Advertisement

ರಜತ ಸಂಘಗಳಿಗೆ 50 ಸಾವಿರ ರೂ. ಕೊಡುಗೆ

10:43 AM Jun 24, 2019 | Suhan S |

ಶಿರಸಿ: ಸುಮಾರು 45 ಸಾವಿರ ಸದಸ್ಯರು ನಿತ್ಯ ಎರಡು ಹೊತ್ತು ಧಾರವಾಡ ಹಾಲು ಒಕ್ಕೂಟಕ್ಕೆ ಹಾಲು ನೀಡುತ್ತಿದ್ದು, ಸ್ಥಳೀಯವಾಗಿ ಗುಣಮಟ್ಟದ ಹಾಲು ಸಂಗ್ರಹಿಸುತ್ತಿರುವ ಹಾಲು ಉತ್ಪಾದಕ ಸಂಘಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಒಕ್ಕೂಟದ ವ್ಯಾಪ್ತಿಯ 25 ವರ್ಷ ಕಳೆದ ಹಾಲು ಸಂಘಗಳಿಗೆ ಪ್ರತ್ಯೇಕ ಸ್ವತ್ತಾಗಿ 50 ಸಾವಿರ ರೂ. ಶೇರು ಹಣವನ್ನು ಉಡುಗೊರೆ ರೂಪದಲ್ಲಿ ನೀಡುವ ಉದ್ದೇಶವಿದೆ ಎಂದು ಧಾರವಾಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಹೇಳಿದರು.

Advertisement

ಅವರು ಭಾನುವಾರ ತಾಲೂಕಿನ ಅಗಸಾಲ ಬೊಮ್ಮನಳ್ಳಿ ಹಾಲು ಉತ್ಪಾದಕರ ಸಂಘದ ‘ಬೆಳ್ಳಿ ಹಬ್ಬ’ವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಸುಮಾರು 28 ಕಂಪನಿಗಳು ಕಮರ್ಷಿಯಲ್ ಉದ್ದೇಶದಿಂದ ಹಾಲಿನ ಉತ್ಪನ್ನಗಳ ವ್ಯಾಪಾರದಲ್ಲಿ ತೊಡಗಿ ಲಾಭ ಮಾಡಿಕೊಳ್ಳುತ್ತಿವೆ. ಆದರೆ, ಕೆಎಂಎಫ್‌ ನಂತಹ ಸಹಕಾರಿ ಹಾಲು ಒಕ್ಕೂಟಗಳು ಸಹಕಾರಿ ತತ್ವದಲ್ಲಿ ಮುನ್ನಡೆಯುತ್ತಿವೆ. ಲಾಭದ ಉದ್ದೇಶವಿಲ್ಲದೇ ರೈತ ಸ್ನೇಹಿಯಾಗಿ ಹೈನುಗಾರರ ಹಿತ ಕಾಯುತ್ತಿವೆ. ಈ ವ್ಯವಸ್ಥೆ ಇನ್ನೂ ಹೆಚ್ಚಿನ ಹಳ್ಳಿಗಳಿಗೆ ತಲುಪಬೇಕು. ಹಾಲಿನ ಗುಣಮಟ್ಟ ಹೆಚ್ಚಬೇಕು, ಇದರಿಂದಷ್ಟೇ ನಾವು ಜಗತ್ತಿನ ಮಾರುಕಟ್ಟೆ ಪ್ರವೇಶಿಸಲು ಸಾಧ್ಯವಾಗಿ ಹಾಲು ಉತ್ಪಾದಕರಿಗೆ ಹೆಚ್ಚಿನ ಧಾರಣೆ ಕೊಡಿಸಲು ಸಾಧ್ಯವಾಗುತ್ತದೆ ಎಂದು ಒಕ್ಕೂಟದ ಅಧ್ಯಕ್ಷರು ಹೇಳಿದರು. ಇನ್ನು ಆರು ತಿಂಗಳೊಳಗೆ ಶಿರಸಿಯಲ್ಲೇ ಹಾಲಿನ ಪ್ರೊಸೆಸಿಂಗ್‌ ಘಟಕ ಸಿದ್ಧಗೊಳ್ಳಲಿದ್ದು, ಸಾಗಾಟದ ಖರ್ಚು ಉಳಿತಾಯವಾಗುತ್ತದೆ, ಗ್ರಾಹಕರಿಗೂ ಅನೂಕೂಲವಾಗಲಿದೆ ಎಂದರು.

