾತ ನಟ ಸಲ್ಮಾನ್ ಖಾನ್, ಸೇರಿದಂತೆ ವಿವಿಧ ದೇಶಗಳ ಚಲನಚಿತ್ರ ಕ್ಷೇತ್ರದ ನಟ ನಟಿಯರು ಉಪಸ್ಥಿತರಿದ್ದರು.
ಮಾರ್ಟಿನ್ಸ್ ಕೋರ್ಸೇಫಿ ಮತ್ತು ಇಸ್ತಾಬಾನ್ ಜಾಬೊ ರವರಿಗೆ ಸತ್ಯಜಿತ್ ರೈ ಜೀವಮಾನ ಸಾಧಕ ಪ್ರಶಸ್ತಿ ನೀಡಲಾಯಿತು.