Advertisement

ವೈದ್ಯ ಕಾಲೇಜಿನಲ್ಲಿ ಶೇ.50 ಹುದ್ದೆ ಖಾಲಿ

04:30 PM Aug 30, 2018 | |

ಕೊಪ್ಪಳ: ಹಿಂದುಳಿದ ಜಿಲ್ಲೆಯಲ್ಲಿ ಮೆಡಿಕಲ್‌ ಕಾಲೇಜು ಬಂತಲ್ಲ ಎಂದು ಈ ಭಾಗದ ಜನರು ಖುಷಿಯಲ್ಲಿದ್ದರೆ, ಆರಂಭಿಸಿದ ನಾಲ್ಕೇ ವರ್ಷದಲ್ಲಿ ಮುಚ್ಚುವ ಸ್ಥಿತಿಗೆ ಬಂದಿದೆ. ಶೇ.50ಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿಯಿವೆ. ಎಂಟು ಬಾರಿ ಸಂದರ್ಶನಕ್ಕೆ ಕರೆದರೂ ಬರುವುದು ಬೆರಳೆಣಿಕೆ ಎಷ್ಟು ಜನ ಎಂದು ಆಡಳಿತ ಮಂಡಳಿ ಬೇಸರ ವ್ಯಕ್ತಪಡಿಸುತ್ತಿದೆ. ಹೀಗಾಗಿ ಕಿಮ್ಸ್‌ನ ಸ್ಥಿತಿ ಹರೋ…. ಹರ… ಎನ್ನುವಂತಾಗಿದೆ.

Advertisement

ಈ ಭಾಗದ ಜನಪ್ರತಿನಿಧಿಗಳ ನಿರಂತರ ಹೋರಾಟದಿಂದ ಹೈಕ ಭಾಗದ ಕೊಪ್ಪಳ ಜಿಲ್ಲೆಗೆ ಮೆಡಿಕಲ್‌ ಕಾಲೇಜನ್ನು ಕಳೆದ ನಾಲ್ಕು ವರ್ಷದ ಹಿಂದೆ ರಾಜ್ಯ ಸರ್ಕಾರ ಘೋಷಣೆ ಮಾಡಿತು. ನೂರೆಂಟು ಕನಸು ಕಟ್ಟಿಕೊಂಡು ಕಾಲೇಜು ಆರಂಭವಾಗಿದೆ. ಆದರೆ, ಇಲ್ಲಿನ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಪರಿಪೂರ್ಣ ಪ್ರಾಧ್ಯಾಪಕರಿಲ್ಲ. ಆಡಳಿತ ಕಚೇರಿಯಲ್ಲಿನ ದಾಖಲಾತಿ ನಿರ್ವಹಣೆಗೆ ಸಿಬ್ಬಂದಿ ಕೊರತೆ ಪ್ರತಿ ವರ್ಷ ಕಾಡುತ್ತಿದೆ. ಇದನ್ನು ಗಮನಿಸಿ ಕಳೆದ ನಾಲ್ಕು ವರ್ಷದಿಂದಲೂ ಮೆಡಿಕಲ್‌ ಕೌನ್ಸಿಲ್‌ ಆಫ್‌ ಇಂಡಿಯಾ ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶಾತಿಗೆ ನಿರಾಕರಣೆ ಮಾಡುತ್ತಲೇ ಬಂದಿದೆ. ಈ ವರ್ಷ ಕಿಮ್ಸ್‌ ನಿರ್ದೇಶಕರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರಿಂದ 150 ವಿದ್ಯಾರ್ಥಿಗಳಿಗೆ ಪ್ರವೇಶಾತಿ ಸಿಕ್ಕಿದೆ.

ಏನಿದೆ ಹುದ್ದೆಗಳ ಸ್ಥಿತಿ-ಗತಿ?: 4ನೇ ವರ್ಷಕ್ಕೆ ಬೋಧಕರ ಪೈಕಿ ಪ್ರೊಫೆಸರ್‌, ಅಸೋಸಿಯೇಟ್‌ ಪ್ರೊಫೆಸರ್‌, ಅಸಿಸ್ಟೆಂಟ್‌ ಪ್ರೊಫೆಸರ್‌, ಸಿನಿಯರ್‌ ರೆಸಿಡೆಂಟ್‌, ಟೂಟರ್‌, ಜೂನಿಯರ್‌ ರೆಸಿಡೆಂಟ್‌ ಸೇರಿದಂತೆ ಒಟ್ಟಾರೆ 212 ಹುದ್ದೆಗಳಿವೆ. ಈ ಪೈಕಿ ಕೇವಲ 88 ಹುದ್ದೆಗಳು ಭರ್ತಿಯಾಗಿವೆ. ಅಂದರೆ, 124 ಹುದ್ದೆ ಖಾಲಿಯಿವೆ. ಬೋಧಕೇತರ ಹುದ್ದೆಗಳಲ್ಲಿ 380 ಹುದ್ದೆಗಳಿದ್ದು, ಕೇವಲ 151 ಹುದ್ದೆಗಳು ಭರ್ತಿಯಾಗಿದ್ದರೆ, ಇನ್ನೂ 244 ಹುದ್ದೆಗಳು ಖಾಲಿಯಿವೆ. ಬೋಧಕ ಹಾಗೂ ಬೋಧಕೇತರರು ಸೇರಿದಂತೆ ಒಟ್ಟಾರೆ 368 ಹುದ್ದೆಗಳು ಖಾಲಿ ಇರುವುದು ಕಾಲೇಜು ಆಡಳಿತ ಮಂಡಳಿಯ ನಿದ್ದೆಗೆಡುವಂತೆ ಮಾಡಿದೆ.

