ಲಾಹೋರ್: ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಸಿಯಾಲ್‌ಕೋಟ್‌ನಲ್ಲಿರುವ 500 ವರ್ಷಗಳಷ್ಟು ಪುರಾತನವಾದ ಗುರುದ್ವಾರಕ್ಕೆ ಇನ್ನು ಮುಂದೆ ಭಾರತೀಯ ಸಿಕ್ಖರೂ ಭೇಟಿ ನೀಡಬಹುದು.
ಬಾಬೆ-ದೆ-ಬೇರ್ ಗುರುದ್ವಾರಕ್ಕೆ ಭೇಟಿ ನೀಡಲು ಭಾರತೀಯರಿಗೆ ಈವರೆಗೆ ಅವಕಾಶ ವಿರಲಿಲ್ಲ. ಆದರೆ, ಸೋಮವಾರದಿಂದ ಸಿಕ್ಖ್… ಯಾತ್ರಿಕರಿಗೆ ಗುರುದ್ವಾರದ ಬಾಗಿಲನ್ನು ತೆರೆಯಲಾಗಿದೆ. ಪಾಕಿಸ್ಥಾನ, ಯುರೋಪ್, ಕೆನಡಾ ಹಾಗೂ ಅಮೆರಿಕದ ಯಾತ್ರಿಗಳು ಇಲ್ಲಿಗೆ ಭೇಟಿ ನೀಡಲು ಅವಕಾಶವಿತ್ತು. ಈಗ ಭಾರತೀಯ ಯಾತ್ರಿಕರಿಗೂ ಅವಕಾಶ ಕಲ್ಪಿಸಿ ಅಲ್ಲಿನ ಸರಕಾರ ಆದೇಶ ಹೊರಡಿಸಿದೆ.
ಪ್ರತಿ ವರ್ಷ ಗುರು ನಾನಕ್‌ರ ಜನ್ಮದಿನ ಹಾಗೂ ಪುಣ್ಯತಿಥಿಯಂದು ಭಾರತದ ಸಾವಿರಾರು ಸಿಖ್ ಯಾತ್ರಿಕರು ಪಾಕಿಸ್ಥಾನಕ್ಕೆ ಭೇಟಿ ನೀಡುತ್ತಾರೆ.
16ನೇ ಶತಮಾನದಲ್ಲಿ ಗುರು ನಾನಕ್ ಅವರು ಕಾಶ್ಮೀರದಿಂದ ಸಿಯಾಲ್‌ಕೋಟ್‌ಗೆ ಬಂದಾಗ, ಬೇರಿ ಎಂಬ ಮರದ ಕೆಳಗೆ ಅವರು ಕುಳಿತಿದ್ದರು. ಇದರ ನೆನಪಿಗಾಗಿ ಸರ್ದಾರ್ ನಾಥ ಸಿಂಗ್ ಅವರು ಈ ಪ್ರದೇಶದಲ್ಲಿ ಗುರುದ್ವಾರವನ್ನು ನಿರ್ಮಿಸಿದರು ಎನ್ನುವುದು ಸಿಕ್ಖ್ರ ನಂಬಿಕೆ. ಈಗ ಈ ಗುರುದ್ವಾರಕ್ಕೆ ಭೇಟಿ ನೀಡಲು ಪಾಕ್ ಸರಕಾರ ಅವಕಾಶ ಕಲ್ಪಿಸಿರುವುದು ಸಿಕ್ಖ್ರಿಗೆ ಸಂತೋಷ ತಂದಿದೆ.
ಇತ್ತೀಚೆಗಷ್ಟೇ ಭಾರತೀಯ ಸಿಖ್ ಯಾತ್ರಿಕರ ನೆರವಿಗಾಗಿ ಕರ್ತಾರ್ಪುರ ಕಾರಿಡಾರ್ ನಿರ್ಮಿಸುವ ಪ್ರಸ್ತಾವಕ್ಕೆ ಎರಡೂ ದೇಶಗಳು ಸಹಿ ಹಾಕಿದ್ದು, ಕಾಮಗಾರಿ ಕೂಡ ಆರಂಭವಾಗಿದೆ. ಇದರ ಬೆನ್ನಲ್ಲೇ ಈಗ ಬಾಬೆ-ದೆ-ಬೇರ್ ಗುರುದ್ವಾರದ ಬಾಗಿಲು ತೆರೆದಿರುವುದು ಸಿಕ್ಖ್ರಲ್ಲಿ ಸಂಭ್ರಮ ಮೂಡಿಸಿದೆ.