Advertisement

500 ಸುಧಾರಿತ ಸಾಂಪ್ರದಾಯಿಕ ಕಟ್ಟಗಳ ನಿರ್ಮಾಣ ಗುರಿ: ಡಾ|ರವಿ

08:10 AM Sep 04, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಲಸಂರಕ್ಷಣೆ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರತಿ ತಾಲೂಕಿನಲ್ಲಿ ತಲಾ 100ರಂತೆ 500 ಸುಧಾರಿತ ಸಾಂಪ್ರದಾಯಿಕ ಕಟ್ಟಗಳನ್ನು (ತೋಡುಗಳು ಹಾಗೂ ತೊರೆಗಳಲ್ಲಿ ತಡೆ ನಿರ್ಮಿಸಿ ನೀರು
ನಿಲ್ಲಿಸುವ ಪಾರಂಪರಿಕ ವ್ಯವಸ್ಥೆ) ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ ತಿಳಿಸಿದರು.

Advertisement

ಸಾಂಪ್ರದಾಯಿಕ ಕಟ್ಟಗಳ ನಿರ್ಮಾಣ ಕುರಿತು ಜಿ.ಪಂ. ಸಭಾಂಗಣದಲ್ಲಿ ಮಂಗಳೂರು ತಾಲೂಕಿನ ಜನಪ್ರತಿನಿಧಿಗಳಿಗೆ, ಪಿಡಿಒಗಳಿಗೆ ನಡೆದ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು.

ನರೇಗಾದಡಿ ಜಿಲ್ಲೆಯಲ್ಲಿ 1,000 ಕಿಂಡಿ ಅಣೆಕಟ್ಟುಗಳ ನಿರ್ಮಾಣದ ಗುರಿ ಹೊಂದಲಾಗಿದ್ದು ಪ್ರಗತಿಯಲ್ಲಿದೆ. ಮಾರ್ಚ್‌ನೊಳಗೆ ಇವುಗಳನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು. ಇದೇ ಅವಧಿಯಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಸಾಧ್ಯವಿಲ್ಲದ ಕಡೆಗಳಲ್ಲಿ ಸುಧಾರಿತ ಸಾಂಪ್ರದಾಯಿಕ ಕಟ್ಟಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು ಗ್ರಾ.ಪಂ. ಪಿಡಿಒಗಳು, ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಸ್ಥಳೀಯರೊಂದಿಗೆ ಚರ್ಚಿಸಿ ಸೂಕ್ತ ಸ್ಥಳ ಗುರುತಿಸುವ ಕೆಲಸ ಮಾಡಬೇಕು ಎಂದು ಅವರು ಸೂಚನೆ ನೀಡಿದರು.

ಸರಕಾರದ ಪ್ರೋತ್ಸಾಹ ಅಗತ್ಯ
ಬೋರ್‌ವೆಲ್‌ಗ‌ಳನ್ನು ಕೊರೆಯುವ ಬದಲು ನೂರಾರು ವರ್ಷಗಳಿಂದ ರೈತರು ನೀರು ಸಂರಕ್ಷಣೆಗೆ ಅನುಸರಿಸುತ್ತಾ ಬಂದಿರುವ ಪಾರಂಪರಿಕ ಕಟ್ಟಗಳನ್ನು ನಿರ್ಮಿಸುವ ಕಾರ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಕಿಂಡಿ ಅಣೆಕಟ್ಟುಗಳ ಗುಣಮಟ್ಟಕ್ಕೆ ಹೋಲಿಸಿದರೆ, ಸಾಂಪ್ರದಾಯಿಕ ಕಟ್ಟಗಳು ಜಲ ಸಂರಕ್ಷಣೆಯಲ್ಲಿ ಪರಿಣಾಮಕಾರಿ ಎಂದು ಸಂಪನ್ಮೂಲ ವ್ಯಕ್ತಿ ವಾರಣಾಶಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ| ವಾರಣಾಶಿ ಕೃಷ್ಣಮೂರ್ತಿ ಹೇಳಿದರು. ಜಲಸಾಕ್ಷರತಾ ಅಧಿಕಾರಿ ಸುಧಾಕರ್‌ ಯೋಜನೆಯ ಮಾಹಿತಿ ನೀಡಿದರು. ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್‌ ಮೋನು, ಜಿ.ಪಂ. ಸಹಾಯಕ ಕಾರ್ಯದರ್ಶಿ, ತಾಂತ್ರಿಕ ಸಲಹೆಗಾರ ಗೋಪಾಲಕೃಷ್ಣ ಭಟ್‌ ಮೊದಲಾದವರು ಉಪಸ್ಥಿತರಿದ್ದರು. 

1,500 ಕಿಂಡಿ ಅಣೆಕಟ್ಟುಗಳಿಗೆ ಪುನಶ್ಚೇತನ
ದ.ಕ. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಂದ ನಿರ್ಮಿಸಿರುವ ಸುಮಾರು 1,500 ಕಿಂಡಿ ಅಣೆಕಟ್ಟುಗಳು ನಾದುರಸ್ತಿಯಲ್ಲಿವೆ. ಇವುಗಳನ್ನು ದುರಸ್ತಿಗೊಳಿಸಿ ಪುನಶ್ಚೇತನ ನೀಡಲು ನಿರ್ಧರಿಸಲಾಗಿದೆ. ಇದಲ್ಲದೆ ನರೇಗ ಯೋಜನೆಯಲ್ಲಿ ಸುಮಾರು 1,000 ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳು ಒಟ್ಟು ಸೇರಿದರೆ ಈ ವರ್ಷಹೊಸದಾಗಿ ಸುಮಾರು 2,500 ಕಿಂಡಿಅಣೆಕಟ್ಟುಗಳು ಜಲಸಂರಕ್ಷಣೆ ಹಾಗೂ ಕೃಷಿಗೆ ಲಭ್ಯವಾಗಲಿವೆ ಎಂದು ಜಿ.ಪಂ. ಸಿಇಒ ಡಾ| ಎಂ.ಆರ್‌. ರವಿ ವಿವರಿಸಿದರು.

Advertisement

ಸಾಂಪ್ರದಾಯಿಕ ಕಟ್ಟಗಳು
ಕರಾವಳಿಯಲ್ಲಿ ಹಿಂದೆ ಕೃಷಿಗೆ ಪಾರಂಪರಿಕ ಕಟ್ಟಗಳೇ ಜೀವಾಳವಾಗಿದ್ದವು. ತೋಡು, ತೊರೆಗಳಿಗೆ ಸಾಮಾನ್ಯವಾಗಿ ಡಿಸೆಂಬರ್‌ ಅಂತ್ಯ ಅಥವಾ ಜನವರಿಯಲ್ಲಿ ಕಟ್ಟಗಳನ್ನು ನಿರ್ಮಿಸಿ ಕೃಷಿಗೆ ನೀರುಣಿಸಲಾಗುತ್ತಿತ್ತು. ಮಳೆ ಬಂದೊಡನೆ ಅವುಗಳನ್ನು ಕಡಿದುಬಿಡಲಾಗುತ್ತಿತ್ತು. ಸೊಪ್ಪು, ಮರದ ಬಳ್ಳಿ, ಮರದ ಗೂಟ, ಕಲ್ಲು, ಮಣ್ಣು ಮುಂತಾದುವುಗಳನ್ನು ಬಳಸಿ ಕಟ್ಟಗಳನ್ನು ಕಟ್ಟಲಾಗುತ್ತಿತ್ತು. ಈಗ ಇವುಗಳಲ್ಲಿ ಸುಧಾರಣೆಯಾಗಿದ್ದು ಪ್ಲಾಸ್ಟಿಕ್‌ ಶೀಟುಗಳು, ಮರಳು ಮುಂತಾದುವುಗಳನ್ನು ಬಳಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ವನರಾಯಿ ಪ್ರತಿಷ್ಠಾನ ಪಾರಂಪರಿಕ ಕಟ್ಟಗಳ ನಿರ್ಮಾಣ ಆಂದೋಲನವನ್ನು 1986ರಿಂದ ಕೈಗೊಂಡಿದ್ದು ಈವರೆಗೆ 3,50,000 ಕಟ್ಟಗಳನ್ನು ನಿರ್ಮಿಸಲಾಗಿದೆ. ಎಂದು ಡಾ| ವಾರಣಾಶಿ ಕೃಷ್ಣಮೂರ್ತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next