Advertisement

50 ಸಾವಿರ ರೈತರಿಗಿಲ್ಲ ಬೆಳೆ ವಿಮೆ ಹಣ

08:31 AM Sep 24, 2019 | Suhan S |

ಧಾರವಾಡ: ತೀವ್ರ ನೆರೆಹಾವಳಿ ಮತ್ತು ಅಕಾಲಿಕ ಮಳೆಯಿಂದ ಸಂಪೂರ್ಣ ಬೆಳೆನಾಶವಾಗಿ ಸಂಕಷ್ಟದಲ್ಲಿರುವ ಜಿಲ್ಲೆಯ ಅನ್ನದಾತರಿಗೆ ಬೆಳೆವಿಮೆ ಕಂಪನಿಗಳು ಮತ್ತೂಂದು ಮರ್ಮಾಘಾತ ನೀಡಿದ್ದು, ಜಿಲ್ಲೆಯ 50 ಸಾವಿರದಷ್ಟು ರೈತರನ್ನು ಅಲೆಯುವಂತೆ ಮಾಡಿಟ್ಟಿವೆ.

Advertisement

ಪ್ರತಿವರ್ಷ ತಪ್ಪದಂತೆ ಪ್ರಧಾನಮಂತ್ರಿ ಫಸಲ್‌ ಭಿಮಾ ಯೋಜನೆಅಡಿಯಲ್ಲಿ ವಿಮೆ ತುಂಬುವ ರೈತರಿಗೆ ಸಮಯಕ್ಕೆ ಸರಿಯಾಗಿ ಬೆಳೆವಿಮೆ ಪಾವತಿಯಾಗುತ್ತಿಲ್ಲ ಎನ್ನುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದೀಗ 2018ರ ಮುಂಗಾರು ಬೆಳೆ ಸಂಪೂರ್ಣ ವಿಫಲವಾಗಿದ್ದು ಜಿಲ್ಲೆಯಿಂದ 97 ಸಾವಿರ ರೈತರು ಬೆಳೆವಿಮೆ ಕಂತು ತುಂಬಿದ್ದಾರೆ. ಈ ಪೈಕಿ ಬರೀ 47 ಸಾವಿರ ರೈತರಿಗೆ ಮಾತ್ರ ಬೆಳೆವಿಮೆ ಬಂದಿದ್ದು, ಇನ್ನುಳಿದ 50 ಸಾವಿರದಷ್ಟು ರೈತರು ಬೆಳೆವಿಮೆಗೆ ಅರ್ಹರೇ ಅಲ್ಲ ಎನ್ನುವ ಘೋರ ಮಾಹಿತಿಯನ್ನು ಕೃಷಿ ಇಲಾಖೆ ಅಧಿಕಾರಿಗಳು ನೀಡುತ್ತಿದ್ದು, ಮೊದಲೇ ಬೆಳೆಹಾನಿಯಿಂದ ಕಂಗಾಲಾದ ರೈತರಿಗೆ ಮರ್ಮಾಘಾತವಾಗಿದೆ.

ನೆರೆಯಿಂದ ಬದುಕೇ ದುಸ್ತರವಾಗಿರುವ ಹೊತ್ತಿನಲ್ಲಿ ಕೊನೆಪಕ್ಷ ಅವರ ಪಾಲಿನ ಬೆಳೆವಿಮೆ ಹಣ ಸಮಯಕ್ಕೆ ಸರಿಯಾಗಿ ಬಂದರೆ ಎಷ್ಟೋ ಅನುಕೂಲವಾಗುತ್ತದೆ. ಆದರೆ ಬ್ಯಾಂಕ್‌ ಅಧಿಕಾರಿಗಳು ಮತ್ತು ವಿಮಾ ಕಂಪನಿಗಳು ರೈತರೊಂದಿಗೆ ಕಣ್ಣಾ ಮುಚ್ಚಾಲೆ ಆಟವಾಡುತ್ತಿದ್ದು ರೈತರ ಬಗ್ಗೆ ಯಾವುದೇ ಕಾಳಜಿ ತೋರಿಸದೇ ಅವರ ಜೀವನ ಜತೆ ಆಟವಾಡುತ್ತಿವೆ.

