Advertisement

ಓವಲ್‌ ವಿಕ್ಟರಿಗೆ 50 ವರ್ಷ

10:19 PM Aug 23, 2021 | Team Udayavani |

ಕಳೆದ ಶತಮಾನದ 70ರ ದಶಕದ ಆರಂಭ ಎನ್ನುವುದು ಭಾರತೀಯ ಕ್ರಿಕೆಟಿನ ಸುವರ್ಣ ಯುಗವಾಗಿ ದಾಖಲಾಗಿದೆ. ಸುನೀಲ್‌ ಗಾವಸ್ಕರ್‌ ಎಂಬ ಮಹಾತಾರೆ ಹಾಗೂ ಅಜಿತ್‌ ವಾಡೇಕರ್‌ ಎಂಬ ಯಶಸ್ವೀ ನಾಯಕನ ಉದಯ, ವೆಸ್ಟ್‌ ಇಂಡೀಸ್‌-ಇಂಗ್ಲೆಂಡ್‌ ನೆಲದಲ್ಲಿ ಮೊದಲ ಟೆಸ್ಟ್‌ ಗೆಲುವು, ಒಂದೇ ವರ್ಷದಲ್ಲಿ ವಿದೇಶದಲ್ಲಿ ಮೊಳಗಿಸಿದ ಎರಡು ಸರಣಿ ಜಯಭೇರಿ… ಎಲ್ಲವೂ ಒಂದಕ್ಕಿಂತ ಒಂದು ಮಿಗಿಲಾದ ಸಾಧನೆಯಾಗಿವೆ.

Advertisement

ಇವುಗಳಲ್ಲಿ ಇಂಗ್ಲೆಂಡ್‌ ನೆಲದಲ್ಲಿ ಭಾರತ ಸಾಧಿಸಿದ ಮೊದಲ ಟೆಸ್ಟ್‌ ಗೆಲುವಿಗೆ ಮಂಗಳವಾರ ಸುವರ್ಣ ಸಂಭ್ರಮ. ಈ ವಿಜಯೋತ್ಸವವನ್ನು 1971ರ ಆಗಸ್ಟ್‌ 24ರಂದು ಆಚರಿಸಲಾಗಿತ್ತು. ಅಂದು ಗಣೇಶ ಚತುರ್ಥಿಯ ಸಂಭ್ರಮವೂ ಮೇಳೈಸಿತ್ತು!

ಮರೆಯಲಾಗದ ಓವಲ್‌ ಜಯ:

ಲಾರ್ಡ್ಸ್‌ ಮತ್ತು ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೊದಲೆರಡು ಟೆಸ್ಟ್‌ ಡ್ರಾಗೊಂಡ ಬಳಿಕ ಇತ್ತಂಡಗಳು 3ನೇ ಹಾಗೂ ಅಂತಿಮ ಟೆಸ್ಟ್‌ ಆಡಲು ಲಂಡನ್‌ನ “ಕೆನ್ನಿಂಗ್ಟನ್‌ ಓವಲ್‌’ ಕ್ರೀಡಾಂಗಣಕ್ಕೆ ಆಗಮಿಸಿದ್ದವು. ಇಲ್ಲಿ ಭಾರತ 4 ವಿಕೆಟ್‌ಗಳ ಐತಿಹಾಸಿಕ ಗೆಲುವು ಸಾಧಿಸಿತು. ಈ ಜಯಭೇರಿ ಹಲವು ಪ್ರಥಮಗಳಿಗೆ ವೇದಿಕೆಯಾಯಿತು.

ಇದು ಕ್ರಿಕೆಟ್‌ ಜನಕರ ನಾಡಿನಲ್ಲಿ ಭಾರತಕ್ಕೆ ಒಲಿದ ಪ್ರಪ್ರಥಮ ಟೆಸ್ಟ್‌ ಗೆಲುವು. ಅಂತೆಯೇ ಇಂಗ್ಲೆಂಡ್‌ ನೆಲ ದಲ್ಲಿ ಸಾಧಿಸಿದ ಮೊದಲ ಸರಣಿ ವಿಜಯ. 1968ರ ಬಳಿಕ ಆಡಿದ 28 ಟೆಸ್ಟ್‌ಗಳಲ್ಲಿ ಇಂಗ್ಲೆಂಡ್‌ ಅನುಭವಿಸಿದ ಪ್ರಥಮ ಸೋಲು!

