ಪಡುಬಿದ್ರಿ: ನಂದಿಕೂರು ಜನಜಾಗೃತಿ ಸಮಿತಿಯು 2005ರಲ್ಲಿ ಹೂಡಿದ್ದ ದಾವೆಯ ವಿಚಾರದಲ್ಲಿ ಚೆನ್ನೈಯ ಹಸುರು ಪೀಠವು ಮೇ 31ರಂದು ಯುಪಿಸಿಎಲ್‌ಗೆ 52 ಕೋಟಿ ರೂ. ದಂಡ ವಿಧಿಸಿದೆ.
ಉಡುಪಿ ಜಿಲ್ಲೆಯ ಎಲ್ಲೂರು ಗ್ರಾಮದಲ್ಲಿರುವ ಕಲ್ಲಿದ್ದಲು ಆಧಾರಿತ ಉಡುಪಿ ಪವರ್ ಕಾರ್ಪೊರೇಶನ್ (ಯುಪಿಸಿಎಲ್) ಪರಿಸರ ನಿಯಮಗಳನ್ನು ಉಲ್ಲಂ ಸಿರುವುದು ಮತ್ತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರುವುದನ್ನು ಪರಿಗಣಿಸಿ 52 ಕೋಟಿ, 2 ಲಕ್ಷದ 50 ಸಾವಿರ ರೂ. ದಂಡ ಪಾವತಿಸುವಂತೆ ಆದೇಶಿಸಿದೆ.
ಈ ಮೊದಲೇ ಯುಪಿಸಿಎಲ್ ಠೇವಣಿಯಾಗಿರಿಸಿದ 5 ಕೋಟಿ ರೂ. ಗಳನ್ನು ದಂಡದ ಮೊತ್ತಕ್ಕಾಗಿ ವಿನಿಯೋಗಿಸಿಕೊಳ್ಳಲು ಹೇಳಿರುವ ಹಸುರು ಪೀಠವು ಎಲ್ಲ ಮೊತ್ತವನ್ನು ಮುಂದಿನ ಮೂರು ತಿಂಗಳುಗಳೊಗಾಗಿ ಕೇಂದ್ರಿಯ ಪರಿಸರ ನಿಯಂತ್ರಣಾ ಮಂಡಳಿಗೆ ಪಾವತಿಸುವಂತೆ ಸೂಚಿಸಿದೆ. ಈ ದಂಡವನ್ನು ಪರಿಸರ ಸುರಕ್ಷೆಗಾಗಿ ಮತ್ತೆ ಬಳಸಿಕೊಳ್ಳುವಂತೆಯೂ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ನಿರ್ದೇಶಿಸಿದೆ.
ಸಮಿತಿ ರಚನೆಗೆ ಸೂಚನೆ
ಯುಪಿಸಿಎಲ್ ಪರಿಸರದ 10 ಕಿ.ಮೀ. ಪ್ರದೇಶದಲ್ಲಿ ಪರಿಸರ, ಬೆಳೆ ಹಾನಿ, ಮಣ್ಣಿನ ಫಲವತ್ತತೆಯ ಪರೀಕ್ಷೆ, ಕಪ್ಪು ವರ್ಣಕ್ಕೆ ತಿರುಗಿರುವ ನೀರು ಹಾಗೂ ಗಾಳಿಯ ಗುಣಮಟ್ಟ ಪರಿಶೀಲನೆಗಳನ್ನು ಪ್ರತಿಯೋರ್ವ ರೈತ ಹಾಗೂ ಪರಿಸರದ ಮನೆ ಮಂದಿಯನ್ನೂ ಸೇರಿದಂತೆ ಭೇಟಿ ಮಾಡಿ ಯುಪಿಸಿಎಲ್‌ನಿಂದಾಗಿರುವ ನಷ್ಟವನ್ನು ಅಂದಾಜಿಸಲು ಸಮಿತಿಯೊಂದನ್ನು ರಚಿಸುವಂತೆಯೂ ಹಸಿರು ಪೀಠವು ಆದೇಶಿಸಿದೆ.
ಈ ಸಮಿತಿಯಲ್ಲಿ ಉಡುಪಿ ಜಿಲ್ಲಾಧಿ ಕಾರಿ ಅಥವಾ ಸಹಾಯಕ ಕಮಿಷನರ್ ಅಥವಾ ತಾಲೂಕು ದಂಡಾಧಿಕಾರಿಗಳ ಸಹಿತ ಯುಪಿಸಿಎಲ್‌ನ ಓರ್ವ ಪ್ರತಿನಿಧಿಯೂ ಹಾಜರಿರ ಬಹುದಾಗಿದೆ. ಉಳಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು, ಹಿರಿಯ ವಿಜ್ಞಾನಿಗಳು ಈ ವಿಶೇಷ ಸಮಿತಿಯಲ್ಲಿರುತ್ತಾರೆ. ಈ ಸಮಿತಿಯು ಅಂದಾಜಿಸುವ ನಷ್ಟದ ಮೊತ್ತವನ್ನು ಯುಪಿಸಿಎಲ್ ಮೂಲಕ ಆಯಾಯ ರೈತರಿಗೆ, ಸಂತ್ರಸ್ತರಿಗೆ ತಲಪುವಂತೆಯೂ ನೋಡಿ ಕೊಳ್ಳಬೇಕೆಂದು ಪೀಠವು ಆದೇಶಿಸಿದೆ.