Advertisement

ಯುವಕರಿಗೆ ಶೇ.50 ಟಿಕೆಟ್‌

11:40 AM Mar 09, 2020 | Suhan S |

ಹುಬ್ಬಳ್ಳಿ: ಜಾತ್ಯತೀತ ಜನತಾದಳ ಮುಂದಿನ ಎಲ್ಲ ಚುನಾವಣೆಗಳಲ್ಲಿ ಶೇ.50 ಯುವಕರಿಗೆ ಟಿಕೇಟ್‌ ನೀಡಲು ನಿರ್ಧರಿಸಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

Advertisement

ನಗರದ ವಾಸವಿ ಮಹಲ್‌ನಲ್ಲಿ ಆಯೋಜಿಸಿದ್ದ ಮುಂಬೈ ಕರ್ನಾಟಕದ 7 ಜಿಲ್ಲೆಗಳ ಬೆಳಗಾವಿ ವಿಭಾಗ ಮಟ್ಟದ ತರಬೇತಿ ಶಿಬಿರ ಹಾಗೂ ಕಾರ್ಯಕರ್ತರ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಪಕ್ಷ ಬೆಳೆಸುವ ನಿಟ್ಟಿನಲ್ಲಿ ಯುವಕರಿಗೆ ಆದ್ಯತೆ ನೀಡುವುದು ಅವಶ್ಯಕವಾಗಿದೆ ಎಂದರು.

ಪಕ್ಷದ ಶಕ್ತಿ ವೃದ್ಧಿಸಿಕೊಳ್ಳಲು ಕಾರ್ಯಾಗಾರ ಆಯೋಜಿಸಲಾಗಿತ್ತು. ಮುಖಂಡರು ಹಾಗೂ ಕಾರ್ಯಕರ್ತರಅಭಿಪ್ರಾಯ ಆಲಿಸಿದ ನಂತರ ಪಕ್ಷ ಮುಂಬೈ ಕರ್ನಾಟಕ ಭಾಗದಲ್ಲಿ ಮತ್ತೆ ಚೇತರಿಸಿಕೊಳ್ಳುವ ವಿಶ್ವಾಸ ಮೂಡಿದೆ. ನನ್ನ ಜೀವಿತಾವಧಿವರೆಗೂ ಪಕ್ಷ ಗಟ್ಟಿಗೊಳಿಸಲು ಶ್ರಮಿಸುತ್ತೇನೆ ಎಂದರು.

ಸ್ಥಳಿಯ ಮುಖಂಡರೊಂದಿಗೆ ಚರ್ಚಿಸಿ ಹೋರಾಟ ಹಮ್ಮಿಕೊಳ್ಳುವುದು ಅವಶ್ಯ. ಇದಕ್ಕೆ ನಾವೆಲ್ಲ ಮುಖಂಡರು ಬೆಂಬಲ ನೀಡುತ್ತೇವೆ. ನಾನು ಬಂದು ಹೋರಾಟದಲ್ಲಿ ಪಾಲ್ಗೊಳ್ಳುತ್ತೇನೆ. ಜನರಿಗೆ ಅನುಕೂಲವಾಗುವ ವಿಷಯಾಧಾರಿತ ಹೋರಾಟಗಳನ್ನು ಕೈಗೊಂಡರೆ ಪಕ್ಷ ಗಟ್ಟಿಗೊಳಿಸಲು ಸಾಧ್ಯವಾಗುವುದು. ಜನರಿಗೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಮನವರಿಕೆ ಮಾಡಿಕೊಡಬೇಕು. #ಪ್ರಾದೇಶಿಕ ಪಕ್ಷ ಬೆಳೆಸುವುದನ್ನು ನಾವು ತಮಿಳರಿಂದ ಕಲಿಯಬೇಕು ಎಂದರು.

ನನ್ನ ಬಗ್ಗೆ ನಿರಂತರ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ನಾನು ಉತ್ತರ ಕರ್ನಾಟಕ ವಿರೋಧಿ ಎಂದೇ ಕೆಲವರು ಆರೋಪಿಸುತ್ತಾರೆ. ನಾನು ಉತ್ತರ ಕರ್ನಾಟಕಕ್ಕೆ ನೀಡಿದ ಕೊಡುಗೆಯನ್ನು ಕಾರ್ಯಕರ್ತರು ತಿಳಿದುಕೊಂಡು ಅದನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು. ವಿಧಾನ ಪರಿಷತ್‌ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಶಿವಶಂಕರ ಕಲ್ಲೂರ ಅವರನ್ನು ಪಕ್ಷದ ವತಿಯಿಂದ ಕಣಕ್ಕಿಳಿಸುತ್ತಿದ್ದು, ಅವರನ್ನು ಗೆಲ್ಲಿಸಲು ಎಲ್ಲ ಮುಖಂಡರು ಶಕ್ತಿಮೀರಿ ಪ್ರಯತ್ನಿಸಬೇಕು ಎಂದರು.