ವಿಮೆ ಬಂದದ್ದು ಎಷ್ಟು: ಜಿಲ್ಲೆಯಲ್ಲಿ 2018ರ ಮುಂಗಾರಿಗೆ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ ಅಡಿಯಲ್ಲಿ ವಿಮೆ ಕಂತು ತುಂಬಿದ್ದ 97 ಸಾವಿರ ರೈತರ ಪೈಕಿ ಬರೀ 48,840 ರೈತರಿಗೆ 114 ಕೋಟಿ ರೂ.ವಿಮೆ ಹಣ ಬಿಡುಗಡೆಯಾಗಿದೆ. ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯನ್ವಯ 2019, ಜುಲೈ ತಿಂಗಳಿನಲ್ಲಿ ಮೊದಲ ಕಂತಿನಲ್ಲಿ 52 ಕೋಟಿ ರೂ.ಮಾತ್ರ ಬಂದಿದೆ. ಆಗಸ್ಟ್‌ ತಿಂಗಳಿನಲ್ಲಿ 62 ಕೋಟಿ ರೂ. ಹಣ ಜಮಾವಣೆಯಾಗಬೇಕಿತ್ತು. ಆದರೆ ಇನ್ನೂ ಜಮಾವಣೆಯಾಗಿಲ್ಲ. ಅರ್ಹರಾದ ರೈತರ ಪೈಕಿ ಸದ್ಯ ಜಿಲ್ಲೆಯ 11,232 ರೈತರ 28 ಕೋಟಿ ರೂ. ಹಣ 3ನೇ ಕಂತಿನಲ್ಲಿ ಬಿಡುಗಡೆಯಾಗಿಲ್ಲ. ಇದನ್ನು ವಿಮಾ ಕಂಪನಿಯವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಹಾಗಾದರೆ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್‌ ಭಿಮಾ ಯೋಜನೆಗೆ ಹಣ ತುಂಬಿದ ಇನ್ನುಳಿದ ರೈತರಿಗೆ ಯಾವ ಆಧಾರದ ಮೇಲೆ ವಿಮೆ ಹಣ ತಲುಪಿಲ್ಲ ಎಂಬುದನ್ನು ಯಾರೂ ಹೇಳುತ್ತಿಲ್ಲ. ರೈತರು ಬ್ಯಾಂಕ್‌ ಅಧಿಕಾರಿಗಳನ್ನು ಕೇಳಿದರೆ ನಮಗೆ ಗೊತ್ತಿಲ್ಲ ಎನ್ನುವ ಸಿದ್ದ ಉತ್ತರ ನೀಡುತ್ತಿದ್ದಾರೆ.

Advertisement

ವಂತಿಗೆ ತುಂಬಿಸಿಕೊಳ್ಳುವಾಗ ಬ್ಯಾಂಕುಗಳು ಸರಿಯಾಗಿಯೇ ಹಣ ತುಂಬಿಸಿಕೊಂಡು ರೈತರಿಗೆ ಮಾಹಿತಿ ನೀಡುತ್ತವೆ. ಆದರೆ ವಿಮೆ ಹಣ ತಲುಪದೇ ಹೋದಾಗ ನಮಗೇನು ಗೊತ್ತಿಲ್ಲ ಎನ್ನುವ ಉತ್ತರ ನೀಡುತ್ತಿದ್ದಾರೆ.

50 ಸಾವಿರ ರೈತರಿಗಿಲ್ಲ ವಿಮೆ: ವಿಮೆ ಹಣ ತುಂಬಿ ತೀವ್ರ ಬರಗಾಲಕ್ಕೆ ತುತ್ತಾಗಿದ್ದ 97 ಸಾವಿರ ರೈತರ ಪೈಕಿ 47 ಸಾವಿರ ರೈತರು ವಿಮೆಗೆ ಅರ್ಹರಾಗಿದ್ದಾರೆ. ಇನ್ನುಳಿದ ರೈತರಿಗೆ ಬೆಳೆವಿಮೆ ಹಣ ಯಾಕೆ ಬಂದಿಲ್ಲ? ಇದಕ್ಕೆ ಕಾರಣವೇನು? ಒಂದೇ ಗ್ರಾಮದ ಅಕ್ಕಪಕ್ಕದ ಜಮೀನಿನಲ್ಲಿ ಒಬ್ಬರಿಗೆ ವಿಮೆ ಬಂದು, ಇನ್ನೊಬ್ಬರ ಬೆಳೆಹಾನಿಯಾಗಿಲ್ಲ ಎನ್ನುವ ಲೆಕ್ಕಾಚಾರ ಮಾಡಿದವರು ಯಾರು? ಎಂಬ ಹತ್ತಾರು ಪ್ರಶ್ನೆಗಳು ರೈತರನ್ನು ಕಂಗಾಲು ಮಾಡಿವೆ.

