Advertisement

50 ಸಾವಿರ ಕೋಟಿ ನೆರೆ ಪರಿಹಾರ ಘೋಷಣೆಗೆ ಆಗ್ರಹ

03:04 PM Aug 10, 2019 | Team Udayavani |

ರಾಮನಗರ: ನೆರೆ ಹಾವಳಿಗೆ ರಾಜ್ಯ ನಲುಗಿದ್ದು, ನವ ಕರ್ನಾಟಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 50 ಸಾವಿರ ಕೋಟಿ ರೂ. ಪರಿಹಾರ ಒದಗಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಆಗ್ರಹಿಸಿದರು.

Advertisement

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ತಮ್ಮ ಸಂಘಟನೆಯ ಮೂಲಕ ನಡೆದ ನೀರು ತುಂಬಿದ ಹಂಡೆಗಳ ಚಳವಳಿಯಲ್ಲಿ ಮಾತನಾಡಿ, ಇದುವರೆವಿಗೂ ನೀರಿಗಾಗಿ ಖಾಲಿ ಕೊಡಗಳ ನೂರಾರು ಚಳವಳಿ ನಡೆಸಿದ್ದೇವೆ. ಇದೇ ಮೊದಲ ಬಾರಿಗೆ ನೀರು ತುಂಬಿದ ಹಂಡೆಗಳ ಚಳವಳಿ ನಡೆಸುತ್ತಿರುವುದಾಗಿ ತಿಳಿಸಿದರು.

ಗ್ರಾಮಗಳು ನೀರಿನಿಂದ ಆವೃತ: ರಾಜ್ಯದ ಇತಿಹಾಸದಲ್ಲಿ ಹಿಂದೆಂದು ಕಾಣದಂತ ಜಲಪ್ರಳಯವಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಇದೆ. ನೂರಾರು ಕುಟುಂಬಗಳು ನೆರೆಯಲ್ಲಿ ಸಿಲುಕಿದ್ದಾರೆ. ರಸ್ತೆ, ಗ್ರಾಮಗಳಲೆಲ್ಲ ನೀರಿನಿಂದ ಆವೃತವಾಗಿವೆ. ಸೇತುವೆಗಳು ಮುಳುಗಿ ಹೋಗಿವೆ. ಎಲ್ಲಿ ನೋಡಿದರು ನೀರು, ಅನೇಕರು ದಾರಿ ಕಾಣದೆ ಪರಿತಪಿಸುತ್ತಿದ್ದಾರೆ. ತಕ್ಷಣ ಸಮರೋಪಾದಿಯಲ್ಲಿ ನೆರವು ನೀಡಬೇಕಾಗಿದೆ ಎಂದು ಆಗ್ರಹಿಸಿದರು.

ಕೊಡಗಿನ ಪರಿಸ್ಥಿತಿ ಚಿಂತಾಜನಕ: ಕೃಷ್ಣ, ಭೀಮ, ಕಾಳಿ ನದಿಗಳಲ್ಲದೆ, ರಾಜ್ಯದ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ಕೊಡಗಿನ ಪರಿಸ್ಥಿತಿ ಚಿಂತಾಜನಕವಾಗುತ್ತಿದೆ. ನೂರಾರು ದನ, ಕರುಗಳು ನೀರಿನಲ್ಲಿ ಕೊಚ್ಚಿಹೋಗಿವೆ. 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾವಳಿಯಲ್ಲಿ ಜೀವ ಕಳೆದುಕೊಂಡವರಿಗೆ ತಲಾ 25 ಲಕ್ಷ ರೂ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಮಂತ್ರಿ ಮಂಡಳ ರಚನೆಯಾಗಲಿ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಬ್ಬರೇ ಎಲ್ಲವನ್ನು ನಡೆಸಲು ಸಾಧ್ಯವಿಲ್ಲ. ಹೀಗಾಗಿ ಮಂತ್ರಿ ಮಂಡಳ ರಚನೆಯಾದರೆ ರಾಜ್ಯದ ಆಡಳಿತ ಸುಗಮವಾಗುತ್ತದೆ. ಆಯಾ ಕ್ಷೇತ್ರಗಳ ಶಾಸಕರು ತಕ್ಷಣ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ತೀವ್ರವಾದ ಕಾಳಜಿವಹಿಸಬೇಕು. ರಾಜಕೀಯ ಬಿಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಹೇಳಿದರು.

Advertisement

ಸಿಎಂ ಬಿಎಸ್‌ವೈ ರಾವಣನಲ್ಲ: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಮಂತ್ರಿ ಮಂಡಳದ ಅವಶ್ಯವಿದೆ. ಸಿಎಂ ಬಿಎಸ್‌ವೈ ರಾವಣನಲ್ಲ, ಅವರಿಗೆ 10 ತಲೆ, 20 ಕೈಗಳು ಇಲ್ಲ. ಹೀಗಾಗಿ ಅವರೊಬ್ಬರೆ ಆಡಳಿತ ನಡೆಸಲು ಸಾಧ್ಯವಿಲ್ಲ. ತಕ್ಷಣ ಮಂತ್ರಿ ಮಂಡಳ ರಚನೆಯಾಗಬೇಕು. ಬಿ.ಎಸ್‌.ವೈ ರಾಮನ ಭಕ್ತ ಹೀಗಾಗಿ ಅವರು ರಾವಣನಾಗುವುದು ಸಾಧ್ಯವೂ ಇಲ್ಲ ಎಂದು ತಿಳಿಸಿದರು.

ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿ: ಪ್ರವಾಹದ ಗಂಭಿರತೆಯನ್ನು ಅರಿತು ನಾಡಿನ ಜನತೆ ಸ್ಪಂದಿಸಬೇಕು. ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಜನ ದೇಣಿಗೆ ನೀಡಿ ಸಹಕರಿಸಬೇಕು. ಕನಿಷ್ಠ 20 ಸಾವಿರ ಕೋಟಿ ರೂ. ಅಗತ್ಯವಿದೆ. ಹೀಗಾಗಿ ರಾಜ್ಯದ ಜನತೆ ಧಾರಾಳವಾಗಿ ಕೊಡುಗೆ ನೀಡಬೇಕು ಎಂದರು.

ಪ್ರತಿಭಟನೆಯಲ್ಲಿ ಜಗದೀಶ್‌, ಗಾಯತ್ರಿ ದೇವಿ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next