Advertisement

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ನಾನು ರಾಜಕೀಯದಲ್ಲಿ ಉಳಿಯಲು ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಅವರೇ ಕಾರಣ. ನಾನು ಕಳೆದ 40 ವರ್ಷಗಳಿಂದ ವಿಧಾನ ಪರಿಷತ್‌ ಸದಸ್ಯನಾಗಿದ್ದೇನೆ. 16 ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಸದ್ಯದ ರಾಜಕೀಯ ನನಗೆ ಬೇಸರ ಮೂಡಿಸಿದೆ. ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯಬಾರದೆನಿಸುತ್ತದೆ. ಕೆಲ ದಿನಗಳಿಂದ ನಾನು ನಿರ್ಲಿಪ್ತನಾಗಿದ್ದೆ. ಆದರೆ 86ರ ಹರೆಯದಲ್ಲಿಯೂ ದೇವೇಗೌಡರು ಉತ್ಸಾಹದಿಂದ ಪಕ್ಷ ಸಂಘಟಿಸುವುದನ್ನು ನೋಡಿದರೆ ನನಗೆ ಸ್ಫೂರ್ತಿ ಬರುತ್ತದೆ. ನಾನು ಮುಕ್ತವಾಗಿ ಮಾತನಾಡುತ್ತೇನೆ. ಎಚ್‌.ಡಿ.ಕುಮಾರಸ್ವಾಮಿ ಈ ಭಾಗದ ಮುಖಂಡರನ್ನು ಕಡೆಗಣಿಸಿ ಟಿಕೇಟ್‌ ನೀಡುವಾಗ ಕೆಲ ತಪ್ಪು ನಿರ್ಣಯತೆಗೆದುಕೊಂಡರು. ಅವರು ಪಕ್ಷಕ್ಕೆ ಕರೆತಂದು ಟಿಕೇಟ್‌ ಕೊಟ್ಟ ಕೆಲವರು ಕೈಕೊಟ್ಟು ಹೋದರು. ನಾನು ಹಿರಿಯ ನಾಯಕ ದೇವೇಗೌಡರ ಹುಮ್ಮಸ್ಸು ನೋಡಿ ಇಲ್ಲಿಗೆ ಬಂದಿದ್ದೇನೆ ಎಂದರು.

ನನ್ನ ವಿರುದ್ಧ ಇಲ್ಲಸಲ್ಲದ ಆರೋಪಿಸಲಾಗುತ್ತದೆ. ನಾನು 1983ರಿಂದ ಪಕ್ಷ ನಿಷ್ಠೆ ಬದಲಿಸಿಲ್ಲ. ಹೊರಟ್ಟಿ ಅವರು ಬಿಜೆಪಿ ಸೇರುತ್ತಾರೆಂದು ಕೆಲವರು ಸುದ್ದಿ ಹರಡಿಸಿದರು. ಆದರೆ ಇದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ. ಪಕ್ಷ ನನ್ನ ಮೇಲೆ ವಿಶ್ವಾಸವಿಟ್ಟು ಸಚಿವನನ್ನಾಗಿ ಮಾಡಿದೆ. ನಾನು ಸಚಿವನಾಗಿದ್ದಾಗ ಒಳ್ಳೆ ಕೆಲಸ ಮಾಡಿದ ತೃಪ್ತಿ ನನಗಿದೆ ಎಂದರು.

ಪಕ್ಷದ ಮುಖಂಡ ವೈಎಸ್‌ವಿ ದತ್ತಾ ಮಾತನಾಡಿ, “ಬಿಜೆಪಿ ಹಾಗೂ ಕಾಂಗ್ರೆಸ್‌ ಆಡಳಿತ ದೆಹಲಿಯಿಂದ ಆದರೆ ಜೆಡಿಎಸ್‌ ಆಡಳಿತ ಕರ್ನಾಟಕದಿಂದಲೇ’ ಎಂಬ ಸಂದೇಶ ಜನರಿಗೆ ತಲುಪಿಸುವುದು ಕಾರ್ಯಕರ್ತರ ಜವಾಬ್ದಾರಿಯಾಗಿದೆ. ಸಿದ್ದರಾಮಯ್ಯ ಅವರು ಏನೇ ನಿರ್ಧಾರ ತಗೆದುಕೊಳ್ಳಲು ಸೋನಿಯಾಗಾಂಧಿ ಅನುಮತಿ ಬೇಕು. ಅದೇ ರೀತಿ ಜಗದೀಶ ಶೆಟ್ಟರ ಯಾವುದೇ ನಿರ್ಣಯ ಕೈಗೊಳ್ಳಲು ಮೋದಿ ಅಮಿತ್‌-ಶಾ ಅನುಮತಿ ಬೇಕು. ಆದರೆ ಜೆಡಿಎಸ್‌ ಹೈಕಮಾಂಡ್‌ ಕರ್ನಾಟಕದಲ್ಲೇ ಇದೆ ಎಂದರು.

ಮಾಜಿ ಶಾಸಕ ಎನ್‌.ಎಚ್‌.ಕೋನರಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಶಾಸಕ ಎಂ.ಎಸ್‌.ಅಕ್ಕಿ, ಶಿವಾನಂದ ಅಂಬಡಟ್ಟಿ, ಗುರುರಾಜ ಹುಣಶಿಮರದ, ರಾಜಣ್ಣ ಕೊರವಿ, ಬಿ.ಬಿ.ಗಂಗಾಧರಮಠ, ಶಿವಶಂಕರ ಕಲ್ಲೂರ ವೇದಿಕೆ ಮೇಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next