Advertisement

500 ಕೆ.ಜಿ.ಚಿನ್ನ ಈಗಲೇ ಕರಗಿಸಿದ್ದೇವೆ: ಮದ್ರಾಸ್‌ ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರ ಮಾಹಿತಿ

06:39 PM Oct 13, 2021 | Team Udayavani |

ಚೆನ್ನೈ: ದೇಗುಲಗಳಲ್ಲಿ ಇರುವ ಚಿನ್ನ ಕರಗಿಸಿ ಅವುಗಳನ್ನು ಗಟ್ಟಿಗಳನ್ನಾಗಿ ಮಾಡುವ ಕ್ರಮ 44 ವರ್ಷ ಕ್ರಮ ಜಾರಿಯಲ್ಲಿದೆ ಎಂದು ತಮಿಳುನಾಡು ಸರ್ಕಾರ ಮದ್ರಾಸ್‌ ಹೈಕೋರ್ಟ್‌ಗೆ ಅರಿಕೆ ಮಾಡಿಕೊಂಡಿದೆ.

Advertisement

ಇದುವರೆಗೆ 500 ಕೆಜಿ ಚಿನ್ನವನ್ನು ಪರಿವರ್ತಿಸಲಾಗಿದೆ. 1977ರಿಂದಲೇ ಚಿನ್ನವನ್ನು ಕರಗಿಸಿ ಗಟ್ಟಿಗಳನ್ನಾಗಿಸಿ, ಬ್ಯಾಂಕ್‌ನಲ್ಲಿ ಠೇವಣಿ ಇರಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ಅಡ್ವೊಕೇಟ್‌ ಜನರಲ್‌ ಆರ್‌.ಷಣ್ಮುಗಸುಂದರಂ ನ್ಯಾ.ಆರ್‌.ಮಹಾದೇವನ್‌ ಮತ್ತು ನ್ಯಾ. ಅಬ್ದುಲ್‌ ಖುಧ್ದೋಸ್‌ ನೇತೃತ್ವದ ನ್ಯಾಯಪೀಠಕ್ಕೆ ಈ ಅಂಶವನ್ನು ವಿವರಿಸಿದ್ದಾರೆ. ಈ ಬಗ್ಗೆ ಸೆ.9ರಂದು ಹೊರಡಿಸಲಾಗಿದ್ದ ಆದೇಶ ರದ್ದುಗೊಳಿಸಬೇಕೆಂದು 2 ಅರ್ಜಿಗಳು ಸಲ್ಲಿಕೆಯಾಗಿದ್ದವು.

ಡಿಎಂಕೆ ಸರ್ಕಾರ ತಮಿಳುನಾಡಿನಲ್ಲಿರುವ ದೇಗುಲಗಳ 2,137 ಕೆ.ಜಿ. ಚಿನ್ನವನ್ನು ಮುಂಬೈನಲ್ಲಿ ಕರಗಿಸಿ ಗಟ್ಟಿಗಳನ್ನಾಗಿ ಮಾಡಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸುವ ಬಗ್ಗೆ ಚಿಂತನೆ ನಡೆಸಿತ್ತು. ಈ ಬಗ್ಗೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಆಕ್ಷೇಪ ಮಾಡಿದ್ದವು ಮತ್ತು ಸರ್ಕಾರದ ಕ್ರಮ ಪ್ರಶ್ನಿಸಿ ಎರಡು ಅರ್ಜಿಗಳು ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದವು. ಅವುಗಳ ವಿಚಾರಣೆ ನಡೆಸಿದ ನ್ಯಾಯಪೀಠ ರಾಜ್ಯ ಸರ್ಕಾರದ ಸ್ಪಷ್ಟನೆ ಬಯಸಿತ್ತು. “ಇದುವರೆಗೆ 500 ಕೆಜಿ ಚಿನ್ನ ಕರಗಿಸಿ, ಗಟ್ಟಿಯಾಗಿ ಪರಿವರ್ತಿಸಿ ಠೇವಣಿ ಇರಿಸಲಾಗಿದೆ. ಅದರಿಂದಾಗಿ 11 ಕೋಟಿ ರೂ. ಬಡ್ಡಿ ಸರ್ಕಾರಕ್ಕೆ ಪಾವತಿಯಾಗಿದೆ. ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಈ ಬಗ್ಗೆ ಇರುವ ಆರೋಪ ಸುಳ್ಳು’ ಎಂದು ಅಡ್ವೊಕೇಟ್‌ ಜನರಲ್‌ ನ್ಯಾಯಪೀಠಕ್ಕೆ ಮಾಹಿತಿ ನೀಡಿದ್ದಾರೆ.

ಪ್ರಕ್ರಿಯ ಮೇಲುಸ್ತುವಾರಿಗಾಗಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಮೂರ್ತಿ ಮತ್ತು ಹೈಕೋರ್ಟ್‌ನ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ಇರುವ ಸಮಿತಿ ರಚಿಸಲಾಗಿದೆ ಎಂದಿದ್ದಾರೆ.

ಅರ್ಜಿದಾರರ ಪರ ವಾದಿಸಿದ ನ್ಯಾಯವಾದಿ ಗೋಪಾಲ ಶಂಕರನಾರಾಯಣನ್‌ ಮುಜರಾಯಿ ಇಲಾಖೆಯಲ್ಲಿ ದೇಗುಲಗಳಲ್ಲಿ ಇರುವ ಆಭರಣಗಳ ಮಾಹಿತಿಯನ್ನು ಸರಿಯಾಗಿ ನಮೂದಿಸಿಲ್ಲ. ಹೀಗಾಗಿ, ಭಕ್ತರಿಗೆ ಮಾಹಿತಿಯೇ ಇಲ್ಲದಂತಾಗಿದೆ. ಟ್ರಸ್ಟಿಗೆ ಮಾತ್ರ ದೇಗುಲ ಆಭರಣ ವಿನ್ಯಾಸ ಬದಲಿಸುವ , ದುರಸ್ತಿ ಮಾಡುವ ನಿರ್ಧಾರವಿದೆ ಮತ್ತು ಕರಗಿಸುವ ಅಧಿಕಾರ ಹೊಂದಿದ್ದಾರೆ ಎಂದು ಅವರು ವಾದಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಅ.21ರಂದು ನಡೆಯಲಿದೆ. ತಮಿಳುನಾಡು ಮುಜರಾಯಿ ಸಚಿವ ಪಿ.ಶೇಖರ ಬಾಬು ಇತ್ತೀಚೆಗೆ ಮಾತನಾಡಿದ್ದ ವೇಳೆ “ಸರ್ಕಾರದ ವ್ಯಾಪ್ತಿಯಲ್ಲಿ 38 ಸಾವಿರ ದೇಗುಲಗಳು ಇವೆ. ಅವುಗಳಲ್ಲಿ 10 ಸಾವಿರ ಕೋಟಿ ರೂ. ಮೌಲ್ಯದ 2 ಸಾವಿರ ಕೆ.ಜಿ.ಚಿನ್ನ’ ಇದೆ ಎಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next