ಸುರಪುರ: ಕನ್ನಡ ಸಾಹಿತ್ಯ ಪರಿಷತನಲ್ಲಿ ಒಟ್ಟು 3.8 ಲಕ್ಷ ಮತದಾರಿದ್ದಾರೆ. ಈ ಪೈಕಿ ಅಂದಾಜು 50 ಸಾವಿರ ಮತದಾರರು ಮೃತಪಟ್ಟಿದ್ದಾರೆ. ಈ ಮತದಾರರನ್ನು ಮತಪಟ್ಟಿಯಿಂದ ಇದುವರೆಗೂ ತೆಗೆದು ಹಾಕಿಲ್ಲ. ಸ್ಪರ್ಧೆಗೆ ಇಳಿಯುವ ಪ್ರಭಾವಿಗಳು ಈ ಮೃತದಾರರ ಮತ ಚಲಾಯಿಸಿ ಗೆಲುವು ಸಾಧಿಸುತ್ತಿದ್ದಾರೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡಾ| ಸರಸ್ವತಿ ಚಿಮ್ಮಲಗಿ ಗಂಭೀರ ಆರೋಪ ಮಾಡಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಸಿದ್ದೆ. ಆ ಸಂದರ್ಭದಲ್ಲಿ ಮೃತ ಮತದಾರರ ಮತಗಳ ಚಲಾವಣೆಯಾದವು. ಹೀಗಾಗಿ ನಾನು ಕೇವಲ 4 ಮತಗಳಿಂದ ಪರಾಭವಗೊಂಡಿದ್ದೆ. ಮೃತರ ಹೆಸರು ತೆಗೆದು ಹಾಕುವಂತೆ ಅವಾಗಿನಿಂದಲೂ ಒತ್ತಾಯಿಸುತ್ತಿದ್ದೇನೆ. ಆದರೆ ಪರಿಷತ್ ಈ ಕೆಲಸ ಮಾಡಿಲ್ಲ. ಈ ಬಾರಿಯೂ ಅದೇ ಪ್ರವೃತ್ತಿ ನಡೆದು ಹೋದರು ಅಚ್ಚರಿ ಪಡಬೇಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದುವರೆಗೂ ಅಧಿಕಾರಕ್ಕೆ ಬಂದವರು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಿಸುವಲ್ಲಿ ನಿರ್ಲಕ್ಷ ತೋರಿದ್ದಾರೆ. ಹೀಗಾಗಿ ಕನ್ನಡಿಗರು ನಿರುದ್ಯೋಗಿಗಳಾಗುತ್ತಿದ್ದಾರೆ. ಅಧಿಕಾರಕ್ಕೆ ಬಂದಲ್ಲಿ ಸರಕಾರದ ಮೇಲೆ ಒತ್ತಡ ತಂದು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಮತ್ತು ಮೃತರ ಹೆಸರು ತೆಗೆದು ಹಾಕಿಸುವ ಕೆಲಸ ಮಾಡುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಚುನಾವಣೆಯಲ್ಲಿ 20 ಜನ ಪುರುಷ ಸ್ಪರ್ಧಿಗಳಿದ್ದಾರೆ. ಇಷ್ಟೊಂದು ಪುರುಷರಿಗೆ ನಾನೊಬ್ಬಳೆ ಟಕ್ಕರ್ ಕೊಡುತ್ತಿದ್ದೇನೆ. ರಾಜ್ಯಾದ್ಯಂತ ಸಂಚರಿಸಿದ್ದೇನೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರಿಷತ್‌ನಲ್ಲಿ ಇದುವರೆಗೂ ಮಹಿಳೆಯರಿಗೆ ಆದ್ಯತೆ ಸಿಕ್ಕಿಲ್ಲ. ನಾನು ಗೆದ್ದು ಬಂದಲ್ಲಿ ನಾಡು-ನುಡಿಯ ಸೇವೆ ಮಾಡಿರುವವರನ್ನು ಮತ್ತು ಸಂಘ-ಸಂಸ್ಥೆಗಳನ್ನು ಗುರುತಿಸಿ ಅವರಿಗೆ ಸೂಕ್ತ ನ್ಯಾಯ ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಕನ್ನಡ ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಬೂದಿಹಾಳ, ಪ್ರಮುಖರಾದ ಮಲ್ಲಿಕಾರ್ಜುನ ಸತ್ಯಂಪೇಟ, ಸೂಗೂರೇಶ ವಾರದ, ಪ್ರಕಾಶ ಅಂಗಡಿ, ಸೋಮಶೇಖರ ಶಾಬಾದಿ, ಮುದ್ದಪ್ಪ ಅಪ್ಪಾಗೋಳ, ಪ್ರಕಾಶ ಅಲಬನೂರ, ಗೋವಿಂದರಾಜ ಶಹಾಪುರಕರ್ ಇದ್ದರು.