Advertisement

ವಿತರಣೆಗೆ 50 ಸಾವಿರ ಗಿಡ ಸಿದ್ಧ

09:19 AM May 24, 2022 | Team Udayavani |

ಬೆಳ್ತಂಗಡಿ: ಹಸುರನ್ನು ಬೆಳೆಸಿ ಪರಿಸರವನ್ನು ಉಳಿಸುವ ಉದ್ದೇಶದಿಂದ ಪ್ರತೀ ವರ್ಷ ಮಳೆಗಾಲದ ಆರಂಭದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಅತ್ಯಲ್ಪ ದರದಲ್ಲಿ ಬೆಲೆಬಾಳುವ ಗಿಡಗಳನ್ನು ಸಾರ್ವಜನಿಕರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ನೀಡಲಾಗುತ್ತದೆ. ಇದಕ್ಕಾಗಿ ಬೆಳ್ತಂಗಡಿ ಅರಣ್ಯ ಇಲಾಖೆಯ ಮುಂಡಾಜೆ ಸಸ್ಯಕ್ಷೇತ್ರದಲ್ಲಿ ಒಂದು ಲಕ್ಷಕ್ಕಿಂತ ಅಧಿಕ ಗಿಡಗಳು ತಯಾರಾಗಿವೆ.

Advertisement

ಅಳಿವಿನಂಚಿನಲ್ಲಿರುವ ಹಾಗೂ ಸಾಗುವಾನಿ, ನೇರಳೆ, ಹಲಸು, ಮಾವು ಬಿಲ್ವಪತ್ರೆ, ರಾಮಪತ್ರೆ, ಸಂಪಿಗೆ, ಮಾಗುವಾನಿ ಮೊದಲಾದ 40ವಿಧದ ಬೆಲೆ ಬಾಳುವ 50 ಸಾವಿರ ಗಿಡಗಳನ್ನು ಸಾರ್ವ ಜನಿಕರಿಗೆ ನೀಡಲಾಗುತ್ತದೆ. ಉಳಿದ ಗಿಡಗಳು ಸಂಘ ಸಂಸ್ಥೆ, ವನ ಮಹೋತ್ಸವ, ಇಲಾಖೆಯ ನಾನಾ ಯೋಜನೆಗಳಲ್ಲಿ ನಾಟಿ ಆಗಲಿವೆ.

135 ರೂ. ಸಹಾಯಧನ

ಈ ವಾರ ಅಥವಾ ಜೂನ್‌ ಮೊದಲ ವಾರದಲ್ಲಿ ಗಿಡಗಳ ವಿತರಣೆ ಆರಂಭವಾಗಲಿದೆ. ಸಾರ್ವಜನಿಕರಿಗೆ ನೀಡುವ ಗಿಡಗಳಿಗೆ ಒಂದು ವರ್ಷದ ಬಳಿಕ ಮುಂದಿನ ಮೂರು ವರ್ಷ ಅವುಗಳ ಬೆಳವಣಿಗೆ ಆಧಾರದಲ್ಲಿ ಇಲಾಖೆವತಿಯಿಂದ ಪರಿಶೀಲಿಸಿ ಒಟ್ಟು 135 ರೂ. ಸಹಾಯಧನ ನೀಡಲಾಗುತ್ತದೆ. ಒಂದು ಹೆಕ್ಟೇರ್‌ಗೆ ಗರಿಷ್ಠ 400 ಗಿಡಗಳನ್ನು ನೀಡ ಲಾಗುತ್ತದೆ. ಕೃಷಿಕರು ತಮ್ಮ ಆಧಾರ ಕಾರ್ಡ್‌, ಪಹಣಿ ಪತ್ರ, ಪಾಸ್‌ ಪೋರ್ಟ್‌ ಅಳತೆ ಭಾವಚಿತ್ರ, ರಾಷ್ಟ್ರೀಕೃತ ಬ್ಯಾಂಕ್‌ ಪಾಸ್‌ ಪುಸ್ತಕ ಹಾಗೂ ಜಾಗದ ನಕ್ಷೆಯ ನಕಲು ಪ್ರತಿ ಜತೆ ಅರಣ್ಯ ಇಲಾಖೆ ಬೆಳ್ತಂಗಡಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಮುಂಡಾಜೆ ಸಸ್ಯ ಕ್ಷೇತ್ರದಿಂದ ಗಿಡಗಳನ್ನು ಪಡೆಯಬಹುದಾಗಿದೆ. ಪುತ್ತೂರು, ಬಂಟ್ವಾಳ, ಸುಳ್ಯ ತಾಲೂಕಿನವರು ಅವರವರ ತಾಲೂಕಿನ ಅರಣ್ಯ ಇಲಾಖೆಯಿಂದ ಮಾಹಿತಿ ಪಡೆಯಬಹುದು. ಸಾಮಾಜಿಕ ಅರಣ್ಯ ಇಲಾಖೆಯಲ್ಲೂ ಮಾಹಿತಿ ಪಡೆಯಬಹುದು.