8 ಬಾರಿ ಸಂದರ್ಶನ: ಮೆಡಿಕಲ್‌ ಕಾಲೇಜು ಆಡಳಿತ ಮಂಡಳಿ ಕಳೆದ 4 ವರ್ಷಗಳಲ್ಲಿ ಖಾಲಿ ಹುದ್ದೆಗಳ ಅನುಸಾರ ಅಧಿಸೂಚನೆ ಹೊರಡಿಸಿ ಬೋಧಕರ ನೇರ ಸಂದರ್ಶನಕ್ಕೆ ಅ ಧಿಸೂಚನೆ ಹೊರಡಿಸಿದೆ. ಆದರೆ ಕೇವಲ ಬೆರಳೆಣಿಕೆಯ ವೈದ್ಯರು ಸಂದರ್ಶನಕ್ಕೆ ಹಾಜರಾಗುತ್ತಾರೆ. ಸಂದರ್ಶನದಲ್ಲಿ ಆಯ್ಕೆಯಾದ್ರೂ ಕಾರ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಕಿಮ್ಸ್‌ನಲ್ಲಿ ನೇಮಕ ಹೊಂದಿದ ವೈದ್ಯರು ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕಾಗಿದೆ. ಅಲ್ಲದೇ, ಇಲ್ಲಿ ಆರ್‌ಟಿಐ ಕಾರ್ಯಕರ್ತರ ಕಾಟ ಹಾಗೂ ವೈದ್ಯರ ಮೇಲಿನ ಹಲ್ಲೆಯಿಂದ ಕಿಮ್ಸ್‌ಗೆ ಯಾರೂ ಬರಲು ಮನಸ್ಸು ಮಾಡುತ್ತಿಲ್ಲ ಎನ್ನುವ ಮಾತು ಆಡಳಿತ ಮಂಡಳಿಯಿಂದ ಕೇಳಿ ಬಂದಿದೆ.

ವಿದ್ಯಾರ್ಥಿಗಳ ಸ್ಥಿತಿ ಏನು?: ಕಾಲೇಜಿನಲ್ಲಿ ವೈದ್ಯರ ಹುದ್ದೆಗಳೇ ಖಾಲಿಯಿದ್ದರೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವವರು ಯಾರು? ಆಡಳಿತ ಮಂಡಳಿಯಲ್ಲಿ ನೌಕರರೇ ಇಲ್ಲವೆಂದರೆ ಕಿಮ್ಸ್‌ ಪತ್ರ ವ್ಯವಹಾರಗಳು ಹೇಗೆ ನಡೆಯಬೇಕು ಎನ್ನುವ ಪ್ರಶ್ನೆ ಎದುರಾಗಿದೆ. ವೈದ್ಯಕೀಯ ಕೋರ್ಸ್‌ ಇನ್ನುಳಿದ ಕೋರ್ಸ್‌ಗಳಂತಲ್ಲ. ಇಲ್ಲಿ ಪ್ರಬುದ್ಧತೆಯ ಬೋಧನೆ ಅಗತ್ಯವಾಗಿದೆ. ಸಕಾಲಕ್ಕೆ ಪ್ರಾಯೋಗಿಕ ತರಗತಿ ನಡೆಸಬೇಕಾಗುತ್ತೆ. ಆದರೆ, ಹುದ್ದೆಗಳೇ ಖಾಲಿಯಿವೆ. ಇದೆಲ್ಲವೂ ಸರ್ಕಾರಕ್ಕೆ ಗೊತ್ತಿದ್ದರೂ ಕಣ್ಮುಚ್ಚಿ ಕುಳುತಿರುವುದೇಕೆ ಎನ್ನುವ ಪ್ರಶ್ನೆ ಎದುರಾಗಿದೆ.

Advertisement

ಕಿಮ್ಸ್‌ನಲ್ಲಿ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ ನಡೆಸಿದರೂ ಯಾರೂ ಬರಲು ಮನಸ್ಸು ಮಾಡುತ್ತಿಲ್ಲ. ಬೆರಳೆಣಿಕೆಯ ವೈದ್ಯರು ಬರುತ್ತಾರೆ. ಕಾಲೇಜಿನಲ್ಲಿ ಬೋಧನೆ ಮಾಡಲು ಆರಂಭಿಸುತ್ತಿದ್ದಂತೆ ಹಿಂದೇಟು ಹಾಕಿ ವಾಪಾಸ್ಸಾಗುತ್ತಿದ್ದಾರೆ. ಕಿಮ್ಸ್‌ನ ಪರಿಸ್ಥಿತಿ ತುಂಬ ಗಂಭೀರವಾಗಿದೆ. ಇದು ಸರ್ಕಾರಕ್ಕೂ ಗೊತ್ತಿದೆ.
ಡಾ| ಶಂಕರ ಮಲ್ಲಾಪುರೆ,
ಕಿಮ್ಸ್‌ ನಿರ್ದೇಶಕ

ದತ್ತು ಕಮ್ಮಾರ 

Advertisement

Udayavani is now on Telegram. Click here to join our channel and stay updated with the latest news.

Next