ನರಗುಂದ: ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ನಿಷೇಧಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ನರಗುಂದ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಸ್ಥಳೀಯ ಪುರಸಭೆ ಪಣ ತೊಟ್ಟಿದೆ.
ಪುರಸಭೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದು, ದಾಳಿ ನಡೆಸಿದ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಂಡುಬಂದಲ್ಲಿ ಆರಂಭದಲ್ಲಿ ಸ್ಥಳದಲ್ಲೇ ಐನೂರು ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಸೋಮವಾರ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಸಂಗಮೇಶ ಬ್ಯಾಳಿ ನೇತೃತ್ವದಲ್ಲಿ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಪಟ್ಟಣದಾದ್ಯಂತ ಕಾರ್ಯಾಚರಣೆ ನಡೆಸಿದರು.
ಮಧ್ಯಾಹ್ನವರೆಗೆ ಸುಮಾರು 25 ಅಂಗಡಿಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು 12 ಅಂಗಡಿಗಳಲ್ಲಿ ದೊರೆತ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಸೂಲಿ ಮಾಡಿದರು. ಬಳಿಕ ಪ್ಲಾಸ್ಟಿಕ್ ಕಡ್ಡಾಯವಾಗಿ ಬಳಸದಂತೆ ತಾಕೀತು ಮಾಡಿದರು.
ಗರಿಷ್ಠ 5 ಸಾವಿರ ದಂಡ: ಅಂಗಡಿಗಳಲ್ಲಿ ಪ್ಲಾಸ್ಟಿಕ್ ದೊರೆತರೆ ಆರಂಭದಲ್ಲಿ 100 ರೂ.ಯಿಂದ 5 ಸಾವಿರ ರೂ. ವರೆಗೆ ಗರಿಷ್ಠ ದಂಡ ವಿಧಿಸಲಾಗುತ್ತದೆ. ಸೋಮವಾರ 12 ಅಂಗಡಿಗಳಿಗೆ ದಂಡ ವಸೂಲಿ ಮಾಡಲಾಗಿದೆ.
ಪಟ್ಟಣದಲ್ಲಿ ಮುನ್ನೆಚ್ಚರಿಕೆ ನೀಡಲಾಗಿತ್ತು. ಎರಡನೇ ಬಾರಿಗೆ ದಾಳಿ ನಡೆಸಿದಾಗ ಪ್ಲಾಸ್ಟಿಕ್ ದೊರೆತರೆ ನ್ಯಾಯಾಲಯ ನೊಟೀಸ್ ನೀಡಲಾಗುತ್ತದೆ. ಅಲ್ಲಿ ಕನಿಷ್ಠ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಸಂಗಮೇಶ ಬ್ಯಾಳಿ ತಿಳಿಸಿದರು.
ಪ್ಲಾಸ್ಟಿಕ್ ನಿಷೇಧ ಜಾಗೃತಿ: ಪಟ್ಟಣದ ಎಲ್ಲ ಅಂಗಡಿಗಳಲ್ಲಿ ಪುರಸಭೆಯಿಂದ ಪ್ಲಾಸ್ಟಿಕ್ ನಿಷೇಧ ಬಗ್ಗೆ ಮತ್ತು ಯಾವುದೇ ತೂಕದ ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ. ಪರಿಸರ ಸಂರಕ್ಷಣೆಗಾಗಿ ಸಹಕರಿಸಿ ಎಂಬ ಕರಪತ್ರಗಳನ್ನು ಅಂಟಿಸಲಾಗಿದೆ ಎಂದು ಸಂಗಮೇಶ ಬ್ಯಾಳಿ ತಿಳಿಸಿದರು.ಕಿರಿಯ ಆರೋಗ್ಯ ನಿರೀಕ್ಷಕ ಎಚ್.ಎಲ್. ಲಿಂಗನಗೌಡ್ರ, ಮಹಾಂತೇಶ ಚಲವಾದಿ ಮುಂತಾದವರಿದ್ದರು.