Advertisement
“ದ್ವಾರಕೀಶ್ ಚಿತ್ರ 50 ವರ್ಷಗಳ ಪ್ರಯಾಣ ಮಾಡಿಕೊಂಡು ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಏಳು-ಬಿಳು ಕಂಡ ನಾನು, ನನ್ನದೇ ಆದ ಬೋಟಿನಲ್ಲಿ ಬಂದವನು. ಸಿನಿಮಾರಂಗದಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ 50 ವರ್ಷ ಪೂರೈಸುವುದು ಸುಲಭವಲ್ಲ. ಮೊದಲು ದೇವರು ಆಯಸ್ಸು ಕೊಟ್ಟನಲ್ಲ, ಆ ರಾಘವೇಂದ್ರ ಸ್ವಾಮಿಗಳಿಗೊಂದು ಥ್ಯಾಂಕ್ಸ್ ಹೇಳ್ತೀನಿ. ಅಮೆರಿಕದಲ್ಲಿರುವ ನನ್ನ ಮಗ ಸಂತೋಷ್, ಇತ್ತೀಚೆಗೆ ನನ್ನ ಜೊತೆ ಮಾತಾಡುತ್ತಿದ್ದ.
Related Articles
Advertisement
ನನ್ನ ಈ ಪ್ರಗತಿಗೆ ನನ್ನೊಂದಿಗೆ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರು ಕಾರಣ. ಮುಖ್ಯವಾಗಿ ಡಾ.ರಾಜಕುಮಾರ್ ಕೈ ಹಿಡಿಯದಿದ್ದರೆ ನಾನು ನಿರ್ಮಾಪಕ ಆಗುತ್ತಿರಲಿಲ್ಲ. ಅದರಲ್ಲೂ ವರದಣ್ಣ ಓಕೆ ಎನ್ನದಿದ್ದರೆ, ಈ ದ್ವಾರಕೀಶ್ ನಿರ್ಮಾಪಕ ಎನಿಸಿಕೊಳ್ಳುತ್ತಿರಲಿಲ್ಲ. ಆಗ ರಾಜಕುಮಾರ್ ಡೇಟ್ ಸಿಗೋದು ಸುಲಭವಾಗಿರಲಿಲ್ಲ. ಅವರ ಜೊತೆ ನಟಿಸಿದ್ದೇನೆ. ಆಗೆಲ್ಲಾ, ನಿಮ್ಮನ್ನ ಈ ಸ್ಟುಡಿಯೋ ತುಂಬಾ ಎತ್ತಿಕೊಂಡು ಓಡಾಡ್ತೀನಿ.
ನನಗೆ ಡೇಟ್ ಕೊಡಿ ಅಂತ ಕೇಳುತ್ತಿದ್ದೆ. ಹೇಗೋ ಮನಸ್ಸು ಮಾಡಿ ಡೇಟ್ ಕೊಟ್ಟರು. ಎರಡನೇಯದಾಗಿ ನಾನು ಡಾ.ವಿಷ್ಣುವರ್ಧನ್ ನೆನಪಿಸಿಕೊಳ್ಳಬೇಕು. 50 ವರ್ಷ ಇರೋದ್ದಕ್ಕೆ ಅವನೂ ಕಾರಣ. ಅವನೊಂದಿಗೆ 19 ಚಿತ್ರ ಮಾಡಿದೆ. ಶಂಕರ್‌ನಾಗ್ ಜೊತೆ ಮೂರ್‍ನಾಲ್ಕು ,ಅಂಬರೀಶ್ ಜೊತೆ ಒಂದು ಸಿನಿಮಾ ಮಾಡಿದೆ. ಇದರೊಂದಿಗೆ ರಜನಿಕಾಂತ್‌ಗೆ ಮೂರು ಸಿನಿಮಾ ಮಾಡಿದ್ದೇನೆ. ತಮಿಳುನಾಡಲ್ಲಿ ಸ್ವಲ್ಪ ಹೆಸರು ಮಾಡಿದ್ದರೆ ಅದು ರಜನಿಕಾಂತ್‌ರಿಂದ.
ಇವರೆಲ್ಲರು ಬೆನ್ನು ತಟ್ಟಿದ್ದಕ್ಕೆ ಇಂದು ನನ್ನ ನಿರ್ಮಾಣ ಸಂಸ್ಥೆಗೆ 50 ವರ್ಷ ಕಳೆದಿದೆ. ಈ ನಡುವೆ ನಾನು ಕಳೆದ 10 ವರ್ಷದಿಂದ ಆ್ಯಕ್ಟೀವ್ ಆಗಿಲ್ಲ. ನಾನು ಲಕ್ಕಿ. ನನ್ನ ಮಗ ಯೋಗೀಶ್ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ. ಸದಾ ಅವನಿಗೆ ಬೈಯ್ತಾ ಇರ್ತೀನಿ. ಬಜೆಟ್ ನೋಡ್ಕೊಂಡು ಸಿನಿಮಾ ಮಾಡು ಅಂತ. ಹಿಂದೆ ನಾನು ಬಜೆಟ್ ನೋಡಿದ್ದರೆ, “ಸಿಂಗಾಪುರ್‌ನಲ್ಲಿ ರಾಜಾಕುಳ್ಳ’ ಆಗುತ್ತಿರಲಿಲ್ಲ. “ಆಫ್ರಿಕಾದಲ್ಲಿ ಶೀಲಾ’ ಮಾಡುತ್ತಿರಲಿಲ್ಲ.”ಪ್ರಚಂಡ ಕುಳ್ಳ’ ಮಾಡಲು ಸಾಧ್ಯವಾಗುತ್ತಿರಲಿಲ್ಲ.