ಹೈನುಗಾರಿಕೆ ಕೃಷಿಗೆ ಪೂರಕ ಉಪಕಸುಬಾಗಿದ್ದು, ರೈತರು ಹೈನುಗಾರಿಕೆಯಿಂದ ವಿಮುಖರಾಗದೇ ಮುಂದುವರೆದರೆ ನಮ್ಮ ಆರೋಗ್ಯ ಹಾಗೂ ತೋಟದ ಆರೋಗ್ಯ ಎರಡೂ ಉತ್ತಮವಾಗುವುದೆಂದು ಹೇಳಿದರು.

ಅತಿಥಿಗಳಾಗಿ ಜಿ.ಪಂ. ಸದಸ್ಯ ಜಿ.ಎನ್‌. ಹೆಗಡೆ, ಮುರೇಗಾರ ಮಾತನಾಡಿ, ಪಶು ಆಹಾರಕ್ಕೆ ಸರ್ಕಾರ ಹಾಗೂ ಒಕ್ಕೂಟವು ಶೇ.50 ಸಹಾಯಧನ ನೀಡುವಂತಾದರೆ ಮಾತ್ರ ಹೈನುಗಾರಿಕೆ ಉಳಿಯಲು ಸಾಧ್ಯ, ಸಹಾಯ ನೇರವಾಗಿ ನಮಗಲ್ಲದೆ ಪಶುಗಳಿಗೆ ತಲುಪಲು ಸಾಧ್ಯ ಎಂದರು.

Advertisement

ಒಕ್ಕೂಟದ ಈ ಭಾಗದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ ಹಾಲು ಸಂಘಗಳ ಬೆಳವಣಿಗೆ ವಿವರಿಸಿದರು. ಮಂಗಳೂರು ಒಕ್ಕೂಟದ ನಿವೃತ್ತ ಜಂಟಿ ನಿರ್ದೇಶಕ ಡಿ.ಎಸ್‌. ಹೆಗಡೆ, ಶಿರಸಿ ಇವರು ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಉತ್ಪಾದಕರ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು. ಹಿರಿಯರಾದ ವಿ.ಎನ್‌. ಹೆಗಡೆ, ಬೊಮ್ನಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿಕರು ಪಶುಪಾಲನೆ ಉಪಕಸುಬಾಗಿ ಮುಂದುವರೆಸಿದರೆ ಕೃಷಿಯಲ್ಲಿ ಲಾಭವಿದೆ, ದೂರಗಾಮಿ ಹಿತವಿದೆ ಎಂದರು.

ಬೆಳ್ಳಿ ಹಬ್ಬದಲ್ಲಿ ಸದಸ್ಯರಿಗೆ ಹಾಲುಕ್ಯಾನ್‌ ವಿತರಿಸಲಾಯಿತು. ಉಪಯುಕ್ತ ಸೇವೆಗಾಗಿ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷರುಗಳಿಗೆ ಹಾಗೂ ಮುಖ್ಯ ಕಾರ್ಯನಿರ್ವಾಹಕರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ನರಸಿಂಹ ವಿ.ಹೆಗಡೆ, ಬೊಮ್ನಳ್ಳಿ ಸ್ವಾಗತಿಸಿದರು. ಕಾರ್ಯನಿರ್ವಾಹಕ ಭಾಸ್ಕರ ಹೆಗಡೆ ವಂದಿಸಿದರು. ಚಂದನ ಹೆಗಡೆ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next