ಮಂಡ್ಯ/ಮದ್ದೂರು: ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕುದರಗುಂಡಿ ಗ್ರಾಮದಲ್ಲಿ ಸಾಲ ನೀಡಿದ್ದ ವ್ಯಕ್ತಿಯೊಬ್ಬ ದಲಿತ ಮಹಿಳೆ ಹಾಗೂ ಕುಟುಂಬವನ್ನು 16 ವರ್ಷಗಳಿಂದ ಜೀತಕ್ಕೆ ಇರಿಸಿಕೊಂಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಮಿಳುನಾಡು ಮೂಲದ ದಲಿತ ಮಹಿಳೆ, ಜಾನಕಮ್ಮ (35) ಎಂಬುವರು ಕುದರಗುಂಡಿ ಕಾಲೋನಿ ಬಸವನಪುರದಲ್ಲಿ ವಾಸವಾಗಿದ್ದು,ಮದ್ದೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್.ನಾಗೇಶ್ ಎಂಬುವರ ಮನೆಯಲ್ಲಿ ಜೀತದಾಳಾಗಿ ಕೆಲಸ ಮಾಡುತ್ತಿದ್ದರು.
ನಾಗೇಶ್, 16 ವರ್ಷಗಳ ಹಿಂದೆ ಜಾನಕಮ್ಮ ಹಾಗೂ ಆಕೆಯ ಪತಿ ಚಿನ್ನತಂಬಿಗೆ 50 ಸಾವಿರ ರೂ.ಸಾಲ ನೀಡಿ ಜೀತಕ್ಕೆ ಇರಿಸಿಕೊಂಡಿದ್ದ. ಚಿನ್ನತಂಬಿ ಅಕಾಲ ಮರಣಕ್ಕೀಡಾದ ಬಳಿಕ ನಾಗೇಶ್ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಜಾನಕಮ್ಮ,ಎಂಟು ತಿಂಗಳ ಹಿಂದೆ ತನ್ನ ಇಬ್ಬರು ಮಕ್ಕಳೊಂದಿಗೆ ಪರಾರಿಯಾಗಿ, ಬೆಕ್ಕಳೆಲೆ ಗ್ರಾಮಕ್ಕೆ ಬಂದು ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು.
ಬೆಕ್ಕಳೆಲೆ ಗ್ರಾಮದಲ್ಲಿ ಜಾನಕಮ್ಮ ವಾಸವಾಗಿರುವ ಮಾಹಿತಿ ಅರಿತ ನಾಗೇಶ್, ತನ್ನ ಬೆಂಬಲಿಗರಾದಭೈರಪ್ಪ ಹಾಗೂ ಪಾಂಡು ಅವರೊಂದಿಗೆ ಗ್ರಾಮಕ್ಕೆ ಬಂದು ಅಲ್ಲಿ ಜಾನಕಮ್ಮಳನ್ನು ಹಿಡಿದು ಎಳೆದಾಡಿ,ಹಲ್ಲೆ ನಡೆಸಿದ್ದ. ಆಕೆಯ ರಕ್ಷಣೆಗೆ
ಬಂದವರ ಮೇಲೂ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಜಾನಕಮ್ಮಳನ್ನು ಬಲವಂತವಾಗಿ ಅಪಹರಿಸಿಕೊಂಡು
ಹೋಗಿದ್ದ. ಬಳಿಕ ಅಪಹರಣದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಭಯಗೊಂಡ ನಾಗೇಶ್
ಆಕೆಯನ್ನು ಬಿಡುಗಡೆ ಮಾಡಿದ್ದ.
ವಿಷಯ ತಿಳಿದ ದಲಿತ ಸಂಘಟನೆಗಳ ಮುಖಂಡರು ಕೊಪ್ಪ ಠಾಣೆಗೆ ಮಾಹಿತಿ ನೀಡಿದರು. ಮದ್ದೂರು ಪೊಲೀಸರು ಈಗ ನಾಗೇಶ್‌ನನ್ನು ಬಂಧಿಸಿ, ಮದ್ದೂರು ಜೆಎಂಎಫ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ.