Advertisement
– 4 ವರ್ಷಗಳಲ್ಲಿ ಜಲಸಂಪನ್ಮೂಲ ಇಲಾಖೆಯ ಸಾಧನೆ ಏನು?ಜಲಸಂಪನ್ಮೂಲ ಇಲಾಖೆ ದೀರ್ಘಾವಧಿ ಯೋಜನೆಗಳನ್ನು ಕೈಗೊಳ್ಳುವ ಇಲಾಖೆ. ಇಲ್ಲಿ ಇಂದು ಯೋಜನೆ ಆರಂಭಿಸಿ, ನಾಳೆ ಮುಕ್ತಾಯ ಮಾಡುತ್ತೇನೆ ಎಂದರೆ ಆಗುವುದಿಲ್ಲ. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರತಿ ವರ್ಷ 10 ಸಾವಿರ ಕೋಟಿ ರೂ. ನಂತೆ ಐದು ವರ್ಷಗಳಲ್ಲಿ 50 ಸಾವಿರ ಕೋಟಿ ರೂ. ವೆಚ್ಚ ಮಾಡುವುದಾಗಿ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಆದರೆ, ನಾಲ್ಕು ವರ್ಷದಲ್ಲಿಯೇ 50 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಖರ್ಚು ಮಾಡಿದ್ದೇವೆ.
ನಾವು ಪ್ರತಿಪಕ್ಷದಲ್ಲಿದ್ದಾಗ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳಿಗೂ ಸೇರಿ 50 ಸಾವಿರ ಕೋಟಿ ರೂ. ವೆಚ್ಚ ಮಾಡ್ತೇವೆ ಎಂದು ಹೇಳಿದ್ದೆವು. ಅದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಪ್ರತಿಪಕ್ಷಗಳು ಈ ಬಗ್ಗೆ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಹಾಗಂತ ನಾವು ಕೃಷ್ಣಾ ಕೊಳ್ಳದ ಯೋಜನೆಗಳನ್ನು ಕಡೆಗಣಿಸಿಲ್ಲ. ಕೃಷ್ಣಾ ಮೇಲ್ದಂಡೆಯ 9 ಉಪ ಯೋಜನೆಗಳ ಕಾಮಗಾರಿ ನಡೆಯುತ್ತಿವೆ. ಇದರಿಂದ 1,37,390 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ
ಕಲ್ಪಿಸಿದ್ದೇವೆ. ಆಲಮಟ್ಟಿ ಜಲಾಶಯದ ಅಣೆಕಟ್ಟೆ ಎತ್ತರಿಸುವುದರಿಂದ ಮುಳುಗಡೆಯಾಗುವ ಜಮೀನಿಗೆ ಹೊಸ ಭೂಸ್ವಾಧೀನ ಕಾಯ್ದೆ ಅನ್ವಯ 1.11 ಲಕ್ಷ ಎಕರೆ ಭೂಸ್ವಾಧೀನ ಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದೇವೆ. – ಯುಕೆಪಿಯಲ್ಲಿ ರಾಜ್ಯದ ಸಂಪೂರ್ಣ ನೀರು ಬಳಕೆ ಮಾಡಿಕೊಳ್ಳಲಾಗಿದೆಯಾ?
ಕೃಷ್ಣಾ ನ್ಯಾಯಮಂಡಳಿ 2ರ ತೀರ್ಪಿನಂತೆ ಕರ್ನಾಟಕಕ್ಕೆ 173 ಟಿಎಂಸಿ ನೀರು ಲಭ್ಯವಾಗಿದೆ. ಅದರಲ್ಲಿ ಯಕೆಪಿಗೆ 130 ಟಿಎಂಸಿ ಲಭ್ಯವಾಗಿದ್ದು, ಆ ನೀರನ್ನು ಬಳಸಿಕೊಳ್ಳಲು ಅಣೆಕಟ್ಟೆಯ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಹೆಚ್ಚಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೃಷ್ಣಾ ಮೇಲ್ದಂಡೆಯ 9 ಉಪ ಯೋಜನೆಗಳು ಪ್ರಗತಿಯಲ್ಲಿವೆ. ಮುಳವಾಡ, ಚಮ್ಮಲಗಿ, ರಾಂಪುರ, ಇಂಡಿ, ತುಬಚಿ ಬಬಲೇಶ್ವರ ಯೋಜನೆಗಳು ಕಾರ್ಯಗತಗೊಳ್ಳುತ್ತಿವೆ. ಆರಂಭದಲ್ಲಿ 17,200 ಕೋಟಿ ರೂ. ಅಂದಾಜು ವೆಚ್ಚ ಮಾಡಲಾಗಿತ್ತು. ಈ 50,500 ಕೋಟಿ ರೂ. ವೆಚ್ಚ ಮಾಡಲು ತೀರ್ಮಾನಿಸಲಾಗಿದೆ.
Related Articles
ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ 5.57 ಲಕ್ಷ ಎಕರೆ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಸಿಕೊಂಡು 367 ಕೆರೆ ತುಂಬಿಸುವ 12,340 ಕೋಟಿ ರೂ. ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಪ್ರಸ್ತುತ 3 ಪ್ಯಾಕೇಜ್ ಕಾಮಗಾರಿಗಳು ಪ್ರಗತಿಯಲ್ಲಿವೆ. 2017ರ ಅಂತ್ಯಕ್ಕೆ ಚಿತ್ರದುರ್ಗ ಮತ್ತು ತುಮಕೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಳಿಸುತ್ತೇವೆ. ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳು ಶೀಘ್ರಗತಿಯಲ್ಲಿ ಕಾರ್ಯರೂಪಕ್ಕೆ ತರಲು ಮಧ್ಯ ಕರ್ನಾಟಕದಲ್ಲಿ
ಪ್ರತ್ಯೇಕ ವಿಶ್ವೇಶ್ವರಯ್ಯ ನೀರಾವರಿ ನಿಗಮ ಸ್ಥಾಪಿಸಿದ್ದೇವೆ.
Advertisement
– ಎತ್ತಿನಹೊಳೆ ಯೋಜನೆ ಅನುಷ್ಠಾನವಾಗುತ್ತಾ? ಆ ಯೋಜನೆಯಿಂದ ನೀರು ಸಿಗುತ್ತಾ ?ಎತ್ತಿನ ಹೊಳೆ ಯೋಜನೆ ಬಗ್ಗೆ ಹಿಂದೆ ಎಲ್ಲರೂ ಮಾತನಾಡುತ್ತಿದ್ದರು. ನಮ್ಮ ಸರ್ಕಾರ ಬಂದ ಮೇಲೆ ನಾವು ಎಲ್ಲ ವಿರೋಧಗಳನ್ನು ಎದುರಿಸಿ ಯೋಜನೆ ಕಾರ್ಯಾರಂಭ ಮಾಡಿದ್ದೇವೆ. ಹಸಿರು ಪೀಠದ ಅಡೆ-ತಡೆಯ ನಡುವೆಯೂ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ 3600 ಕೋಟಿ ರೂ. ವೆಚ್ಚ ಮಾಡಿದ್ದೇವೆ. 2018 ಮಳೆ ವರ್ಷದಲ್ಲಿ ಸ್ಟೇಜ್ ಒನ್ ಲಿಫ್ಟ್ ಮಾಡುವ ಕಾಮಗಾರಿ ಪೂರ್ಣಗೊಳಿಸುತ್ತೇವೆ. 2020ಕ್ಕೆ ಬಯಲು ಸೀಮೆಯ ಜನರಿಗೆ ಕುಡಿಯಲು ನೀರು ಒದಗಿಸಿಯೇ ತೀರುತ್ತೇವೆ. – ಎತ್ತಿನಹೊಳೆಗೆ ಕರಾವಳಿ ಭಾಗದ ವಿರೋಧವಿದೆಯಲ್ಲಾ?
ಆ ಭಾಗದವರ ವಿಶ್ವಾಸ ಪಡೆದೇ ಮುಂದುವರಿಸುತ್ತಿದ್ದೇವೆ. ಆ ಭಾಗಕ್ಕೂ ನಾವು ಅನ್ಯಾಯ ಮಾಡಿಲ್ಲ. ಕರಾವಳಿ ಭಾಗದಲ್ಲಿ ಮೂವತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವರಾಹಿ ಯೋಜನೆಯನ್ನು ಪೂರ್ಣಗೊಳಿಸಿ ಆ ಭಾಗದ ಜನರಿಗೆ ಅರ್ಪಿಸಿದ್ದೇವೆ. ಕಾರವಾರ ಜಿಲ್ಲೆಯಲ್ಲಿಯೂ ಕಾಳಿ ನದಿಯಿಂದ ಹಳಿಯಾಳ ತಾಲೂಕಿನ ಕೆರೆ ತುಂಬಿಸುವ ಯೋಜನೆ ಕೈಗೆತ್ತಿಕೊಂಡಿದ್ದೇವೆ. – ಎತ್ತಿನಹೊಳೆ ಯೋಜನೆ ಕಾಮಗಾರಿಯಲ್ಲಿ ಹಣ ದುರ್ಬಳಕೆ ಆಗಿದೆ ಎಂಬ ಆರೋಪ ಇದೆಯಲ್ಲಾ?
ಪ್ರತಿಪಕ್ಷಗಳು ಆರೋಪ ಮಾಡಿದರಷ್ಟೇ ಸಾಲದು. ದಾಖಲೆ ಕೊಡ ಬೇಕು. ಅಂತಹ ಆರೋಪಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ. – ಕಾವೇರಿ ಕೊಳ್ಳದಲ್ಲಿ ಕೈಗೊಂಡ ಯೋಜನೆಗಳೇನು?