ಇದು ಪ್ರತಿ ವರ್ಷದ ಕಥೆಯಾಗುತ್ತಿದೆ. ಮೊದಲ ಕಂತಿನಲ್ಲಿ ರೈತರಿಗೆ ಬರುವ ಬೆಳೆವಿಮೆ ಹಣ ಬಂದು ಬಿಡುತ್ತದೆ. ನಂತರದವರು ಪಟ್ಟಿಯಲ್ಲಿ ಇಲ್ಲ, ಅವರಿಗೆ ಹಣ ಬಂದಿಲ್ಲ, ನಮಗೆ ಗೊತ್ತಿಲ್ಲ, ಕೃಷಿ ಅಧಿಕಾರಿಗಳನ್ನು ಕೇಳಿ ಇಂತಹ ಹತ್ತಾರು ಉತ್ತರಗಳು ರೈತರಿಗೆ ಬ್ಯಾಂಕ್‌ ಅಧಿಕಾರಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಂದ ಕೇಳಿ ಬರುತ್ತಿವೆ. ಜಿಲ್ಲೆಯ ಕೃಷಿ ಮತ್ತು ಸಹಕಾರ ಬ್ಯಾಂಕ್‌ ಅಧಿಕಾರಿಗಳು ಈ ವಿಚಾರದಲ್ಲಿ ತೀವ್ರ ನಿರ್ಲಕ್ಷ್ಯ ತೋರಿರುವ ಅಂಶ ಗೋಚರಿಸುತ್ತಿದ್ದು, ರೈತ ಸಂಘಟನೆಗಳು ಇವರ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿವೆ.

ಯಾರಿಗೆ ಎಷ್ಟು ಹಣ ಗೊಂದಲ :

2017ರ ಮುಂಗಾರಿನಲ್ಲೂ ಜಿಲ್ಲೆಯ 6 ಸಾವಿರದಷ್ಟು ರೈತರಿಗೆ ಬೆಳೆವಿಮೆ ಹಣ ಇನ್ನೂ ತಲುಪಿಯೇ ಇಲ್ಲ. ಈ ಪೈಕಿ ಕೆಲವರು ಬ್ಯಾಂಕ್‌ ಅಧಿಕಾರಿಗಳ ಮೇಲೆ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಇನ್ನು 2019ರ, ಜುಲೈ, ಆಗಸ್ಟ್‌ ತಿಂಗಳಿನಲ್ಲಿ ಪ್ರವಾಹಕ್ಕೆ ತುತ್ತಾಗಿ ಸಾಕಷ್ಟು ಬೆಳೆಹಾನಿ ಅನುಭವಿಸಿ ಸಂಕಷ್ಟದಲ್ಲಿರುವ ರೈತರಿಗೆ ಈವರೆಗೂ ಬೆಳೆಹಾನಿ ಕೂಡ ಬಂದಿಲ್ಲ. ಜಿಲ್ಲಾಡಳಿತ ಅಂದಾಜು ಸಮೀಕ್ಷೆ ಮಾಡಿಸರ್ಕಾರಕ್ಕೆ ವರದಿ ಕೊಟ್ಟಿದೆ. ಆದರೆ ಗ್ರಾಮಗಳ ಸರ್ವೇ ನಂಬರ್‌ ಆಧರಿಸಿ ಬೆಳೆಹಾನಿ ಸಮೀಕ್ಷೆ ಇನ್ನೂ ಮಾಡಿಲ್ಲ. ಹೀಗಾಗಿ ಬೆಳೆಹಾನಿ ಹಣ ಇನ್ನೂ ಬಂದಿಲ್ಲ. ಒಂದು ವೇಳೆ ಬಂದರೆ ಯಾವ ಆಧಾರ ಮೇಲೆ ಯಾರಿಗೆ ಎಷ್ಟು ಹಣ ಕೊಡುತ್ತಾರೆಂಬ ವಿಚಾರ ತೀವ್ರ ಗೊಂದಲಕ್ಕೆ ಈಡಾಗಿದೆ.

ಹಣ ತುಂಬಿಸಿಕೊಳ್ಳುವಾಗ ಬ್ಯಾಂಕ್‌ ಅಧಿಕಾರಿಗಳು ನಗುತ್ತಲೇ ರೈತರಿಂದ ಹಣ ಕಟ್ಟಿಸಿಕೊಳ್ಳುತ್ತಾರೆ. ಆದರೆ ವಿಮೆಹಣ ಬರಗಾಲಕ್ಕೆ ತುತ್ತಾದ ನಮ್ಮಂತಹ ರೈತರಿಗೆ ತಲುಪಿಯೇ ಇಲ್ಲ ಎಂದರೆ ಹೇಗೆ? ಮೊದಲೇ ಈ ವರ್ಷ ಬೆಳೆಹಾನಿಯಾಗಿದ್ದು, ರೈತರಿಗೆ ಹಣ ಕೊಡದೇ ಹೋದರೆ ನಮ್ಮನ್ನ ಕಾಯುವವರು ಯಾರು? -ಬಸವನಗೌಡ ಪಾಟೀಲ, ಹುಲಕೊಪ್ಪ ರೈತ ಮುಖಂಡ

 

-ಬಸವರಾಜ ಹೊಂಗಲ್

Advertisement

Udayavani is now on Telegram. Click here to join our channel and stay updated with the latest news.

Next