Advertisement

ಪ್ರತಿ ಹೆಕ್ಟೇರ್‌ಗೆ 50 ಸಾವಿರ ನೆರೆ ಪರಿಹಾರ ನೀಡಿ

05:59 PM Sep 03, 2022 | Team Udayavani |

ಬ್ಯಾಡಗಿ: ಅತಿವೃಷ್ಟಿಯಿಂದಾಗಿ ಬ್ಯಾಡಗಿ ಮತಕ್ಷೇತ್ರದ ರೈತರು ಸಂಕಷ್ಟಕ್ಕೀಡಾಗಿರುವುದು ಎಷ್ಟು ಸತ್ಯವೋ ಮತಕ್ಷೇತ್ರದಾದ್ಯಂತ ಯಾವುದೇ ಪರಿಹಾರ ಕಾರ್ಯ ನಡೆಯದೇ ಇರುವುದೂ ಅಷ್ಟೇ ಸತ್ಯವಾಗಿದೆ. ಡೊಡ್ಡ ಅಥವಾ ಸಣ್ಣ ಹಿಡುವಳಿದಾರರೆಂದು ಪ್ರತ್ಯೇಕಿಸದೇ ಪ್ರತಿ ಹೆಕ್ಟೇರ್‌ ಕೃಷಿಭೂಮಿಗೆ ಕೂಡಲೇ 50 ಸಾವಿರ ರೂ.ಪರಿಹಾರ ಘೋಷಣೆ ಮಾಡಬೇಕೆಂದು ಕಾಂಗ್ರೆಸ್‌ ಮುಖಂಡ ಎಸ್‌.ಆರ್‌.ಪಾಟೀಲ ಸರ್ಕಾರವನ್ನುಆಗ್ರಹಿಸಿದರು.

Advertisement

ಪಟ್ಟಣದ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರಂತರ ಮಳೆಯಿಂದ ತಾಲೂಕಿನಾದ್ಯಂತ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಸಂಪೂರ್ಣ ಹಾಳಾಗಿದೆ. ಮಳೆ ಸುರಿಯುತ್ತಿರುವ ಕಾರಣ ಬಿತ್ತನೆ ಮಾಡಿದ ಕ್ಷೇತ್ರದಲ್ಲಿ ರೈತರ ಕೈಗೆ ಬೆಳೆ ಸಿಗುವ ಅನುಮಾನಗಳಿವೆ. ಕೂಡಲೇ ಸರ್ಕಾರ ಸಣ್ಣ ಮತ್ತು ದೊಡ್ಡ ಹಿಡುವಳಿದಾರರನ್ನು ಪ್ರತ್ಯೇಕಿಸದೇ ಪ್ರತಿ ಹೆಕ್ಟೇರ್‌ಗೆ 50 ಸಾವಿರ ರೂ. ಪರಿಹಾರ ಘೋಷಿಸುವಂತೆ ಆಗ್ರಹಿಸಿದರು.

ಪಹಣಿ ಹಿಡಿದು ಹಣ ವಿತರಿಸಲಿ: ನೆರೆಯಂತಹ ಸಮಯದಲ್ಲಿ ಮನೆ ಕಳೆದುಕೊಂಡಿದ್ದಲ್ಲದೇ ಜನ, ಜಾನುವಾರು ಬೀದಿಗೆ ಬರುವ ಮೂಲಕ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿ ಅರ್ಜಿ ಸಲ್ಲಿಸಲು ಕಚೇರಿಗೆ ಬರಬೇಕೆಂಬುದು ಮೂರ್ಖತನದ ಪರಮಾವಧಿ. ಕೂಡಲೇ ಅಧಿಕಾರಿಗಳು ನೆರೆಯಲ್ಲಿ ಬದುಕು ಕಳೆದುಕೊಂಡವರನ್ನು ಪತ್ತೆ ಹಚ್ಚುವ ಮೂಲಕ ತಾವೇ ಸ್ವಯಂಪ್ರೇರಿತರಾಗಿ ಅರ್ಜಿ ಪಡೆದು ಪರಿಹಾರ ವಿತರಣೆ ಮಾಡುವಂತೆ ಆಗ್ರಹಿಸಿದರು.

ಮನೆ ಪರಿಹಾರದಲ್ಲಿ ಹಗರಣ: ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಮನೆಗಳು ಬಿದ್ದು ಬಡವರು ಬೀದಿಗೆ ಬಂದಿದ್ದಾರೆ. ಆದರೆ ನಿಜವಾಗಿಯೂ ಮನೆ ಕಳೆದುಕೊಂಡವರಿಗೆ ಪರಿಹಾರ ಸಿಗುತ್ತಿಲ್ಲ. ಬದಲಾಗಿ ಶಾಸಕರ ಹಿಂಬಾಲಕರು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ಬೀಳದ ಮನೆಗಳಿಗೆ ಪರಿಹಾರ ಕೊಡಿಸಲು ಮುಂದಾಗುತ್ತಿದ್ದಾರೆ. ಇದರಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದ್ದು, ಕೂಡಲೇ ತನಿಖೆ ನಡೆಸುವ ಮೂಲಕ ಶಾಸಕರ ಹಿಂಬಾಲಕರ ಅಕ್ರಮ ಬಯಲಿಗೆ ತರಬೇಕೆಂದು ಆಗ್ರಹಿಸಿದರು. ಅಲ್ಲದೇ, ಅರ್ಹರಿಗೆ ಪರಿಹಾರ ಸಿಗದಿದ್ದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ರಸ್ತೆ ಗುಂಡಿ ಮುಚ್ಚಿ: ಮುಖಂಡ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಪುರಸಭೆ, ಲೋಕೋಪಯೋಗಿ, ಪಿಎಂಜಿಎಸ್‌ವೈ, ಜಿಪಂ ಸೇರಿದಂತೆ ತಾಲೂಕಿನ ಎಲ್ಲ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಮೂಲಕ ಜನರ ಜೀವ ಉಳಿಸಿ ಪುಣ್ಯಕಟ್ಟಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಅಧ್ಯಕ್ಷ ಅಲ್ಪಸಂಖ್ಯಾತ ಘಟಕದ ಯೂನಸ್‌ ಅಹಮ್ಮದ ಸವಣೂರ, ಮುಖಂಡರಾದ ಶಶಿಧರ (ತೋಟಪ್ಪ) ಅಕ್ಕಿ, ಜಗದೀಶಗೌಡ ಪಾಟೀಲ, ಮಂಜುನಾಥ ಬೋವಿ, ಮಹೇಶ ಉಜನಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next