“ಪ್ರಚಂಡ ಕುಳ್ಳ’ ಸಿನಿಮಾಗೆ 11 ಫ್ಲೋರ್ ಸೆಟ್ ಹಾಕಿದ್ದೆ. ನಾನೇ ಹೀರೋ ಆಗಿದ್ದೆ. ಲವ್ಲಿ ಡೇಸ್ ಅದು. ನನ್ನ ಲೈಫು ಒಂಥರಾ ಇಸಿಜಿ ಇದ್ದಂತೆ. ಅಪ್ ಅಂಡ್ ಡೌನ್ ಆಗಿದೆ. ಹೇಗೆಲ್ಲಾ ಫೇಸ್ ಮಾಡಿದೆ ಅನ್ನೋದು ನಂಗೊತ್ತು. ನನ್ನ ಜೊತೆ ಇದ್ದದ್ದು ರಾಘವೇಂದ್ರ ಸ್ವಾಮಿಗಳು. ಹಾಗಾಗಿ ಇಷ್ಟೆಲ್ಲಾ ಆಗೋಕೆ ಕಾರಣವಾಯ್ತು. ಈ 50 ವರ್ಷದ ಸಿನಿಮಾ ರಂಗದ ಜೀವನದಲ್ಲಿ ಮತ್ತೆ ರಾಜ್ ಫ್ಯಾಮಿಲಿ ಜೊತೆ ಸಿನಿಮಾ ಮಾಡಿದ್ದು ಸಂತೋಷವಾಗಿದೆ. ನಾನು 50 ವರ್ಷ ನಡೆಸಿದ್ದೇನೆ. ಚಿತ್ರರಂಗದಲ್ಲಿ ನನ್ನ ಮಗ 100 ವರ್ಷ ಮಾಡಲಿ’ ಎಂಬುದು ದ್ವಾರಕೀಶ್ ಮಾತು.
50 ವರ್ಷ ಸುಲಭವಲ್ಲದ್ವಾರಕೀಶ್ ಅಂಕಲ್ ಅಂದರೆ, ನಮ್ಮ ಫ್ಯಾಮಿಲಿ ಇದ್ದಂಗೆ. ಅವರು “ಮೇಯರ್ ಮುತ್ತಣ್ಣ’ ಸಿನಿಮಾ ನಿರ್ಮಿಸಿದಾಗ, ನಾನು 7 ವರ್ಷದ ಹುಡುಗ. ನಿಜ ಹೇಳ್ಳೋದಾದರೆ, ಕನ್ನಡದಲ್ಲಿ ಇದು ತುಂಬಾ ಒಳ್ಳೆಯ ಬ್ಯಾನರ್. “ದ್ವಾರಕೀಶ್ ಚಿತ್ರ’ ಅಂದರೆ, ಒಳ್ಳೆಯ ಸಿನಿಮಾಗಳೇ ಮೂಡುತ್ತವೆ. 50 ವರ್ಷ ಪೂರೈಸುವುದು ಸುಲಭವಲ್ಲ. ತುಂಬಾ ಪ್ರಾಮಾಣಿಕತೆ ಇದ್ದರೆ, ಪ್ರೀತಿ, ಶ್ರದ್ಧೆ ಇದ್ದರೆ ಮಾತ್ರ, ಐದು ದಶಕಗಳ ಕಾಲ ಸ್ಟಡಿಯಾಗಿರಲು ಕಾರಣ. ಎಷ್ಟೋ ವರ್ಷಗಳಿಂದಲೂ ಅವರ ಬ್ಯಾನರ್‌ನಲ್ಲಿ ಕೆಲಸ ಮಾಡಬೇಕೆಂಬ ಆಸೆ ಇದ್ದರೂ, ಕಾರಣಗಳಿಂದ ಆಗಲಿಲ್ಲ. “ಆಯುಷ್ಮಾನ್ ಭವ’ ಮೂಲಕ ಸೇರಿಕೊಂಡೆ. ಇನ್ನೊಂದೆರೆಡು ಒಳ್ಳೆಯ ಕಥೆ ಕೇಳಿದ್ದೇನೆ. ಅದನ್ನೂ ಯೋಗಿ ಕೈಯಲ್ಲೇ ಮಾಡಿಸ್ತೀನಿ’
-ಶಿವರಾಜಕುಮಾರ್, ನಟ