ಕಾಡಿನಿಂದ ಸಂಗ್ರಹ

Advertisement

ಮುಂಡಾಜೆ ಹಾಗೂ ಆಸುಪಾಸಿನ ಕಾಡು ಪ್ರದೇಶದಿಂದ ಮರಗಳು ಬೀಜ ಬಿಡುವ ಆಯಾಯ ಕಾಲದಲ್ಲಿ ಕಾಡಿನಿಂದ ಒಟ್ಟು ಮಾಡಿ ಸಸ್ಯಕ್ಷೇತ್ರದಲ್ಲಿ ಸಂಗ್ರಹಿಸಿ ಗಿಡಗಳ ಗಾತ್ರಕ್ಕನುಗುಣವಾಗಿ ಚೀಲಗಳಲ್ಲಿ ಹಾಕಿ ಬೆಳೆಯಲಾಗಿದೆ. ಪ್ರತೀ ಗಿಡಕ್ಕೆ ಸರಾಸರಿ 10 ರೂ. ವೆಚ್ಚ ತಗುಲುತ್ತದೆ. ಆದರೆ ಹಸುರನ್ನು ಹೆಚ್ಚಿಸುವ ಉದ್ದೇಶದಿಂದ ಕನಿಷ್ಠ ಒಂದು ರೂ. ನಿಂದ ಗರಿಷ್ಠ ಮೂರು ರೂ. ಗೆ ಸಾರ್ವಜನಿಕರಿಗೆ ಇಲಾಖೆಯು ನೀಡುತ್ತದೆ.

ಶೀಘ್ರ ಗಿಡ ವಿತರಣೆ

ಇಲಾಖೆ ಸಿಬಂದಿಯ ಸತತ ಶ್ರಮದಿಂದ ಗಿಡಗಳು ಉತ್ತಮವಾಗಿ ಬೆಳವಣಿಗೆ ಹೊಂದಿವೆ. ತಾಲೂಕಿನಲ್ಲಿ ಈಗಾಗಲೇ ಉತ್ತಮ ಮಳೆ ಆರಂಭವಾಗಿದ್ದು, ಸದ್ಯದಲ್ಲೇ ಗಿಡಗಳ ವಿತರಣೆ ಆರಂಭಿಸಲಾಗುವುದು. -ತ್ಯಾಗರಾಜ್‌, ವಲಯ ಅರಣ್ಯ ಅಧಿಕಾರಿ, ಬೆಳ್ತಂಗಡಿ

ರಿಯಾಯಿತಿ ದರ

ಹಲವು ವರ್ಷಗಳಿಂದ ನಿಗದಿತ ಸಂಖ್ಯೆಯ ಗಿಡಗಳನ್ನು ಮುಂಡಾಜೆ ಸಸ್ಯ ಕ್ಷೇತ್ರದಿಂದ ರಿಯಾಯಿತಿ ದರದಲ್ಲಿ ಪಡೆಯುತ್ತಿದ್ದೇನೆ ಇಲ್ಲಿನ ಗಿಡಗಳ ಗುಣಮಟ್ಟ ಹಾಗೂ ಬೆಳವಣಿಗೆ ಚೆನ್ನಾಗಿದೆ ಗಿಡಗಳಿಗೆ ಸಿಗುವ ಸಹಾಯಧನ ಕೂಡ ಇಲಾಖೆಯಿಂದ ಪಡೆಯುತ್ತಿದ್ದೇನೆ. -ರಾಜೇಶ್‌, ಕೃಷಿಕರು, ಮುಂಡಾಜೆ.

Advertisement

Udayavani is now on Telegram. Click here to join our channel and stay updated with the latest news.

Next