Advertisement

ಚಂದ್ರು ಸ್ಪಿನ್‌ ಮ್ಯಾಜಿಕ್‌: 

ಟಾಸ್‌ ಗೆದ್ದ ಇಂಗ್ಲೆಂಡ್‌ ಮೊದಲ ದಿನವೇ 355 ರನ್‌ ಪೇರಿಸಿ ಆಲೌಟ್‌ ಆಯಿತು. ದ್ವಿತೀಯ ದಿನ ಮಳೆಯಿಂದ ಆಟ ಸಾಗಲಿಲ್ಲ. 3ನೇ ದಿನ ಬ್ಯಾಟಿಂಗ್‌ ಆರಂಭಿಸಿದ ಭಾರತ 7ಕ್ಕೆ 234 ರನ್‌ ಗಳಿಸಿತು. ಅನಂತರ ವಿರಾಮ ದಿನ. 4ನೇ ದಿನ ಬ್ಯಾಟಿಂಗ್‌ ಮುಂದುವರಿಸಿ 284ಕ್ಕೆ ಸರ್ವಪತನ ಕಂಡಿತು.

ಅಂದೇ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ರೇ ಇಲ್ಲಿಂಗ್‌ವರ್ತ್‌ ಬಳಗಕ್ಕೆ ಸ್ಪಿನ್‌ ಮಾಂತ್ರಿಕ ಚಂದ್ರಶೇಖರ್‌ ಮರ್ಮಾ ಘಾತವಿಕ್ಕಿದರು. ಇಂಗ್ಲೆಂಡ್‌ 101ಕ್ಕೆ ಗಂಟುಮೂಟೆ ಕಟ್ಟಿತು. ಚಂದ್ರಶೇಖರ್‌ ಸಾಧನೆ 38ಕ್ಕೆ 6 ವಿಕೆಟ್‌! ಅವರು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಥದೊಂದು ಘಾತಕ ಸ್ಪೆಲ್‌ ನಡೆಸದೇ ಹೋಗಿದ್ದರೆ ಭಾರತಕ್ಕೆ ಈ ಗೆಲುವು ಒಲಿಯುವ ಸಾಧ್ಯತೆ ಇರಲಿಲ್ಲ. ಈ ಕಾರಣಕ್ಕಾಗಿ ಇಂದಿಗೂ ಇದು “ಚಂದ್ರು ಟೆಸ್ಟ್‌’ ಎಂದೇ ಕರೆಸಿಕೊಳ್ಳುತ್ತದೆ.

173 ರನ್‌ ಗುರಿ:

ಮೊದಲ ಇನ್ನಿಂಗ್ಸ್‌ನಲ್ಲಿ 71 ರನ್‌ ಲೀಡ್‌ ಪಡೆದು ದೊಂದೇ ಇಂಗ್ಲೆಂಡ್‌ ಪಾಲಿನ ಸಮಾಧಾನಕರ ಸಂಗತಿ. 173 ರನ್‌ ಗುರಿ ಪಡೆದ ಭಾರತ 4ನೇ ದಿನದ ಅಂತ್ಯಕ್ಕೆ 2ಕ್ಕೆ 76 ರನ್‌ ಗಳಿಸಿ ಇತಿಹಾಸದ ಬಾಗಿಲಲ್ಲಿ ನಿಂತಿತ್ತು.

ಆದರೆ ಅಂತಿಮ ದಿನ ಇಂಗ್ಲೆಂಡ್‌ ಬೌಲರ್‌ಗಳ ಕೈ ಮೇಲಾಯಿತು. ಭಾರತದ ವಿಕೆಟ್‌ ಉದುರುತ್ತ ಹೋದಾಗ ಆತಂಕ ಮನೆ ಮಾಡಿದ್ದು ಸುಳ್ಳಲ್ಲ. ಅಜಿತ್‌ ವಾಡೇಕರ್‌ ಹಿಂದಿನ ದಿನದ ಮೊತ್ತಕ್ಕೇ ರನೌಟ್‌ ಆದರು (45). ಆದರೆ ದಿಲೀಪ್‌ ಸರ್ದೇಸಾಯಿ (40), ಜಿ.ಆರ್‌. ವಿಶ್ವನಾಥ್‌ (33), ಏಕನಾಥ್‌ ಸೋಲ್ಕರ್‌ (ಔಟಾಗದೆ 28) ಸೇರಿಕೊಂಡು ತಂಡವನ್ನು ಯಶಸ್ವಿಯಾಗಿ ದಡ ಮುಟ್ಟಿಸಿದರು.

ಮಹಾಸಂಭ್ರಮ! :

ಈ ಗೆಲುವಿನ ಸುವರ್ಣ ಮಹೋತ್ಸವ ಸಮಯದಲ್ಲೇ ಟೀಮ್‌ ಇಂಡಿಯಾ ಇಂಗ್ಲೆಂಡ್‌ ಪ್ರವಾಸದಲ್ಲಿರುವುದು, ಲಾರ್ಡ್ಸ್‌ ಕೋಟೆಗೆ ಲಗ್ಗೆ ಹಾಕಿ 1-0 ಮುನ್ನಡೆ ಸಾಧಿಸಿರುವುದೆಲ್ಲ ಈ ಮಹಾಸಂಭ್ರಮವನ್ನು ನೂರ್ಮಡಿಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next