ಹೊಸದಿಲ್ಲಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ 51 ಮಂದಿ ಮಹಿಳೆಯರು ಪ್ರವೇಶ ಮಾಡಿದ್ದಾರೆ ಎಂದು ಕೇರಳ ಸರಕಾರ ಸುಪ್ರೀಂಕೋರ್ಟ್‌ಗೆ ಶುಕ್ರವಾರ ಮಾಹಿತಿ ನೀಡಿದೆ. ದೇಗುಲಕ್ಕೆ ಎಷ್ಟು ಮಂದಿ ಮಹಿಳೆಯರು ಪ್ರವೇಶ ಮಾಡಿದ್ದಾರೆ ಎಂಬ ಬಗ್ಗೆ ಜಿಜ್ಞಾಸೆ ಮೂಡಿರುವಾಗಲೇ ಕೇರಳ ಸರಕಾರ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠಕ್ಕೆ ಈ ವಿವರಣೆ ನೀಡಿದೆ.
ಇದೇ ಸಂದರ್ಭದಲ್ಲಿ ದೇಗುಲ ಪ್ರವೇಶ ಮಾಡಿದ ಬಿಂದು ಮತ್ತು ಕನಕದುರ್ಗಾ ಅವರಿಗೆ ಕೇರಳ ಸರಕಾರ 24 ಗಂಟೆಗಳ ಕಾಲವೂ ರಕ್ಷಣೆ ನೀಡಬೇಕು ಎಂದು ಸಿಜೆಐ ಗೊಗೋಯ್, ನ್ಯಾ.ಎಲ್.ಎನ್ ರಾವ್ ಮತ್ತು ನ್ಯಾ.ದಿನೇಶ್ ಮಾಹೇಶ್ವರಿ ಅವರನ್ನೊಳಗೊಂಡ ಪೀಠ ನಿರ್ದೇಶನ ನೀಡಿದೆ.
ಕೇರಳ ಸರಕಾರದ ಪರ ವಾದಿಸಿದ ಹಿರಿಯ ನ್ಯಾಯವಾದಿ ವಿಜಯ ಹನ್ಸಾರಿಯಾ, 10-50ರ ವಯೋಮಿತಿಯ 51 ಮಹಿಳೆಯರು ದೇಗುಲ ಪ್ರವೇಶ ಮಾಡಿದ್ದಾರೆ. 7,564 ಮಂದಿ ದರ್ಶನ ಕೋರಿ ನೋಂದಣಿ ಮಾಡಿಸಿಕೊಂಡಿದ್ದರು ಎಂದು ಹೇಳಿದ್ದಾರೆ. ಕೇರಳ ಪೊಲೀಸ್ ಇಲಾಖೆ ಶುರು ಮಾಡಿದ ಡಿಜಿಟಲ್ ಕ್ಯೂ ವ್ಯವಸ್ಥೆಯಲ್ಲಿ ಈ ವರ್ಷ 16 ಲಕ್ಷ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ 8.2 ಲಕ್ಷ ಮಂದಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಅದಕ್ಕೆ ಉತ್ತರಿಸಿದ ನ್ಯಾಯಪೀಠ “ನೀವು (ಕೇರಳ ಸರಕಾರ) ಕೋರ್ಟ್ ಆದೇಶ ನೀಡುವುದಕ್ಕೆ ಮೊದಲೇ ಬಿಂದು ಮತ್ತು ಕನಕದುರ್ಗಾ ಅವರಿಗೆ ರಕ್ಷಣೆ ನೀಡುತ್ತಿದ್ದರೆ ಸಮಸ್ಯೆ ಇಲ್ಲ. ಇನ್ನು ಮುಂದೆ 24 ಗಂಟೆಗಳ ಕಾಲ ಭದ್ರತೆ ನೀಡಬೇಕು ಆದೇಶಿಸುತ್ತೇವೆ. ಇದಕ್ಕಿಂತ ಹೆಚ್ಚು ಬೇರೆ ವಿಚಾರ ಅರಿಕೆ ಮಾಡಲು ಅವಕಾಶ ಇಲ್ಲ’ ಎಂದು ಹೇಳಿತು.
ಈ ನಡುವೆ, 51 ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ ಎನ್ನುವ ಮೂಲಕ ಕೇರಳ ಸರಕಾರವು ಸುಳ್ಳು ಅಫಿಡವಿಟ್ ಸಲ್ಲಿಸಿದೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಆರೋಪಿಸಿವೆ.