Advertisement

ನಷ್ಟ ಪರಿಹಾರಕ್ಕೆ ಬೇಕು 5 ಸಾವಿರ ಕೋಟಿ

10:06 AM Aug 10, 2019 | Sriram |

ಬೆಳಗಾವಿ: “ರಾಜ್ಯದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿಯಿಂದ ಉಂಟಾಗಿರುವ ಹಾನಿಗೆ ಪರಿಹಾರ ನೀಡಲು ಸದ್ಯಕ್ಕೆ ಅಂದಾಜು 5,000 ಕೋಟಿ ರೂ. ಅಗತ್ಯವಿದೆ. ಸುಮಾರು 30 ಸಾವಿರ ಮನೆಗಳನ್ನು ನಿರ್ಮಿಸಬೇಕಿದೆ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

Advertisement

ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹದಿಂದ ತೊಂದರೆಗೆ ತುತ್ತಾಗಿರುವಬೆಳಗಾವಿ, ಸಂಕೇಶ್ವರ, ನಿಪ್ಪಾಣಿ ತಾಲೂಕಿನ ಯಮಗರ್ಣಿ, ಚಿಕ್ಕೋಡಿ ತಾಲೂಕಿನ ವಿವಿಧ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಚಿಕ್ಕೋಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪ್ರವಾಹದಿಂದ ಉಂಟಾಗಿರುವ ಹಾನಿ ಬಗ್ಗೆ ವಾರದ ಬಳಿಕ ಸಮಗ್ರ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಲಾಗುವುದು. ಇದರ ಬಗ್ಗೆ ಕೇಂದ್ರಕ್ಕೆ ಸಂಪೂರ್ಣ ವರದಿ ನೀಡಿ ಪರಿಹಾರ ಕೋರಲಾಗುವುದು ಎಂದರು.

ಆಲಮಟ್ಟಿಯಿಂದ ಹಾನಿಯಿಲ್ಲ: ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹಿಸಿದರೂ ಮಹಾರಾಷ್ಟ್ರದ ಜನರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಹಿನ್ನೀರಿನಿಂದ ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದು ಕೆಲ ಮಾಧ್ಯಮಗಳಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ವರದಿಗಳು ಪ್ರಕಟವಾಗುತ್ತಿವೆ ಎಂದರು.

Advertisement

ಸಾಂಗ್ಲಿ ಹಾಗೂ ಕೊಲ್ಲಾಪುರಕ್ಕೆ ಆಲಮಟ್ಟಿ ಜಲಾಶಯ ಬಹಳ ದೂರದಲ್ಲಿವೆ. ಆದ್ದರಿಂದ ಈ ಜಲಾಶಯದ ಹಿನ್ನೀರು ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಯ ವ್ಯಾಪ್ತಿಯವರೆಗೆ ನಿಲ್ಲುವುದಿಲ್ಲ. ಮೇಲಾಗಿ ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ 123 ಟಿ.ಎಂ.ಸಿ ನೀರು ಸಂಗ್ರಹಿಸಬಹುದು. ಆದರೆ ಸದ್ಯಕ್ಕೆ ಕೇವಲ 85 ಟಿ.ಎಂ.ಸಿ ನೀರು ಮಾತ್ರ ಇದೆ. ಅದೇ ರೀತಿ ನಾರಾಯಣಪುರ ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 33 ಟಿ.ಎಂ.ಸಿ.ಸದ್ಯ 18 ಟಿ.ಎಂ.ಸಿ ಮಾತ್ರ ನೀರಿದೆ ಎಂದು ಅಂಕಿ ಅಂಶಗಳ ಸಮೇತ ಸ್ಪಷ್ಟಪಡಿಸಿದರು.

ದಂಪತಿ ರಕ್ಷಣೆ: ಬಳ್ಳಾರಿ ನಾಲಾ ಪ್ರವಾಹಕ್ಕೆ ಸಿಲುಕಿ ಬೆಳಗಾವಿ ತಾಲೂಕಿನ ಕಬಲಾಪುರ ಗ್ರಾಮದ ಮನೆಯೊಂದರ ಮೇಲೆ ಸುಮಾರು 60 ಗಂಟೆಗಳಿಂದ ಕುಳಿತಿದ್ದ ಕಾಳಪ್ಪ-ರತ್ನವ್ವ ದಂಪತಿಯನ್ನು ರಕ್ಷಿಸಿರುವುದಕ್ಕೆ ಮುಖ್ಯಮಂತ್ರಿಗಳು ಸಂತಸ ವ್ಯಕ್ತಪಡಿಸಿದರು. ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರ ವಿಶೇಷ ಕಾಳಜಿಯಿಂದಾಗಿ ಎರಡು ವಿಶೇಷ ಹೆಲಿಕಾಪ್ಟರ್‌ ಬಂದಿದ್ದು, ರಕ್ಷಣಾ ಕಾರ್ಯಕ್ಕಾಗಿ ಬೆಳಗಾವಿಯಲ್ಲಿ ನಿಯೋಜಿಸಲಾಗಿದೆ. ಇನ್ನೂ ಹೆಚ್ಚಿನ ರಕ್ಷಣಾ ದೋಣಿ ಹಾಗೂ ಹೆಲಿಕಾಪ್ಟರ್‌ ಒದಗಿಸುವ ಮೂಲಕ ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next