ಕಾವೇರಿ ನದಿಯಲ್ಲಿ ಈಗಾಗಲೇ ನಮ್ಮ ಪಾಲಿನ ನೀರನ್ನು ಬಳಕೆ ಮಾಡಿಕೊಂಡಿದ್ದೇವೆ. ಕಾವೇರಿ ನೀರಾವರಿ ನಿಗಮದಲ್ಲಿ
ಪ್ರಮುಖವಾಗಿ ಕೆರೆ ತುಂಬಿಸುವ 35 ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಅದಕ್ಕಾಗಿ 1697 ಕೋಟಿ ರೂ.ಯೋಜನೆಗೆ ಅನುಮೋದನೆ ನೀಡಲಾಗಿದೆ. ಕಾವೇರಿಕೊಳ್ಳದ ಕಾಲುವೆಗಳ ಪುನರುಜ್ಜೀವನಕ್ಕಾಗಿ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ. – ಮಹದಾಯಿ ಯೋಜನೆ ನನೆಗುದಿಗೆ ಬಿದ್ದಿದೆಯಲ್ಲಾ ?
ಸದ್ಯ ಪ್ರಕರಣ ನ್ಯಾಯಮಂಡಳಿ ಮುಂದಿದೆ. ಮಹದಾಯಿ ನದಿಯಿಂದ ಕುಡಿಯುವ ಉದ್ದೇಶದಿಂದ 7.56 ಟಿಎಂಸಿ ನೀರು
ನೀಡುವಂತೆ ಗೋವಾ ಸರ್ಕಾರದ ಬಳಿ ಕೇಳಿಕೊಂಡಿದ್ದೆವು. ಗೋವಾ ನಿರಾಕರಿಸಿದಾಗ ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿ ಕೇಳಿಕೊಂಡೆವು. ಪ್ರಧಾನಿ ನಿರ್ಲಕ್ಷ ತೋರಿದರು. ನ್ಯಾಯ ಮಂಡಳಿಯೇ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ತೀರ್ಮಾನ ಮಾಡುವಂತೆ ಸೂಚಿಸಿತು. ಅದರಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಸಭೆ ಕರೆದರೂ ಗೋವಾ ಸಿಎಂ ಚುನಾವಣೆ ನೆಪ ಹೇಳಿ ಸಭೆ ರದ್ದುಗೊಳಿಸಿದರು. ನಾವು ಮತ್ತೂಮ್ಮೆ ಸಭೆ ಕರೆಯುವಂತೆ ಮಹಾರಾಷ್ಟ್ರ ಸಿಎಂಗೆ ಪತ್ರ ಬರೆಯುತ್ತೇವೆ. ಅಲ್ಲದೇ ಪ್ರಧಾನಿಗೂ ಮತ್ತೂಂದು ಪತ್ರ ಬರೆದು
ಮಧ್ಯಸ್ಥಿಕೆಗೆ ಮನವಿ ಮಾಡಿಕೊಳ್ಳುತ್ತೇವೆ. – ಮಹದಾಯಿ ವಿಚಾರದಲ್ಲಿ ರಾಜ್ಯದ ಹಿತಕ್ಕಿಂತ ರಾಜಕೀಯ ಲಾಭದ ಲೆಕ್ಕಾಚಾರ ನಡೆಯಿತಲ್ಲವೇ ?
ಮಹದಾಯಿ ಭಾಗದ ಜನರಿಗೆ ನ್ಯಾಯ ಒದಗಿಸುವುದು ನನ್ನ ಕರ್ತವ್ಯ. ಅವರನ್ನು ಎದುರಿಸುವುದು ನನಗೇನೂ ಕಷ್ಟವಾಗಿಲ್ಲ. ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ಗೋವಾ ಬಿಜೆಪಿ ಸರ್ಕಾರ, ರಾಜ್ಯ ಬಿಜೆಪಿ ನಾಯಕರು ಹಾಗೂ ಪ್ರಧಾನಿ ಮೋದಿ ಅವರು ನಡೆದುಕೊಂಡ ರೀತಿ ಎಲ್ಲರಿಗೂ ಗೊತ್ತಿರುವ ವಿಷಯ. – ಹನಿ ನೀರಾವರಿಗೆ ಯೋಜನೆ ಎಲ್ಲಿವರೆಗೆ ಬಂತು?
ದೇಶದಲ್ಲಿಯೇ ಮೊದಲ ಬಾರಿ ಎನ್ನುವಂತಹ ದೊಡ್ಡ ಪ್ರಮಾಣದ ರಾಮಥಾಳ ಹನಿ ನೀರಾವರಿ ಯೋಜನೆಯನ್ನು
ಕೈಗೆತ್ತಿಕೊಂಡಿದ್ದೇವೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನಲ್ಲಿ 70 ಸಾವಿರ ಎಕರೆ ಪ್ರದೇಶದಲ್ಲಿ ಹನಿ ನೀರಾವರಿ
ಯೋಜನೆ ಕೈಗೆತ್ತಿಕೊಂಡಿದ್ದೇವೆ. ಇಸ್ರೆಲ್ ಕೂಡ ಈ ಯೋಜನೆ ಬಗ್ಗೆ ಆಸಕ್ತಿಯಿಂದ ನೋಡುತ್ತಿದೆ. ಈ ಯೋಜನೆ ನಿರ್ವಹಣೆಗೆ 70 ಜನರಿಗೆ ತರಬೇತಿ ನೀಡಿದ್ದೇವೆ. – ತವರು ಜಿಲ್ಲೆಗೆ ನಿಮ್ಮ ಕೊಡುಗೆಯೇನು ?
ವಿಜಯಪುರ ಜಿಲ್ಲೆಯ ಐತಿಹಾಸಿಕ ಮಮದಾಪುರ, ಬೇಗಂ ತಾಲಾಬ್, ಬೂತನಾಳ, ಬಬಲೇಶ್ವರ, ಸಾರವಾಡ ಹಾಗೂ
ತಿಡಗುಂದಿ ಕೆರೆಗಳನ್ನು ತುಂಬಿಸಲಾಗಿದೆ. ನಗರದ 20 ಐತಿಹಾಸಿಕ ಬಾವಿಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಮುಂದಿನ ವರ್ಷ ಇನ್ನೂ 10 ಬಾವಿಗಳ ಪುನರುಜ್ಜೀವನ ಗೊಳಿಸಲಾಗುವುದು. – ರಾಜಕೀಯದ ಹೊರತಾಗಿ ನಿಮ್ಮ ಹವ್ಯಾಸಗಳೇನು ?
ಶಿಕ್ಷಣ ಕ್ಷೇತ್ರದಲ್ಲಿ ಶತಮಾನದಷ್ಟು ಹಳೆಯದಾದ ನಮ್ಮ ಬಿಎಲ್‌ಡಿ ಟ್ರಸ್ಟ್ ಕೆಲಸ ಮಾಡುತ್ತಿದೆ. 70 ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ನೀಡುತ್ತಿದ್ದೇವೆ. ಫ.ಗು ಹಳಕಟ್ಟಿ ಅವರ ಸಂಶೋಧನಾ ಸಂಸ್ಥೆ ಮೂಲಕ ವಚನಗಳ ಸಂಪುಟಗಳನ್ನು ಪ್ರಕಟಿಸಿದ್ದೇವೆ. ಎಂ.ಎಂ. ಕಲಬುರ್ಗಿ ಅವರ ಸಮಗ್ರ ಸಂಪುಟ ಪ್ರಕಟಿಸಿದ್ದೇವೆ. ಆದಿಲ್ ಷಾಹಿಗಳ ಕಾಲದ ಪರ್ಷಿಯನ್ ಮತ್ತು ದಖನಿ ಭಾಷೆಯ 19 ಸಂಪುಟಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಲಾಗುತ್ತಿದೆ. – ರಾಜಕೀಯಕ್ಕೆ ಬರುವುದು ಅವರ ಇಚ್ಛೆ
ಪತ್ನಿ ಆಶಾ ಪಾಟೀಲ್ ಮನೆ ಜವಾಬ್ದಾರಿ ನೋಡಿಕೊಳ್ತಿರೋದ್ರಿಂದ ನಾನು ರಾಜಕಾರಣ ಮಾಡುತ್ತಿದ್ದೇನೆ. ತಂದೆಯ ಅಕಾಲಿಕ ಮರಣದಿಂದ ನಾನು ಅನಿವಾರ್ಯವಾಗಿ ರಾಜಕೀಯಕ್ಕೆ ಬರುವಂತಾಯಿತು. ದೊಡ್ಡ ಮಗ ಬಿಎ ಇನ್‌ಮ್ಯಾನೇಜ್ ಮೆಂಟ್ ಕೋರ್ಸ್ ಮುಗಿಸಿದ್ದಾನೆ. ಪತ್ರಿಕೆಗಳಿಗೆ ಲೇಖನ ಬರೆಯುತ್ತಾನೆ. ಎರಡನೆಯವನು ಧ್ರುವ್ ಪಾಟೀಲ್ ಇನ್ನೂ ಎಂಟನೇ ತರಗತಿ. ರಾಜಕೀಯಕ್ಕೆ ಬರುವುದು, ಬಿಡುವುದು ಅವರ ಇಚ್ಛೆ.